ಇನ್ಮುಂದೆ ಸೈನಿಕರಿಗೂ ರಾಜ್ಯೋತ್ಸವ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನೂ ಪರಿಗಣಿಸ ಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು [ಡಿ.07]: ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನೂ ಪರಿಗಣಿಸ ಲಾಗುವುದು. ರಾಜ್ಯದ ಗ್ರಾಮೀಣ ಯುವಕರಿಗೆ ಕನ್ನಡದಲ್ಲಿ ಸೇನಾ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಯೋಧರು ದೇಶದ ರಕ್ಷಣೆಗೆ ಜೀವನ ಮುಡುಪಾಗಿಟ್ಟಿದ್ದಾರೆ.
ಬಾಹ್ಯ ಆಕ್ರಮಣ, ಆಂತರಿಕ ದಂಗೆಯನ್ನೂ ತಡೆಯುವಲ್ಲಿ ಸೇನೆಯ ಶ್ರಮ ದೊಡ್ಡದು. ಇಂತಹ ಅನರ್ಘ್ಯ ಸೇವೆ ಸಲ್ಲಿಸುವ ಯೋಧರನ್ನು ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದರು. ರಾಜ್ಯದ ಸಾಕಷ್ಟು ಗ್ರಾಮೀಣ ಯುವಕರಿಗೆ ಸೇನೆಗೆ ಸೇರುವ ಆಸಕ್ತಿ ಇದ್ದರೂ, ಸೇನಾ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲದೆ ವಂಚಿತರಾಗುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕನ್ನಡದಲ್ಲೂ ಸೇನಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದ ಪ್ರವಾಹಪೀಡಿತ ಪ್ರದೇಶಗಳ ಜನರ ರಕ್ಷಣೆ ಹಾಗೂ ನೆರೆ ನಿರ್ವಹಣೆಗೆ ಸೈನಿಕರು ಸರ್ಕಾರದೊಂದಿಗೆ ಕೈಜೋಡಿಸಿ ಶ್ರಮಿಸಿದ್ದನ್ನು ಮುಖ್ಯಮಂತ್ರಿ ಸ್ಮರಿಸಿದರು.