ಬೆಂಗಳೂರು (ಡಿ.03):  ಕೋವಿಡ್‌-19 ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ 2019-20ನೇ ಸಾಲಿನ ಹೊಸ ಪಡಿತರ ಚೀಟಿಗಳನ್ನು ಈ ತಿಂಗಳ ಮೂರನೇ ವಾರದಿಂದ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉದ್ದೇಶಿಸಿದೆ.

ಕಳೆದ ವರ್ಷ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರದ ಗರೀಬ್‌ ಕಲ್ಯಾಣ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗಿತ್ತು. ಜೂನ್‌ ಅಂತ್ಯಕ್ಕೆ ಈ ಯೋಜನೆ ಮುಕ್ತಾಯವಾಗಿದ್ದು ಇದೀಗ ಬಡ ಕುಟುಂಬಗಳಿಗೆ ಪಡಿತರ ಚೀಟಿ ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಬಾಕಿ ಉಳಿದಿರುವ 1,74,807 ಅರ್ಜಿದಾರ ಕುಟುಂಬಗಳಿಗೆ ಶೀಘ್ರವೇ ಪಡಿತರ ಚೀಟಿ ಒದಗಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಲಾಗುತ್ತಿದೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

BPL ಕಾರ್ಡ್ ವಾಪಸ್ ಮಾಡದಿದ್ರೆ ಕ್ರಿಮಿನಲ್‌ ಕೇಸ್‌

ಈಗಾಗಲೇ ಹಲವು ಪಡಿತರ ಚೀಟಿಗಳಿಗೆ ಅನುಮೋದನೆ ದೊರೆತಿದ್ದು ಮುದ್ರಣವಷ್ಟೇ ಬಾಕಿ ಇದೆ. ಈ ಹಿಂದೆ ಪಡಿತರ ಚೀಟಿ ಮುದ್ರಿಸುತ್ತಿದ್ದ ಮುದ್ರಣಾಲಯದ ಗುತ್ತಿಗೆ ಅವಧಿ ಮುಗಿದಿದ್ದು, ಡಿಸೆಂಬರ್‌ ಮೊದಲ ವಾರದಲ್ಲಿ ಹೊಸ ಗುತ್ತಿಗೆ ಪೂರ್ಣಗೊಳ್ಳಲಿದೆ. ಬಳಿಕ ಬಾಕಿ ಇರುವ ಪಡಿತರ ಚೀಟಿಗಳು ಮುದ್ರಿಸಲ್ಪಡಲಿವೆ ಎಂದು ಇಲಾಖೆ ಆಯುಕ್ತೆ ಡಾ.ಶಮ್ಲಾ ಇಕ್ಬಾಲ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬಿಪಿಎಲ್‌ ಕೋರಿ 82 ಸಾವಿರ ಅರ್ಜಿ:  ಕಳೆದ 2017ರಿಂದ 2019-20ರವರೆಗೆ ಬಿಪಿಎಲ್‌ ಕಾರ್ಡುಗಳು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು 82,448 ಮತ್ತು ಎಪಿಎಲ್‌ 92,359 ಬಾಕಿ ಇವೆ. ಬೆಂಗಳೂರು ಪೂರ್ವ- 9326, ಬೆಂಗಳೂರು-8443, ಬೆಂಗಳೂರು ಪಶ್ಚಿಮ-7541, ಕಲಬುರಗಿ-6772, ಶಿವಮೊಗ್ಗ- 3825, ಬೆಳಗಾವಿ-3469, ಬೀದರ್‌-3082, ಕೊಡಗು-2949, ಮೈಸೂರು-2842 ಸೇರಿದಂತೆ 34 ಜಿಲ್ಲೆಗಳಿಂದ ಒಟ್ಟು 82,448 ಬಿಪಿಎಲ್‌ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. 2017ರಿಂದ ಈವರೆಗೆ 36,41,299 ಅರ್ಜಿಗಳು ಸಲ್ಲಿಕೆಯಾಗಿದ್ದು 26,84,857 ಅರ್ಜಿಗಳಿಗೆ ಅನುಮೋದನೆ ಸಿಕ್ಕಿದ್ದು 35,58,851 ಅರ್ಜಿಗಳು ವಿಲೇವಾರಿಯಾಗಿದೆ. 8,73,994 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಇಲಾಖೆ ತಿಳಿಸಿದೆ.

ಈಗಾಗಲೇ ಇಲಾಖೆಗೆ ಆನ್‌ಲೈನ್‌ ಮೂಲಕ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡಲಾಗುವುದು. ಕೊರೋನಾ ಸೋಂಕು ಇಳಿಕೆಯಾದ ಬಳಿಕ ಹೊಸ ಅರ್ಜಿಗಳ ಆಹ್ವಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
 
ರಾಜ್ಯದ ಹಲವೆಡೆ ಕೊರೋನಾ ಸೋಂಕು ಕಡಿಮೆಯಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ದಿನದ ವರದಿಯಲ್ಲಿ ಏರಿಳಿತವಾಗುತ್ತಿದೆ. ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು 15 ದಿನಗಳೊಳಗೆ ಆರಂಭಿಸಲು ಯೋಜಿಸಲಾಗಿದೆ.

- ಕೆ.ಗೋಪಾಲಯ್ಯ, ಸಚಿವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ