ಹುಬ್ಬಳ್ಳಿ[ಅ.09]: ಜೆಡಿಎಸ್‌ನಿಂದ ಮತ್ತಷ್ಟುಶಾಸಕರು ಕೆಲವೇ ದಿನಗಳಲ್ಲಿ ಹೊರಗೆ ಬರುತ್ತಾರೆ ಎಂದು ಹೇಳುವ ಮೂಲಕ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನಿಂದ ಶಾಸಕರು ಹೊರಹೋಗುತ್ತಿರುವ ಬಗ್ಗೆ ಸ್ವತಃ ಜೆಡಿಎಸ್‌ ನಾಯಕರೇ ಹೇಳುತ್ತಿದ್ದಾರೆ. ಕೆಲವರು ಅಲ್ಲಿಯ ವಾತಾವರಣ ನೋಡಿ ತಾವೇ ಹೊರಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಎಷ್ಟುಜನ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.

ಪಾಪದ ಕೊಡ ತುಂಬಿ ಪತನ:

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರದ ಪಾಪದ ಕೊಡ ತುಂಬಿದ ನಂತರ ಬಿದ್ದು ಹೋಗಿದೆ. ಆಗ ಅಕ್ಕಪಕ್ಕ ಕುಳಿತುಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಈಗ ಪರಸ್ಪರ ಕಚ್ಚಾಡುತ್ತಿದ್ದಾರೆ ಎಂದರು.

ಪ್ರತಿ ಪಕ್ಷದ ನಾಯಕ ಆಯ್ಕೆ ಆಗ್ತಿಲ್ಲ:

ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮುರಿದ ನಂತರ ತಾವು ತಾವೇ ಜಗಳ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳೇ ಇಲ್ಲ. ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡುವುದು ಸಹ ವಿರೋಧ ಪಕ್ಷದಲ್ಲಿ ಆಗುತ್ತಿಲ್ಲ. ಅಷ್ಟೊಂದು ಒಳಜಗಳ ಅಲ್ಲಿದೆ ಎಂದು ಟೀಕಿಸಿದರು.

ನೆರೆ ಪರಿಹಾರದ ವಿಚಾರದಲ್ಲಿ ನಿರಾಶ್ರಿತರಿಂದ ಯಾವುದೇ ದೂರು ಬಂದಿಲ್ಲ. ಆದರೂ ವಿರೋಧ ಪಕ್ಷಗಳು ವಾಸ್ತವ ಅರಿಯದೇ ವಿನಾಕಾರಣ ಟೀಕೆ ಮಾಡುತ್ತಿವೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹಿಂದಿನ ಯುಪಿಎ ಸರ್ಕಾರಕ್ಕಿಂತಲೂ ಹೆಚ್ಚಿನ ಅನುದಾನವನ್ನು ಕರ್ನಾಟಕಕ್ಕೆ ನೀಡಿದೆ. ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರ ರಾಜ್ಯಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ ಒಗ್ಗಟ್ಟಿನಲ್ಲಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ದೇಶ ಕಾಂಗ್ರೆಸ್‌ ಮುಕ್ತವಾಗೋದು ಗ್ಯಾರಂಟಿ. ವಿಪಕ್ಷಗಳ ಒಗ್ಗಟ್ಟಿನ ಕೊರತೆಯನ್ನೇ ಲಾಭ ಪಡೆದು ಪಶ್ಚಿಮ ಪದವೀಧರರ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಬೇಕು ಎಂದರು.

ಅಕ್ಟೋಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;