ಖಂಡಗ್ರಾಸ ಸೂರ‍್ಯಗ್ರಹಣ: ದೇಗುಲಗಳ ಬಾಗಿಲು ಬಂದ್‌!

ಖಂಡಗ್ರಾಸ ಸೂರ‍್ಯಗ್ರಹಣ: ದೇಗುಲಗಳ ಬಾಗಿಲು ಬಂದ್‌| ಕುಕ್ಕೆ, ಧರ್ಮಸ್ಥಳ ಸೇರಿ ವಿವಿಧೆಡೆ ಗ್ರಹಣ ವೇಳೆ ದರ್ಶನ ಇಲ್ಲ| ಮಂತ್ರಾಲಯದಲ್ಲಿ ವಿಶೇಷ ಹೋಮ

Solar Eclipse 2020 Temples In Karnataka Will Be closed

ಬೆಂಗಳೂರು(ಜೂ.21): ಶಾರ್ವರಿ ಸಂವತ್ಸರದ ಮೊದಲ ಖಂಡಗ್ರಾಸ ಸೂರ‍್ಯಗ್ರಹಣ ಭಾನುವಾರ ರಾಜ್ಯದಲ್ಲಿ ಬೆಳಗ್ಗೆ 10.04 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1.38ರ ತನಕ ಇರಲಿದೆ. ಹೀಗಾಗಿ ಗ್ರಹಣದ ಸಂದರ್ಭದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯಾದ್ಯಂತ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬೆಳಗ್ಗೆ 5.30ರಿಂದ 9 ಗಂಟೆವರೆಗೆ, ಸಂಜೆ 4ರಿಂದ ರಾತ್ರಿ 9ರ ವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.30ರಿಂದ 10, ಮಧ್ಯಾಹ್ನ 3.30ರಿಂದ 5.30ರ ವರೆಗಷ್ಟೇ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಗ್ರಹಣದ ಸಂದರ್ಭದಲ್ಲಿ ಭಕ್ತರಿಗೆ ದೇಗುಲ ಪ್ರವೇಶ ನಿರ್ಬಂಧಿಸಲಾಗಿದೆ. ಮಂಗಳೂರಿನ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಬೆಳಗ್ಗೆ ಗ್ರಹಣ ಸ್ಪರ್ಶದಿಂದ ಮೋಕ್ಷದವರೆಗೆ ಲೋಕ ಕಲ್ಯಾಣಾರ್ಥವಾಗಿ ಅಭಿಷೇಕ ಜರುಗಲಿದೆ.

ಶಿರಸಿಯ ಮಾರಿಕಾಂಬ, ಹಂಪಿಯ ವಿರೂಪಾಕ್ಷ ಗ್ರಹಣದ ವೇಳೆ ಅವಕಾಶ ಇಲ್ಲ. ಬೆಂಗಳೂರು ನಗರದಲ್ಲಿರುವ ಗವಿಗಂಗಾಧರೇಶ್ವರ, ಕೋಟೆ ಆಂಜನೇಯ ಸ್ವಾಮಿ, ಕಾಡುಮಲ್ಲೇಶ್ವರ, ದೊಡ್ಡ ಗಣಪತಿ, ಬನಶಂಕರಿ ದೇವಾಲಯದಲ್ಲಿ ಗ್ರಹಣ ಜರುಗುವ ವೇಳೆ ವಿಶೇಷ ಪೂಜೆ, ಹೋಮ ಹವನ ನಡೆಯುವುದಿಲ್ಲ. ಶೃಂಗೇರಿ, ಗೋಕರ್ಣದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೈಸೂರಿನಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿಗೆæ ಮೂರು ಬಾರಿ ಅಭಿಷೇಕ ನೆರವೇರಲಿದೆ. ಆದರೆ, ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇಲ್ಲ. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಹೋಮ ನಡೆಯಲಿದೆ. ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ನೇತೃತ್ವದಲ್ಲಿ ಮಠದ ಆವರಣದಲ್ಲಿರುವ ಯಜ್ಞಮಂಟಪದಲ್ಲಿ ಈ ಹೋಮ ನಡೆಸಲಾಗುತ್ತಿದೆ.

ಗ್ರಹಣ ವೇಳೆ ಸಹಪಂಕ್ತಿ ಭೋಜನ

ಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆ ನಿವಾರಣೆಗಾಗಿ ಚಿತ್ರದುರ್ಗದ ಮುರುಘಾಮಠದಲ್ಲಿ ಶಿವಮೂರ್ತಿ ಮುರುಘಾಶರಣರಿಂದ ವಿಭಿನ್ನ ಕಾರ‍್ಯಕ್ರಮ ಆಯೋಜಿಸಲಾಗಿದೆ. ಗ್ರಹಣದ ವೇಳೆಯೇ ಮುರುಘಾಶರಣರ ಸಮ್ಮುಖದಲ್ಲಿ ಸಹಪಂಕ್ತಿ ಭೋಜನ ನಡೆಯಲಿದೆ. ಮುರುಘಾಶರಣರು ಪ್ರತಿವರ್ಷ ಗ್ರಹಣ ವೇಳೆ ಈ ರೀತಿಯ ವಿಭಿನ್ನ ಕಾರ‍್ಯಕ್ರಮ ಆಯೋಜಿಸುತ್ತಾರೆ.

ಮಹಾಕೂಟೇಶ್ವರನ ದರ್ಶನಕ್ಕೆ ಅವಕಾಶ

ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ಮಹಾಕೂಟೇಶ್ವರ ದೇಗುಲದಲ್ಲಿ ಗ್ರಹಣ ಸಂದರ್ಭದಲ್ಲೂ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ. ಗ್ರಹಣದ ಆರಂಭ ಮತ್ತು ಅಂತ್ಯದಲ್ಲಿ ಮಹಾಕೂೕಟೇಶ್ವರಿಗೆ ವಿಶೇಷ ಪೂಜೆ ನಡೆಯಲಿದೆ. ಆದರೆ, ಗ್ರಹಣ ವೇಳೆ ನಡೆಯುವ ಜಪ, ತಪಕ್ಕೆ ನಿರ್ಬಂಧ ವಿಧಿಸಲಾಗಿದೆ.

ಗ್ರಹಣ ವೀಕ್ಷಣೆಗೆ ಕೆಲವೆಡೆ ಅವಕಾಶ

ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸೂರ್ಯಗ್ರಹಣದ ವೀಕ್ಷಣೆಗೆ ಗುಂಪು ಸೇರುವಂತಿಲ್ಲ. ಹೀಗಾಗಿ ರಾಜ್ಯದಲ್ಲಿ ಕೆಲವೇ ಕಡೆಗಳಲ್ಲಿ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಮಂಗಳೂರಿನ ಮಂಗಳಾ ಈಜುಕೊಳದಲ್ಲಿ, ಬಳ್ಳಾರಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ, ಕಾರವಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಫೇಸ್‌ಬುಕ್‌ ಪೇಜ್‌ನಲ್ಲಿ ಲೈವ್‌ಆಗಿ ವೀಕ್ಷಿಸಬಹುದಾಗಿದೆ.

Latest Videos
Follow Us:
Download App:
  • android
  • ios