ಜೈಲಿನಿಂದ ಹೊರ ಬಂದ ಡಿ.ಕೆ.ಶಿವಕುಮಾರ್ ತಮ್ಮ ಬಿಡುಗಡೆಗೆ ಪ್ರಾರ್ಥಿಸಿದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಕೈನಲ್ಲಿ ಮಹತ್ವದ ಹುದ್ದೆ ನೀಡುವ ಬಗ್ಗೆಯೂ ಚರ್ಚೆಗಳಾಗಿದ್ದು, ಇದೇ ವೇಳೆ ರಾಜಕೀಯ ಸನ್ಯಾಸತ್ವ, ವ್ಯವಹಾರದ ಬಗ್ಗೆಯೂ ಮಾತನಾಡಿದ್ದಾರೆ. ಹಾಗಾದ್ರೆ ಏನಿದರ ಅಸಲಿಯತ್ತು?
ನವದೆಹಲಿ [ಅ.25]: ‘ಬೇರೆಯವರ ಆಸ್ತಿ ಘೋಷಣೆ, ನನ್ನ ಆಸ್ತಿ ಘೋಷಣೆ ಎಲ್ಲದರ ಬಗ್ಗೆ ನಾನು ಬೆಂಗಳೂರಲ್ಲಿ ಹೇಳುತ್ತೇನೆ. ನನ್ನ ಅನೇಕ ಸ್ನೇಹಿತರು ಒಳ್ಳೆಯ ಸಲಹೆ ನೀಡಿದ್ದಾರೆ. ಕೆಲವರು ಬ್ಯುಸಿನೆಸ್ ಮಾಡು, ಸನ್ಯಾಸತ್ವ ತಗೋ ಅಂದಿದ್ದಾರೆ. ಎಲ್ಲದಕ್ಕೂ ನಾನು ಉತ್ತರ ಕೊಡುತ್ತೇನೆ’ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜತೆಗೆ, ನನಗೆ ಎಲ್ಲಾ ಪಕ್ಷಗಳಿಂದಲೂ ಬೆಂಬಲ ಸಿಕ್ಕಿದೆ. ಆದರೆ, ಕೆಲವರು ನನ್ನ ಸ್ಥಿತಿ ನೋಡಿ ಖುಷಿಪಟ್ಟಿದ್ದಾರೆ. ಅವರ ಮೇಲೆ ಬೇಸರ ಇಲ್ಲ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಐವತ್ತು ದಿನ ಬಂಧನದಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದ ಜತೆಗೆ ಅನೇಕ ವಿಚಾರಗಳ ಕುರಿತು ಶಿವಕುಮಾರ್ ಮಾತನಾಡಿದರು. ನನ್ನನ್ನು ಪಕ್ಷಭೇದ ಮರೆತು ಅನೇಕರು ಬೆಂಬಲಿಸಿದ್ದಾರೆ. ಆದರೆ, ಕೆಲವರು ಮಾತ್ರ ನನ್ನ ಪರಿಸ್ಥಿತಿ ನೋಡಿ ಖುಷಿ ಪಟ್ಟಿದ್ದಾರೆ. ಏನೂ ಮಾಡಲಿಕ್ಕಾಗಲ್ಲ. ಅವರೆಲ್ಲ ಇರಬೇಕು. ಅವರಿಂದಲೇ ನಾವು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ನನಗೆ ಅವರ ಮೇಲೆ ಯಾವುದೇ ಬೇಸರ ಇಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯಕ್ಕೆ ಬಂದ ಡಿಕೆಶಿ ಮೊದಲ ಏಟು ಯಾರಿಗೆ? ಗುರಿ ಸರಿ ಇದ್ಯಾ?
ಕಾನೂನಿಗೆ ಬದ್ಧ. ಏಳು ಬಾರಿ ಶಾಸಕನಾಗಿದ್ದೇನೆ. ನಾವೂ ಕಾನೂನುಗಳನ್ನು ಮಾಡಿದ್ದೇವೆ. ಹೀಗಾಗಿ ಅವುಗಳನ್ನು ಗೌರವಿಸಬೇಕಿದೆ. ಚುನಾವಣಾ ಆಯೋಗ ಕೇಳಿರುವುದನ್ನು ನಾನು ಘೋಷಿಸಿದ್ದೇನೆ. ಈ ವಿಚಾರಗಳೆಲ್ಲವನ್ನೂ ನಾನು ಬೆಂಗಳೂರಿನಲ್ಲಿ ಮಾತನಾಡುತ್ತೇನೆ. ಇ.ಡಿ. ವಿಚಾರಣೆಯನ್ನು ಬೆಂಗಳೂರಿನಲ್ಲೇ ಮಾಡಿ ಅಂತ ಕೇಳಿಕೊಂಡಿದ್ದೇವೆ. ಅವರು ಏನೇ ಮಾಡಲಿ ಉತ್ತರ ಕೊಡಲು ನಾವು ಸಿದ್ಧ ಎಂದರು.
ಉಪಕಾರ ಸ್ಮರಣೆ:
ನಾನೀಗ ಮೊದಲಿಗೆ ಉಪಕಾರ ಸ್ಮರಣೆ ಮಾಡಬೇಕಿದೆ. ನನ್ನ ಪರ ನಿಂತವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸದಿದ್ದರೆ ನಾನು ಮನುಷ್ಯನಾಗಲು ಸಾಧ್ಯನಾ? ಎಷ್ಟೋ ಜನ ರಸ್ತೆಯಲ್ಲಿ ನಿಂತು, ಬಂದ್ ಮಾಡಿ, ನನ್ನ ಪರ ಪ್ರತಿಭಟನೆ ಮಾಡಿದ್ದಾರೆ. ಮನೆಯಲ್ಲಿ ಕೂತು ಧ್ಯಾನ, ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ. ಕೇವಲ ಕಾಂಗ್ರೆಸ್‌ನವರು ಮಾತ್ರವಲ್ಲ, ಕೆಲ ಬಿಜೆಪಿ ನಾಯಕರು, ಜೆಡಿಎಸ್‌ನವರೂ ಬೆಂಬಲಿಸಿದ್ದಾರೆ. ಇನ್ನು ಕಾಂಗ್ರೆಸ್‌ನವರು ನನ್ನ ಕುಟುಂಬ. ಎಲ್ಲರೂ ಮನಸ್ಸು ಬಿಚ್ಚಿ ಪ್ರೀತಿ ತೋರಿದ್ದಾರೆ ಎಂದರು.
ಡಿಕೆಶಿ ಬಗ್ಗೆ ಬಿಜೆಪಿ ನಾಯಕರ ಮೃದುಧೋರಣೆ ಯಾಕೆ
ತಪ್ಪು ಮಾಡಿಲ್ಲ:
ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನಗೆ ಜನ ಬೆಂಬಲ ಸಿಕ್ಕಿದೆ. ನನಗೆ ಕಾನೂನು ಮೇಲೆ ಗೌರವವಿದೆ. ನನ್ನ ಹೋರಾಟ ಮುಂದುವರಿಸುತ್ತೇನೆ ಎಂದರು. ನಮ್ಮ ವಕೀಲರು ಹಾಗೂ ನಾಯಕರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ನಂತರ ಬೆಂಗಳೂರಿಗೆ ಹೊರಡುತ್ತೇನೆ. ನನ್ನ ಶಕ್ತಿ ನಮ್ಮ ಜನ ಎಂದು ನಂಬಿದ್ದು ಅವರನ್ನು ಭೇಟಿ ಮಾಡಬೇಕಿದೆ. ಮಾಧ್ಯಮದವರೂ ಕೆಲವರು ನನ್ನ ಪರವಾಗಿದ್ದು ನಿಮ್ಮನ್ನು ಭೇಟಿ ಮಾಡುತ್ತೇನೆ. ನಿಮ್ಮ ಕರ್ತವ್ಯ ನೀವು ಮಾಡಿದ್ದೀರಿ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿಮಗೆ ಬಿಟ್ಟಿದ್ದೇನೆ ಎಂದು ಹೇಳಿದರು.
ಅಸೆಂಬ್ಲಿಯಲ್ಲೇ ಹೇಳಿದ್ದೆ:
ನಾನು ಅಸೆಂಬ್ಲಿಯಲ್ಲೇ ಹೇಳಿ ಬಂದಿದ್ದೆ. ನನಗೆ ಏನೇನಾಗುತ್ತಿದೆ ಎಂಬುದು ಗೊತ್ತಿತ್ತು. ಹೀಗಾಗಿ ಮುಚ್ಚುಮರೆ ಮಾಡಲ್ಲ. ಯಾರಾರಯರ ಒತ್ತಡವಿತ್ತು? ಯಾರಾರಯರಿಗೆ ಏನೇನು ಆಫರ್‌ಗಳಿತ್ತು? ಆದರೂ ಸಮನ್ಸ್ ನೀಡಿದ ತಕ್ಷಣ ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಮಧ್ಯಾಹ್ನ ದೆಹಲಿಗೆ ಬಂದು ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿದ್ದೇನೆ. ನನ್ನ ಮಗಳಿಗೂ, ನೀನು ವಿದ್ಯಾವಂತೆ ನಿನಗೇನು ಗೊತ್ತೋ ಅದನ್ನು ಹೇಳಿ ಅಧಿಕಾರಿಗಳಿಗೆ ಉತ್ತರಿಸುವಂತೆ ಹೇಳಿದ್ದೆ. ನನ್ನ ತಾಯಿಗೆ ವಯಸ್ಸಿನ ಸಮಸ್ಯೆ ಇದೆ. ಪ್ರಯಾಣ, ಭಾಷೆ ಸೇರಿ ಕೆಲ ಸಮಸ್ಯೆಗಳಿವೆ. ನಾವು ಕೋರ್ಟ್‌ಗೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಅವರ ಪ್ರಯತ್ನ ಅವರು ಮಾಡಲಿ. ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದರು.
ಮುಖಂಡರ ಭೇಟಿ: ಏತನ್ಮಧ್ಯೆ, ಡಿ.ಕೆ.ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು.
ಎಲ್ಲರ ಪ್ರಾರ್ಥನೆ, ನಂಬಿಕೆ ಶಕ್ತಿಕೊಟ್ಟಿದೆ
ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂದು ಹೇಳುವುದು ಕಷ್ಟ. ಪಕ್ಷಭೇದ ಮರೆತು ಅನೇಕರು ಬೆಂಬಲಿಸಿದ್ದಾರೆ. ಸಿಪಿಎಂ, ಸಿಪಿಐಎಂ, ಟಿಎಂಸಿ, ಜನತಾದಳ ಸೇರಿದಂತೆ ಅನೇಕ ನಾಯಕರು ನನ್ನನ್ನು ಬೆಂಬಲಿಸಿದ್ದಾರೆ. ಕೇರಳದಲ್ಲಿ ರಾತ್ರೋರಾತ್ರಿ ಪಂಜಿನ ಮೆರವಣಿಗೆ ಮಾಡಿದ್ದಾರೆ. ಇ.ಡಿ. ಕಚೇರಿಯಲ್ಲಿ, ಠಾಣೆಯಲ್ಲಿದ್ದಾಗ ಪ್ರತಿ ದಿನ 300-400 ಹುಡುಗರು ಬರುತ್ತಿದ್ದರು. ನನ್ನನ್ನು ಕಾಯುತ್ತಾ ತಿಂಗಳುಗಟ್ಟಲೆ ಇಲ್ಲೇ ಸೇರಿಕೊಂಡಿದ್ದರು. ರಸ್ತೆಗಿಳಿದು ಹೋರಾಟವನ್ನೂ ಮಾಡಿದ್ದರು. ನಂಜಾವಧೂತ ಸ್ವಾಮಿಗಳ ಭಾಷಣ, ಅವರ ವ್ಯಾಖ್ಯಾನ ಈಗಷ್ಟೇ ತಿಳಿದುಕೊಂಡೆ. ಅನೇಕ ಮಠದ ಸ್ವಾಮಿಗಳು ಕೋರ್ಟ್‌ಗೆ ಆಗಮಿಸಿ ಭೇಟಿ ಮಾಡಿದ್ದರು. ಅವರೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾರ್ಥನೆ ಫಲ ಇವೆಲ್ಲವೂ ಸೇರಿ ನನಗೆ ಶಕ್ತಿ ಕೊಟ್ಟಿದೆ ಎಂದು ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.
