ನವದೆಹಲಿ[ಜ.30]: ರೈಲ್ವೆ ಇಲಾಖೆಯು 6 ಹೈಸ್ಪೀಡ್‌ ಹಾಗೂ ಸೆಮಿ-ಹೈಸ್ಪೀಡ್‌ ರೈಲು ಕಾರಿಡಾರ್‌ಗಳನ್ನು ಗುರುತಿಸಿದ್ದು, ಇನ್ನು ಒಂದು ವರ್ಷದಲ್ಲಿ ಈ ಮಾರ್ಗಗಳ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಿದೆ. ಇದರಲ್ಲಿ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವೂ ಇರುವುದು ವಿಶೇಷ.

ಈಗಾಗಲೇ ಮುಂಬೈ-ಅಹಮದಾಬಾದ್‌ ಬುಲೆಟ್‌ (ಹೈಸ್ಪೀಡ್‌) ರೈಲು ಯೋಜನೆ ಪ್ರಗತಿಯಲ್ಲಿದೆ. ಇದಕ್ಕೆ ಈ 6 ಮಾರ್ಗಗಳೂ ಸೇರ್ಪಡೆಯಾಗಲಿವೆ. ಹೈಸ್ಪೀಡ್‌ ರೈಲು ಮಾರ್ಗದಲ್ಲಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸಬಲ್ಲವು. ಸೆಮಿ ಹೈಸ್ಪೀಡ್‌ ರೈಲು ಮಾರ್ಗದಲ್ಲಿ ಗರಿಷ್ಠ 160 ಕಿ.ಮೀ.ವರೆಗೆ ರೈಲುಗಳು ಸಂಚಾರ ಮಾಡಬಲ್ಲವು.

ಅತೀ ವೇಗದ ರೈಲು ಬಿಡೋದು ಹೇಗೆ? ತೋರಿಸಿಕೊಟ್ಟ ಕಾಂಗ್ರೆಸ್ ಅಧ್ಯಕ್ಷ!

ದಿಲ್ಲಿ-ನೋಯ್ಡಾ-ಆಗ್ರಾ-ಲಖನೌ-ವಾರಾಣಸಿ (865 ಕಿ.ಮೀ.), ದಿಲ್ಲಿ-ಜೈಪುರ-ಉದಯಪುರ-ಅಹಮದಾಬಾದ್‌ (886 ಕಿ.ಮೀ.), ಮುಂಬೈ-ನಾಸಿಕ್‌-ನಾಗಪುರ (753 ಕಿ.ಮೀ.), ಮುಂಬೈ-ಪುಣೆ-ಹೈದರಾಬಾದ್‌ (711 ಕಿ.ಮೀ.), ಚೆನ್ನೈ-ಬೆಂಗಳೂರು-ಮೈಸೂರು (435 ಕಿ.ಮೀ.) ಹಾಗೂ ದಿಲ್ಲಿ-ಚಂಡೀಗಢ-ಲುಧಿಯಾನಾ-ಜಲಂಧರ್‌-ಅಮೃತಸರ (459 ಕಿ.ಮೀ.)- ಇಲ್ಲಿ ಹೈಸ್ಪೀಡ್‌ ಅಥವಾ ಸೆಮಿ ಹೈಸ್ಪೀಡ್‌ ರೈಲು ಕಾರಿಡಾರ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

‘ನಾವು 6 ಕಾರಿಡಾರ್‌ಗಳನ್ನು ಗುರುತಿಸಿದ್ದೇವೆ. ಯೋಜನೆಯ ಡಿಪಿಆರ್‌ 1 ವರ್ಷದಲ್ಲಿ ಸಿದ್ಧವಾಗಲಿದೆ. ಈ ಮಾರ್ಗಗಳಲ್ಲಿನ ಭೂಮಿಯ ಲಭ್ಯತೆ, ಮಾರ್ಗ ಹೊಂದಾಣಿಕೆ- ಇತ್ಯಾದಿಗಳ ಅಧ್ಯಯನ ನಡೆಯಲಿದೆ. ಅಧ್ಯಯನದ ಬಳಿಕ ಇಲ್ಲಿ ಹೈಸ್ಪೀಡ್‌ ರೈಲು ಓಡಿಸಬೇಕೋ ಅಥವಾ ಸೆಮಿ ಹೈಸ್ಪಿಡ್‌ ರೈಲು ಓಡಿಸಬೇಕೋ ಎಂಬ ಬಗ್ಗೆ ನಿರ್ಧಾರವಾಗಲಿದೆ’ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್‌ ಹೇಳಿದರು. 2024ನೇ ಇಸವಿಗೆ ದೇಶದ ಎಲ್ಲ ರೈಲು ಮಾರ್ಗಗಳ ವಿದ್ಯುದೀಕರಣ ಮಾಡಲಾಗುತ್ತದೆ. 17 ಸಾವಿರ ಕಿ.ಮೀ. ರೈಲು ಮಾರ್ಗವನ್ನು ಜೋಡಿ ಮಾರ್ಗವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ಅವರು ಹೇಳಿದರು.

ದುಬೈಯಿಂದ ಮುಂಬೈಗೆ ಸಮುದ್ರದೊಳಗೆ ಹೈಸ್ಪೀಡ್‌ ರೈಲು!