Asianet Suvarna News Asianet Suvarna News

Kempegowda Theme Park : ಎಲ್ಲ ಜಿಲ್ಲೆಗಳಿಂದ ಮಣ್ಣು ಪವಿತ್ರ ಮಣ್ಣು ಸಂಗ್ರಹಿಸಲು ತೀರ್ಮಾನ

  • ಕೆಂಪೇಗೌಡ ಥೀಮ್‌ಪಾರ್ಕ್ಗೆ ಎಲ್ಲ ಜಿಲ್ಲೆಗಳಿಂದ ಮಣ್ಣು
  • 45 ದಿನಗಳ ವಿಶಿಷ್ಟಅಭಿಯಾನಕ್ಕೆ ನಾಳೆ ಸಿಎಂ ಚಾಲನೆ
  • 31 ಜಿಲ್ಲೆಗಳಲ್ಲೂ ಎಲ್‌ಇಡಿ ವಾಹನಗಳಿಂದ ಯಾತ್ರೆ
  • 3 ತಿಂಗಳಲ್ಲಿ 108 ಅಡಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆ
Soil from all districts for Kempegowda Theme Park bengaluru
Author
First Published Aug 31, 2022, 4:15 AM IST

ಬೆಂಗಳೂರು (ಆ.31) : ರಾಜಧಾನಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ನೆನಪನ್ನು ಅಜರಾಮರಗೊಳಿಸುವ ಉದ್ದೇಶದಿಂದ ಇಡೀ ನಾಡಿನ ಜನತೆಯನ್ನು ಏಕತೆಯ ಭಾವದಲ್ಲಿ ಒಗ್ಗೂಡಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಇದಕ್ಕಾಗಿ 45 ದಿನಗಳ ವಿಶಿಷ್ಟಅಭಿಯಾನವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಮೂರು ತಿಂಗಳಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿರುವ ಸರ್ಕಾರವು, ಇದಕ್ಕೆ ಪೂರ್ವಭಾವಿಯಾಗಿ ‘ಉದ್ಘಾಟನಾ ಅಭಿಯಾನ’ವನ್ನು ನಡೆಸಲು ತೀರ್ಮಾನಿಸಿದೆ.

108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಸಿಎಂರಿಂದ ಶಂಕು ಸ್ಥಾಪನೆ

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗುರುವಾರ ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಯಾನದ ಉದ್ಘಾಟನೆ ಜತೆಗೆ ನಾಡಪ್ರಭು ಕೆಂಪೇಗೌಡ ಥೀಮ್‌ಪಾರ್ಕ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ಕೆಂಪೇಗೌಡರೇ ಮೂಲಕಾರಣ. ಹೀಗಾಗಿ, ಅವರ ಪ್ರತಿಮೆಯ ಉದ್ಘಾಟನೆಯಲ್ಲಿ ಇಡೀ ರಾಜ್ಯದ ಜನರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪಾಲ್ಗೊಳ್ಳಬೇಕು ಎನ್ನುವುದು ಸರ್ಕಾರದ ಆಶಯ. ಈ ಕನಸಿನೊಂದಿಗೆ ರೂಪು ಪಡೆದಿರುವ ಅಭಿಯಾನದ ಅಡಿಯಲ್ಲಿ ಥೀಮ್‌ ಪಾರ್ಕ್ಗೆ ಎಲ್ಲ ಜಿಲ್ಲೆಗಳ ಪ್ರತಿ ಹಳ್ಳಿಯ ಪವಿತ್ರ ಮೃತ್ತಿಕಾ (ಮಣ್ಣು)ವನ್ನು ಆಯಾಯ ಊರುಗಳಲ್ಲಿರುವ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಕೊಳ, ಚಿಲುಮೆ ಮತ್ತು ಝರಿಗಳಿಂದ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ನಾಡಿನ ಉದ್ದಗಲಕ್ಕೂ ಇರುವ ಅನುಕರಣೀಯ ಸಾಧಕರ ಮನೆಗಳಿಂದಲೂ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕಾಗಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಿರುವ ತಲಾ ಒಂದು ವಾಹನವನ್ನು ಪ್ರತಿ ಜಿಲ್ಲೆಗೂ ನಿಯೋಜಿಸಲಾಗುವುದು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಮತ್ತು ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ನಾಡಿನ ಪ್ರಮುಖ ಸ್ವಾಮೀಜಿಗಳ ಸಂದೇಶಗಳು ಬಿತ್ತರವಾಗಲಿವೆ. ಜೊತೆಗೆ ಕೆಂಪೇಗೌಡರಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರವೂ ಪ್ರಸಾರವಾಗಲಿದೆ. ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದ ಬಳಿಕ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ, ವಿಮಾನ ನಿಲ್ದಾಣದ ಸಮುಚ್ಚಯದಲ್ಲಿ ತಲೆ ಎತ್ತುತ್ತಿರುವ ಕೆಂಪೇಗೌಡರ ಭವ್ಯವಾದ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿದು ಬಂದಿದೆ.

108 ಅಡಿ ಕೆಂಪೇಗೌಡ ಪ್ರತಿಮೆಗೆ ಇಂದು ಶಂಕು: 23 ಎಕರೆ ಜಾಗದಲ್ಲಿ ಸೆಂಟ್ರಲ್‌ ಪಾರ್ಕ್!

ಕೆಂಪೇಗೌಡರದ್ದು ‘ಪ್ರಗತಿ ಪ್ರತಿಮೆ’?

ಅಮೆರಿಕದ ಸ್ವಾತಂತ್ರ್ಯ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳ ಸಾಲಿಗೆ 108 ಅಡಿಯ ಕೆಂಪೇಗೌಡರ ಪ್ರತಿಮೆ ಕೂಡ ಸೇರಲಿದ್ದು ಅದಕ್ಕೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದು ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಆಗಲಿದೆ ಎನ್ನಲಾಗಿದೆ.

ನಾಡಪ್ರಭು ಕೆಂಪೇಗೌಡರೆಂದರೆ ಪ್ರಗತಿ ಮತ್ತು ಅಭ್ಯುದಯದ ನಾಗಾಲೋಟಕ್ಕೊಂದು ಸಂಕೇತ. ಅವರು ಒಂದು ದಿವ್ಯವಾದ ಘಳಿಗೆಯಲ್ಲಿ ಬೆಂಗಳೂರಿನ ಸ್ಥಾಪನೆಗೆ ಶ್ರೀಕಾರ ಹಾಕಿದರು. ಇದರ ಫಲವಾಗಿ ಬೆಂಗಳೂರು ಇಂದು ವಿಶ್ವ ಮಟ್ಟದಲ್ಲಿ ರಾರಾಜಿಸುತ್ತಿದೆ. ಹೀಗಾಗಿಯೇ, ಈ ಪ್ರತಿಮೆಗೆ ‘ಪ್ರಗತಿ ಪ್ರತಿಮೆ’ (ಖಠಿaಠ್ಠಿಛಿ ಟ್ಛ P್ಟಟspಛ್ಟಿಜಿಠಿy) ಎಂದು ಹೆಸರಿಡಲಾಗುತ್ತಿದೆ.

-ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ

Follow Us:
Download App:
  • android
  • ios