Asianet Suvarna News Asianet Suvarna News

ಸಂಪುಟ ವಿಸ್ತರಣೆಗೂ ಮೊದಲೇ ವಿವಿಧ ಇಲಾಖೆ ಅಧಿಕಾರಿಗಳು ಬದಲು

ಶೀಘ್ರ ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆಗಳು ಆಗಲಿದೆ. ಹಲವು ಇಲಾಖೆಗಳಲ್ಲಿ ಅಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗಂಭೀರ ಚಿಂತನೆ ನಡೆಸಿದ್ದಾರೆ.  

Soon Major Reshuffle in Karnataka Govt
Author
Bengaluru, First Published Dec 24, 2019, 10:38 AM IST

ಬೆಂಗಳೂರು [ಡಿ.24]:  ಸಚಿವ ಸಂಪುಟ ವಿಸ್ತರಣೆಗೂ ಮುಂಚೆ ಸರ್ಕಾರದ ವಿವಿಧ ಇಲಾಖೆಗಳ ಆಯಕಟ್ಟಿನ ಅಧಿಕಾರಿಗಳನ್ನು ಬದಲಾವಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗಂಭೀರ ಚಿಂತನೆ ನಡೆಸಿದ್ದಾರೆ.

ಉಪಚುನಾವಣೆ ಮುಗಿದು ಬಿಜೆಪಿ ಸರ್ಕಾರ ಸುಭದ್ರವಾಗುತ್ತಿದ್ದಂತೆಯೇ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನು ಬದಲಾಯಿಸುವ ಬಗ್ಗೆ ತಮ್ಮ ಆಪ್ತವಲಯದೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣವೇ ಎಗ್ಗಿಲ್ಲದೆ ಅಧಿಕಾರಿಗಳ ವರ್ಗಾವಣೆ ಮಾಡಿದ್ದರಿಂದ ಟೀಕೆ ಕೇಳಿಬಂದಿತ್ತು. ಪಕ್ಷದ ವರಿಷ್ಠರ ಕಿವಿಗೂ ಈ ವಿಷಯ ತಲುಪಿತ್ತು. ಹೀಗಾಗಿ, ಈಗ ಅಧಿಕಾರಿಗಳ ವರ್ಗಾವಣೆಗೂ ಮೊದಲು ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ದೆಹಲಿಗೆ ತೆರಳಿದ ವೇಳೆ ಪ್ರಸ್ತಾಪ ಮಾಡುವ ಸಂಭವವೂ ಇದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸಂಕ್ರಾಂತಿ ಬೆನ್ನಲ್ಲೇ ಸಚಿವ ಸಂಪುಟದ ವಿಸ್ತರಣೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸರಿಸುಮಾರು 11 ಮಂದಿ ಅನ್ಯ ಪಕ್ಷಗಳಿಂದ ವಲಸೆ ಬಂದಿರುವ ನೂತನ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗುವುದು ನಿಶ್ಚಿತವಾಗಿದೆ. ಇವರೊಂದಿಗೆ ಪಕ್ಷದ ಹಲವು ಶಾಸಕರೂ ಸಂಪುಟ ಸೇರ್ಪಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಅವರು ಸಚಿವ ಸ್ಥಾನ ಅಲಂಕರಿಸುವ ಮೊದಲೇ ಸಂಬಂಧಪಟ್ಟಇಲಾಖೆಗಳೂ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳಿಗೆ ದಕ್ಷ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ಯಡಿಯೂರಪ್ಪ ಅವರು ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಮಂಗ್ಳೂರು ಗಲಭೆ: ಎರಡು ರೀತಿಯ ತನಿಖೆಗೆ ಸಿಎಂ ಘೋಷಣೆ...

ಸಂಪುಟ ವಿಸ್ತರಣೆಯಾದ ಮೇಲೆ ಪ್ರಮುಖ ಅಧಿಕಾರಿಗಳ ವರ್ಗಾವಣೆ ಕೈಗೊಂಡಲ್ಲಿ ಅದು ನಕಾರಾತ್ಮಕ ಸಂದೇಶ ರವಾನಿಸಬಹುದು ಎನ್ನುವ ಕಾರಣಕ್ಕಾಗಿ ಸಂಪುಟ ವಿಸ್ತರಣೆಯ ಮೊದಲೇ ಅಧಿಕಾರಿಗಳನ್ನು ಬದಲಾಯಿಸುವ ಮೂಲಕ ಆಯಾ ಇಲಾಖೆಗಳು ಮುಂದೆ ಹಳಿ ತಪ್ಪದಂತೆ ಮುಂಜಾಗ್ರತೆ ವಹಿಸಬಹುದು ಎಂಬ ಉದ್ದೇಶವೂ ಅಡಗಿದೆ ಎಂದು ಮೂಲಗಳು ತಿಳಿಸಿವೆ.

ಉಪಚುನಾವಣೆ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸಿ ಒಂದು ಸುತ್ತು ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಪ್ರಯತ್ನ ಮಾಡಿದ್ದರು. ಆದಾದ ಕೆಲವೇ ದಿನಗಳಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲು ಉದ್ದೇಶಿಸಿದ್ದರು. ಅಷ್ಟರಲ್ಲಿ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ವಿರೋಧದ ಹೋರಾಟ ತೀವ್ರಗೊಂಡಿದ್ದರಿಂದ ಆ ಕಡೆ ಗಮನಹರಿಸಿದರು.

Follow Us:
Download App:
  • android
  • ios