*   ಬೆಂಗಳೂರು ಬಳಿ ಗುಪ್ತಚರ ದಳದ ನ್ಯಾಟ್‌ ಗ್ರಿಡ್‌ ಉದ್ಘಾಟಿಸಿ ಅಮಿತ್‌ ಶಾ ಹೇಳಿಕೆ*   ಹವಾಲಾ, ಭಯೋತ್ಪಾದನೆ, ಕಳ್ಳನೋಟು, ಡ್ರಗ್ಸ್‌ ದಂಧೆಕೋರರ ದತ್ತಾಂಶ ಒಂದೇ ಕಡೆ ಸಂಗ್ರಹ*  ಭದ್ರತಾ ಅಗತ್ಯತೆಗಳು ಗಮನಾರ್ಹವಾಗಿ ಬದಲಾವಣೆ 

ಬೆಂಗಳೂರು(ಮೇ.04): ಹವಾಲಾ ವಹಿವಾಟು, ಭಯೋತ್ಪಾದನೆಗೆ(Terrorism) ಹಣಕಾಸು, ನಕಲಿ ಕರೆನ್ಸಿ, ಮಾದಕ ದ್ರವ್ಯ, ಬಾಂಬ್‌ ಬೆದರಿಕೆಗಳು, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು(Central Government) ಶೀಘ್ರದಲ್ಲಿಯೇ ರಾಷ್ಟ್ರೀಯ ಡೇಟಾಬೇಸ್‌(National Database) ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ತಿಳಿಸಿದ್ದಾರೆ.

ಮಂಗಳವಾರ ನಗರದ ಯಲಹಂಕ ಬಳಿಯ ಸಾತನೂರಿನಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಗುಪ್ತಚರ ಗ್ರಿಡ್‌ (ಎನ್‌ಎಟಿ ಗ್ರಿಡ್‌) ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡೇಟಾ, ವ್ಯಾಪ್ತಿ ಮತ್ತು ಸಂಕೀರ್ಣತೆಯ ವಿಷಯದಲ್ಲಿ ಹಿಂದಿನ ಭದ್ರತಾ ಸವಾಲುಗಳಿಗೆ ಹೋಲಿಸಿದರೆ ಈಗ ಭದ್ರತಾ ಅಗತ್ಯತೆಗಳು ಗಮನಾರ್ಹವಾಗಿ ಬದಲಾಗಿವೆ. ಆದ್ದರಿಂದ ವಿಶ್ವಾಸಾರ್ಹ ಮೂಲಗಳಿಂದ ಪಡೆದ ಮಾಹಿತಿಗೆ ಸ್ವಯಂಚಾಲಿತ, ಸುರಕ್ಷಿತ ಮತ್ತು ತಕ್ಷಣದ ಪ್ರವೇಶವನ್ನು ಹೊಂದಲು ಕಾನೂನು ಮತ್ತು ಭದ್ರತಾ ಸಂಸ್ಥೆಗಳ ಅವಶ್ಯಕತೆ ಇದೆ. ಡೇಟಾ ಸಂಗ್ರಹಣಾ ಸಂಸ್ಥೆಗಳಿಂದ ಮಾಹಿತಿಯನ್ನು ಪ್ರವೇಶಿಸಲು ಅತ್ಯಾಧುನಿಕ ಮತ್ತು ನವೀನ ಮಾಹಿತಿ ತಂತ್ರಜ್ಞಾನ ವೇದಿಕೆಯನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಕಾರ್ಯವನ್ನು ರಾಷ್ಟ್ರೀಯ ಗುಪ್ತಚರ ಗ್ರಿಡ್‌ಗೆ(National Intelligence Grid) ವಹಿಸಿದೆ ಎಂದು ಹೇಳಿದರು.

ಎನ್‌ಇಪಿಯಿಂದ ಭಾರತ ಸೂಪರ್‌ ಪವರ್‌: ಅಮಿತ್‌ ಶಾ

ಹವಾಲಾ ವಹಿವಾಟು, ಭಯೋತ್ಪಾದನೆಗೆ ಹಣಕಾಸು, ನಕಲಿ ಕರೆನ್ಸಿ, ಮಾದಕ ದ್ರವ್ಯ, ಬಾಂಬ್‌ ಬೆದರಿಕೆಗಳು, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ರಾಷ್ಟ್ರೀಯ ಡೇಟಾಬೇಸ್‌ ಅಭಿವೃದ್ಧಿಪಡಿಸಲಿದೆ. ನಿರ್ಣಾಯಕ ದತ್ತಾಂಶಗಳ ಅಡೆತಡೆಗಳನ್ನು ಈಗ ನಿವಾರಿಸಲಾಗುತ್ತಿರುವುದರಿಂದ ಗುಪ್ತಚರ ಮತ್ತು ಕಾನೂನು ಸಂಸ್ಥೆಗಳು ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಡೇಟಾ ಅನಾಲಿಟಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನದ ಸಹಾಯದಿಂದ, ಏಜೆನ್ಸಿಗಳ ಪ್ರಸ್ತುತ ಕಾರ್ಯ ವಿಧಾನದಲ್ಲಿ ಒಂದು ಮಾದರಿ ಬದಲಾವಣೆಯಾಗಬೇಕು. ಡೇಟಾದ ವಿವಿಧ ಮೂಲಗಳನ್ನು ಜೋಡಿಸುವ ಜವಾಬ್ದಾರಿಯನ್ನು ಎನ್‌ಎಟಿ ಗ್ರಿಡ್‌ ಪೂರೈಸಲಿದೆ ಎಂದು ಆಶ್ವಾಸನೆ ವ್ಯಕ್ತಪಡಿಸಿದರು.

ಎನ್‌ಎಟಿ ಗ್ರಿಡ್‌ ನಿರಂತರ ಉನ್ನತೀಕರಣಕ್ಕಾಗಿ ಅಂತರ್‌ನಿರ್ಮಿತ ಕಾರ್ಯವಿಧಾನವನ್ನು ಹೊಂದಿರಬೇಕು. ಎನ್‌ಎಟಿ ಗ್ರಿಡ್‌ನಲ್ಲಿ ದೇಶದೊಳಗೆ ನಡೆದಿರುವ ವಿವಿಧ ಅಪರಾಧಗಳ ಕಾರ್ಯಾಚರಣೆ ವಿಧಾನಗಳ ಡೇಟಾಬೇಸ್‌ ರಚಿಸಲು ಒಂದು ಅಧ್ಯಯನ ತಂಡ ಇರಬೇಕು. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಸ್ವಾವಲಂಬಿ ಭಾರತದ ದೃಷ್ಟಿಗೆ ಅನುಗುಣವಾಗಿ ಎನ್‌ಎಟಿಗ್ರಿಡ್‌ ಅನ್ನು ಸಿ-ಡಿಎಸಿ ಜಾರಿಗೊಳಿಸುತ್ತಿದೆ. ತ್ವರಿತ ಮತ್ತು ಪರಿಣಾಮಕಾರಿ ವಿಶ್ಲೇಷಣೆ ನಡೆಯಬೇಕಾದರೆ ಮಾಹಿತಿಯನ್ನು ಹುದುಗಿಸಿ ಇಡಬಾರದು. ಏಕೆಂದರೆ ಇದು ಮಾಹಿತಿಯ ವಿಶ್ಲೇಷಣೆ ಮತ್ತು ಸಮಯೋಚಿತ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಮಾಹಿತಿಯ ವಿಶ್ಲೇಷಣೆಗಾಗಿ ಪ್ರವೇಶಿಸಬಹುದಾದ, ಕೈಗೆಟುಕುವ, ಲಭ್ಯವಿರುವ, ಜವಾಬ್ದಾರಿಯುತ ಮತ್ತು ಕಾರ್ಯಸಾಧ್ಯವಾದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಪೊಲೀಸ್‌ ಮಹಾನಿರ್ದೇಶಕರ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಪೊಲೀಸ್‌ ತಂತ್ರಜ್ಞಾನ ಮಿಷನ್‌ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದು ಪ್ರಕಟಿಸಿದರು.

Amit shah Visit ನೀವು ಆಡಳಿತ ನಡೆಸಿ ಉಳಿದಿದ್ದು ನಮಗೆ ಬಿಡಿ,ಬೊಮ್ಮಾಯಿಗೆ ಶಾ ಸಂದೇಶ!

ಎನ್‌ಎಟಿ ಗ್ರಿಡ್‌ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಗ್ರಿಡ್‌ ಸಿಬ್ಬಂದಿ ಪ್ರಯತ್ನಗಳನ್ನು ಹೆಚ್ಚಿಸಬೇಕು. ಎನ್‌ಎಟಿ ಗ್ರಿಡ್‌ ಗುಪ್ತಚರ ಇಲಾಖೆಗಳಿಗೆ ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ ಮತ್ತು ಭಯೋತ್ಪಾದಕ ಸಂಘಟನೆಗಳು ಹಾಗೂ ಅವರ ಬೆಂಬಲಿಗರ ವಿರುದ್ಧದ ಹೋರಾಟದಲ್ಲಿ ಅವರಿಗೆ ಅತ್ಯಾಧುನಿಕ ಸಾಧನಗಳನ್ನು ಒದಗಿಸುತ್ತದೆ ಎಂದು ಗ್ರಿಡ್‌ ಸಿಬ್ಬಂದಿಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸೂಕ್ತ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕಾದ ಈ ವ್ಯವಸ್ಥೆಯ ಬಳಕೆಯಲ್ಲಿ ಎಚ್ಚರಿಕೆ ಮತ್ತು ವಿವೇಚನೆ ಇರಬೇಕು. ಡೇಟಾದ ಗೋಪ್ಯತೆ ಮತ್ತು ಸುರಕ್ಷತೆಯು ಅತ್ಯಂತ ಗಂಭೀರವಾದ ವಿಷಯವಾಗಿದೆ. ಯಾವುದೇ ಸಮಯದಲ್ಲಿ ಈ ವ್ಯವಸ್ಥೆಯ ಮೂಲಕ ಯಾವುದೇ ನಾಗರಿಕರ ವೈಯಕ್ತಿಕ ಡೇಟಾಗೆ ಅನಧಿಕೃತ ಪ್ರವೇಶ ಇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಶಿಷ್ಟಾಚಾರಗಳನ್ನು ಜಾರಿಗೆ ತರಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್‌ ಜೋಶಿ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್‌ ಪ್ರಮಾಣಿಕ್‌, ಗೃಹ ಸಚಿವ ಆರಗ ಜ್ಞಾನೇಂದ್ರ ಇತರರು ಉಪಸ್ಥಿತರಿದ್ದರು.