ರಾಜ್ಯದಲ್ಲಿ 500 ಮಂದಿ ಗಣ್ಯರಿಗೆ ಕೊರೋನಾ ಲಸಿಕೆ ಶೀಘ್ರದಲ್ಲೇ ಹಾಕಲಾಗುತ್ತದೆ. ಅದರಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರೂ ಸೇರಿದ್ದಾರೆ. 

ಬೆಂಗಳೂರು (ಜ.26):  ಕೊರೋನಾ ಲಸಿಕೆ ಸುರಕ್ಷತೆ ಬಗ್ಗೆ ಜನಸಾಮಾನ್ಯರಿಗೆ ಆತ್ಮಸ್ಥೈರ್ಯ ತುಂಬಲು ಎರಡನೇ ಹಂತದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಕೊರೋನಾ ಲಸಿಕೆ ನೀಡಲು ನಿರ್ಧರಿಸಲಾಗಿದೆ. 

ಅದೇ ರೀತಿ ರಾಜ್ಯದ 500 ಮಂದಿ ಜನಪ್ರಿಯ ವ್ಯಕ್ತಿಗಳಿಗೂ ಲಸಿಕೆ ನೀಡಲು ಅಗತ್ಯ ಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಸುಮಾರು ಎರಡು ಲಕ್ಷ ಆರೋಗ್ಯ ಕಾರ್ಯಕರ್ತರು ಕೊರೋನಾ ಲಸಿಕೆ ಪಡೆದಿದ್ದು, ಯಾರಿಗೂ ಯಾವುದೇ ರೀತಿಯ ದೊಡ್ಡ ಮಟ್ಟದ ಅಡ್ಡಪರಿಣಾಮ ಉಂಟಾಗಿಲ್ಲ. ಕೊರೋನಾ ಲಸಿಕೆ ಅತ್ಯಂತ ಸುರಕ್ಷಿತವಾಗಿದೆ ಎಂದು ಹೇಳಿದರು.

ಬೆಂಗಳೂರು: 10 ದಿನದಲ್ಲಿ 46000 ಮಂದಿಗೆ ಕೊರೋನಾ ಲಸಿಕೆ ...

ಕೊರೋನಾ ಲಸಿಕೆ ಅಭಿಯಾನದ ಅಡಿ ಭಾನುವಾರದವರೆಗೆ 1,87,211 ಜನರಿಗೆ ಲಸಿಕೆ ನೀಡಲಾಗಿದೆ. ಯಾರಿಗೂ ದೊಡ್ಡ ಪ್ರಮಾಣದ ಅಡ್ಡ ಪರಿಣಾಮ ಆಗದೇ ಇರುವುದು ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಎರಡೂ ಲಸಿಕೆ ಸುರಕ್ಷಿತ ಎಂಬುದಕ್ಕೆ ಸಾಕ್ಷಿ ಎಂದು ತಿಳಿಸಿದರು.

9.60 ಲಕ್ಷ ಡೋಸ್‌ ಲಸಿಕೆ ಬಂದಿದೆ:

ರಾಜ್ಯದಲ್ಲಿ ಕೊರೋನಾ ಲಸಿಕೆ ಅಭಿಯಾನಕ್ಕೆ ಅಗತ್ಯವಾದ ಲಸಿಕೆಗಳ ದಾಸ್ತಾನು ಇದೆ. ಮೊದಲ ಹಂತದಲ್ಲಿ 7,94,500 ಡೋಸ್‌ ಕೋವಿಶೀಲ್ಡ್‌ ಲಸಿಕೆ ರಾಜ್ಯಕ್ಕೆ ಬಂದಿದೆ. ಕೋವ್ಯಾಕ್ಸಿನ್‌ ಮೊದಲ ಹಂತದಲ್ಲಿ 20 ಸಾವಿರ ಹಾಗೂ ಇತ್ತೀಚೆಗೆ 1,46,240 ಡೋಸ್‌ ಲಸಿಕೆ ಬಂದಿದೆ. ಅಗತ್ಯವಾದ ಲಸಿಕೆ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.