BPL ಕಾರ್ಡ್ ವಾಪಸ್ ಮಾಡದಿದ್ರೆ ಕ್ರಿಮಿನಲ್ ಕೇಸ್
ರೇಷನ್ ಕಾರ್ಡ್ ಹೊಂದಿರುವವರು ಇಲ್ಲೊಮ್ಮೆ ಗಮನಿಸಿ. ಜಿಲ್ಲಾಧಿಕಾರಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಎಚ್ಚರ !
ದಾವಣಗೆರೆ (ಮಾ.07): ಅನರ್ಹರು ತಾವು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ವಾಪಾಸ್ಸು ನೀಡಿ ಕಾನೂನು ಕ್ರಮದಿಂದ ವಿಮುಕ್ತಿ ಹೊಂದಲು ಅವಕಾಶ ನೀಡಿದ್ದು, ತಾವೇ ಸ್ವತಃ ಬಿಪಿಎಲ್ ಕಾರ್ಡ್ ಮರಳಿಸುವ ಅನರ್ಹರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದ್ದಾರೆ.
ನಿಗದಿತ ದಿನಾಂಕದೊಳಗೆ ತಾವು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹರೂ ಆಯಾ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರ್, ಆಹಾರ ನೀರೀಕ್ಷಕರನ್ನು ಸಂಪರ್ಕಿಸಿ, ತಾವು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ವರ್ಗಕ್ಕಾಗಲೀ ಅಥವಾ ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
'ದುರ್ಬಳಕೆಯಾದ BPL ಕಾರ್ಡ್ ಮರಳಿಸದಿದ್ದರೆ ದಂಡ ಕಟ್ಟಿ'..
ಹೀಗೆ ತಾವೇ ಸ್ವತಃ ಪಡಿತರ ಚೀಟಿಗಳನ್ನು ಹಿಂತಿರುಗಿಸುವಂತಹ ಅನರ್ಹರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ. ಅವಧಿ ಮುಗಿದ ನಂತರ ಇಲಾಖೆಯೇ ಕಾರ್ಯಾಚರಣೆ ನಡೆಸಿ ಅನರ್ಹರು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿ ಪತ್ತೆ ಹಚ್ಚಿದಾಗ, ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾದರೆ ಅಂತಹ ಕುಟುಂಬದ ವಿರುದ್ದ ಕ್ರಮ ನಿಶ್ಚಿತ ಎಂದಿದ್ದಾರೆ.
ಅಲ್ಲದೇ, ಅನರ್ಹರು ಪಡಿತರ ಚೀಟಿಗಳನ್ನು ಹೊಂದಿದ ದಿನಾಂಕದಿಂದ ಪತ್ತೆ ಹಚ್ಚಿದ ದಿನಾಂಕದವರೆವಿಗೆ ಪಡೆದ ಪಡಿತರ ಪದಾರ್ಥಗಳವಾರು ಪ್ರತಿ ಕೆಜಿಗೆ ಮುಕ್ತ ಮಾರುಕಟ್ಟೆಯ ಬೆಲೆಯ ಅನುಸಾರ ಹಣ ವಸೂಲಿ ಮಾಡಲಾಗುವುದು. ಜೊತೆಗೆ ದಿ ಕರ್ನಾಟಕ ಪ್ರಿವೆನ್ಷನ್ ಆಫ್ ಅನ್‌ಅಥರೈಜ್ಡ್ ಪೊಸಿಷನ್ ಆಫ್ ರೇಷನ್ ಕಾರ್ಡ್ ಆರ್ಡರ್ 1977ರ ರೀತ್ಯಾ ಕ್ರಮವಹಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಸರ್ಕಾರಿ ನೌಕರರು, ವೇತನ ಗಣನೆಗೆ ತೆಗೆದುಕೊಳ್ಳದೇ, ಎಲ್ಲಾ ಖಾಸಗಿ ನೌಕರರು, ಸರ್ಕಾರಿ ಅನುದಾನಿತ ನೌಕರರು, ನಿಗಮ, ಮಂಡಳಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಹೊಂದಿರುವುದು ಕಾನೂನು ಬಾಹಿರ ಕ್ರಮವಾಗಿರುತ್ತದೆ ಎಂದು ಡಿಸಿ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಹಾಗೂ ನಗರ ಪ್ರದೇಶದಲ್ಲಿ 1000 ಚ.ಅಡಿಗಳಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬ ಹಾಗೂ ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ, ಇತ್ಯಾದಿಗಳನ್ನು ಹೊಂದಿರುವ ಕುಟುಂಬ ಹೊರತು ಪಡಿಸಿ 4 ಚಕ್ರದ ವಾಹನ ಹೊಂದಿರುವ ಕುಟುಂಬ ಹಾಗೂ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಗಳಿಗಿಂತ ಹೆಚ್ಚಿರುವ ಕುಟುಂಬ ಮತ್ತು ಒಂದೇ ಕುಟುಂಬದಲ್ಲಿದ್ದರೂ, ಒಟ್ಟಿಗೆ ವಾಸಿಸುತ್ತಿದ್ದರೂ ಪ್ರತ್ಯೇಕ ಪಡಿತರ ಚೀಟಿ ಹೊಂದಿರುವ ಕುಟುಂಬ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವುದು ಕಾನೂನು ಬಾಹಿರ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅನರ್ಹರು ತಾವು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಿ ಕಾನೂನು ಕ್ರಮದಿಂದ ವಿಮುಕ್ತಿ ಹೊಂದುವಂತೆ ತಿಳಿಸಿದ್ದಾರೆ.
ತಾವೇ ಸ್ವತಃ ಪಡಿತರ ಚೀಟಿ ಹಿಂತಿರುಗಿಸುವಂತಹ ಅನರ್ಹರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ. ಅವಧಿ ಮುಗಿದ ನಂತರ ಇಲಾಖೆಯೇ ಕಾರ್ಯಾಚರಣೆ ನಡೆಸಿ ಅನರ್ಹರು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿ ಪತ್ತೆ ಹಚ್ಚಿದಾಗ, ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾದರೆ ಅಂತಹ ಕುಟುಂಬದ ವಿರುದ್ದ ಕ್ರಮ ನಿಶ್ಚಿತ.
- ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"