ಬೆಂಗಳೂರು[ಡಿ.27]: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧಕ್ಕೂ ‘ಕಂಕಣ ಸೂರ್ಯಗ್ರಹಣ’ದ ಬಿಸಿ ತಟ್ಟಿದ್ದು, ಗ್ರಹಣಕ್ಕೆ ಹೆದರಿದ ಸಚಿವಾಲಯದ ಬಹುತೇಕ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಾರದ ಕಾರಣ ಮಧ್ಯಾಹ್ನದವರೆಗೆ ಕಚೇರಿಗಳು ಬಿಕೋ ಎನ್ನುತ್ತಿದ್ದವು.

ಗುರುವಾರ ಬೆಳಗ್ಗೆ 8 ಗಂಟೆಯಿಂದ ಬೆಳಗ್ಗೆ 11.05 ನಿಮಿಷದವರೆಗೆ ಗ್ರಹಣ ಇದ್ದ ಕಾರಣ ಸಿಬ್ಬಂದಿ ಕಚೇರಿಯತ್ತ ಮುಖಮಾಡದೆ ಗ್ರಹಣ ಮುಗಿದ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದು ಕಂಡುಬಂತು. ವಿಧಾನಸೌಧ ಮತ್ತು ವಿಕಾಸಸೌಧದ ಬಹುತೇಕ ಕಚೇರಿಗಳು ಖಾಲಿ ಇದ್ದವು. ಕಾರಿಡಾರ್‌, ಪಾರ್ಕಿಂಗ್‌ ಸ್ಥಳದಲ್ಲಿ ಹೆಚ್ಚಿನ ವಾಹನಗಳಿಲ್ಲದೆ ಖಾಲಿ ಇತ್ತು.

ಸಾಮಾನ್ಯವಾಗಿ ಬೆಳಗ್ಗೆ 10 ಗಂಟೆಯಿಂದಲೇ ಗಿಜಿಗಿಡುವ ವಿಧಾನಸೌಧ ಮತ್ತು ವಿಕಾಸಸೌಧಗಳು ಸಿಬ್ಬಂದಿ ಹಾಗೂ ಜನರು ಇಲ್ಲದೆ ಕಾರಿಡಾರ್‌ಗಳು ಖಾಲಿಯಾಗಿದ್ದವು. ಕಂದಾಯ ಸಚಿವ ಆರ್‌.ಅಶೋಕ್‌ ಕೊಠಡಿಯಲ್ಲಿ ಗ್ರಹಣ ಮುಗಿದ ಬಳಿಕ ಪೂಜೆ ನೆರವೇರಿಸಲಾಯಿತು. ಸಾಂಬ್ರಾಣಿ ಹಾಕಿದ್ದರಿಂದ ಅದರ ಹೊಗೆ ಸುತ್ತಮುತ್ತಲೂ ಆವರಿಸಿತು. ಆದರೆ, ಕಚೇರಿ ಸಿಬ್ಬಂದಿ ಎಂದಿನಂತೆ ಪೂಜೆ ಮಾಡಲಾಗಿದೆ ಎಂದು ಸಬೂಬು ನೀಡಿದರು. ಮುಖ್ಯಮಂತ್ರಿಗಳ ಕಚೇರಿಗೆ ಬೀಗ ಹಾಕಿತ್ತು.

ಗ್ರಹಣ ಮುಗಿದ ಬಳಿಕ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ವಿಧಾನಸೌಧದಲ್ಲಿ ಎಂದಿನ ಕಳೆ ಬಂತು. ಸಾರ್ವಜನಿಕರು, ಸಿಬ್ಬಂದಿ ವಿಧಾನಸೌಧ, ವಿಕಾಸಸೌಧದತ್ತ ಧಾವಿಸಿದರು. ಜನರು ಸಹ ತಮ್ಮ ಕೆಲಸಗಳಿಗಾಗಿ ಆಡಳಿತ ಕೇಂದ್ರದಲ್ಲಿ ಕಾಣಿಸಿಕೊಂಡರು.

ಈ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಮಾತ್ರ ಗ್ರಹಣದ ಬಗ್ಗೆ ಹೆಚ್ಚು ಚಿಂತಿಸದೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಸುದೀರ್ಘವಾಗಿ ನಡೆಸಿದ್ದು ವಿಶೇಷವಾಗಿತ್ತು.