ಬೆಂಗಳೂರು(ಆ.06): ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್‌ ರೈಲು ಯೋಜನೆಗೆ ಮತ್ತೆ ಜೀವ ಬಂದಿದ್ದು, ಯೋಜನೆಯ ಅನುಷ್ಠಾನಕ್ಕೆ ಶೀಘ್ರದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ದೇಶದ 7 ಮಾರ್ಗಗಳಲ್ಲಿ ಹೈಸ್ಪೀಡ್‌ ರೈಲು ಕಾರಿಡಾರ್‌ ನಿರ್ಮಾಣಕ್ಕೆ ರೈಲ್ವೆ ಮಂಡಳಿ ಯೋಜನೆ ರೂಪಿಸುತ್ತಿದೆ. ಇದರ ಅನ್ವಯ ಬೆಂಗಳೂರು ಮೂಲಕ ಹಾದು ಹೋಗುವ 435 ಕಿ.ಮೀ. ಉದ್ದದ ಮೈಸೂರು-ಚೆನ್ನೈ ಮಾರ್ಗವನ್ನು ಸೇರಿಸಲಾಗಿದೆ. ಆ ಮಾರ್ಗದ ವಿವರ ಯೋಜನಾ ವರದಿ ಸಿದ್ಧಪಡಿಸಲು ರೈಲ್ವೆ ಮಂಡಳಿ ಕ್ರಮ ಕೈಗೊಳ್ಳುತ್ತಿದೆ.

ಗುಡ್‌ ನ್ಯೂಸ್: ಚೆನ್ನೈ-ಬೆಂಗ್ಳೂರು-ಮೈಸೂರು ಮಾರ್ಗದಲ್ಲಿ ಹೈಸ್ಪೀಡ್‌ ರೈಲು!

ಯೋಜನೆಗೆ ರೈಲ್ವೆ ಮಂಡಳಿಯಿಂದ ಹೆಚ್ಚುವರಿ ಭೂ ಸ್ವಾಧೀನ ಮಾಡಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪ್ರಸ್ತಾವನೆ ಕಳುಹಿಸಿದೆ. ಜೊತೆಗೆ ಯೋಜನೆ ಕುರಿತು ಸಮನ್ವಯತೆಗಾಗಿ ನೋಡಲ್‌ ಅಧಿಕಾರಿ ನೇಮಕ ಮಾಡುವಂತೆಯೂ ಸೂಚಿಸಿದೆ. ಯೋಜನೆಗೆ ಹೆಚ್ಚುವರಿ ಎಷ್ಟುಭೂಮಿ ಅವಶ್ಯಕತೆಯಿದೆ, ಭೂಸ್ವಾಧೀನ ಮಾಡಿಕೊಳ್ಳುವ ವಿಧಾನ, ಅದಕ್ಕೆ ತಗಲುವ ವೆಚ್ಚದ ಸೇರಿ ಇನ್ನಿತರ ವಿಷಯಗಳ ಕುರಿತು ಕೆಲಸ ಮಾಡಲು ಎನ್‌ಎಚ್‌ಎಐ ಪ್ರತ್ಯೇಕ ಸಮಿತಿ ರಚಿಸಲಿದೆ.

ಬುಲೆಟ್‌ ರೈಲು: 

ದೇಶದ 7 ಪ್ರಮುಖ ಮಾರ್ಗಗಳಲ್ಲಿ ಹೈಸ್ಪೀಡ್‌ ರೈಲು ಕಾರಿಡಾರ್‌ಗಳ ಮಾರ್ಗಗಳಲ್ಲಿ ಬುಲೆಟ್‌ ರೈಲಿನ ಸೇವೆ ಸಹ ನೀಡಲು ನಿರ್ಧರಿಸಲಾಗಿದೆ. ಅದರಲ್ಲಿ ಮೈಸೂರು-ಚೆನ್ನೈಮಾರ್ಗವೂ ಸೇರಿದೆ. ಈ ಮಾರ್ಗಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.