ತಾಯಿ ಚಾಮುಂಡೇಶ್ವರಿ ಹರಕೆ ಸೀರೆ ಕಾಳಸಂತೆಯಲ್ಲಿ ಅರ್ಧಬೆಲೆ ಮಾರಾಟ; ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ದೂರು
ಮೈಸೂರು ದಸರಾ ವೇಳೆ ಭಕ್ತರು ನೀಡಿದ ರೇಷ್ಮೆ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪ ಚಾಮುಂಡಿ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ವಿರುದ್ಧ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದು, ಯುವಕನೊರ್ವ ಕಾರಿನಲ್ಲಿ ಸೀರೆಗಳನ್ನು ತುಂಬಿಕೊಂಡು ಹೋಗುತ್ತಿರುವ ವಿಡಿಯೋ ಸಾಕ್ಷಿಯಾಗಿದೆ.
ಮೈಸೂರು (ಡಿ.13): ಮೈಸೂರು ದಸರಾ ವೇಳೆ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಭಕ್ತರು ಸಮರ್ಪಿಸಿದ್ದ ಬೆಲೆ ಬಾಳುವ ರೇಷ್ಮೆ ಸೀರೆಗಳನ್ನ ಕಾಳ ಸಂತೆಯಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಿದ ಆರೋಪ ಕೇಳಿಬಂದಿದ್ದು, ಚಾಮುಂಡಿ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
ಮೈಸೂರು ದಸರಾ ವೇಳೆ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿಗೆ ಭಕ್ತಿಯಿಂದ ಸೀರೆಗಳನ್ನು ಸಮರ್ಪಿಸುತ್ತಾರೆ. ಇದರಲ್ಲಿ ಬಹುತೇಕ ರೇಷ್ಮೆ ಸೀರೆಗಳು ಇರುತ್ತವೆ. ಹೀಗೆ ಭಕ್ತಿಯಿಂದ ಸಮರ್ಪಿತವಾದ ಸೀರೆಗಳನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಿಸಿ ಕಾಳಸಂತೆಯಲ್ಲಿ ಅರ್ಧಬೆಲೆ ಮಾರಾಟ ಮಾಡುವ ಗಂಭೀರ ಆರೋಪ ರೂಪಾ ವಿರುದ್ಧ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ವಿಡಿಯೋ ಚಿತ್ರೀಕರಣ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.
ಮೈಸೂರು: ಮನೆ, ಕಾರಿನಲ್ಲಿ ದಾಸ್ತಾನು ಮಾಡಿದ್ದ ಗಾಂಜಾ ವಶಕ್ಕೆ, ಓರ್ವನ ಬಂಧನ
ಭಕ್ತರು ಭಕ್ತಿಯಿಂದ ಸಮರ್ಪಿಸಿದ ಲಕ್ಷಾಂತರ ಸೀರೆಗಳನ್ನು ಯುವಕನೋರ್ವ ರೂಪಾಗೆ ಸಂಬಂಧಿಸಿದ ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಕಾರಿನಲ್ಲಿ ತುಂಬಿಕೊಂಡು ಕಾಳ ಸಂತೆಯಲ್ಲಿ ಅರ್ಧಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ರೂಪಾ ಅವರನ್ನ ಸ್ನೇಹಮಯಿ ಕೃಷ್ಣ ವಿಚಾರಿಸಿದಾಗ ಸಮರ್ಪಕವಾಗಿ ಉತ್ತರ ನೀಡಿಲ್ಲ. ರೂಪಾ ಚಾಮುಂಡಿ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಚಾಮುಂಡೇಶ್ವರಿಗೆ ನೀಡುವ ಲಕ್ಷಾಂತರ ರೂಪಾಯಿ ಬೆಲೆಯ ಸೀರೆಗಳನ್ನ ಈ ರೀತಿ ಕದ್ದು ಕಾಳಸಂತೆಗೆ ಮಾರಾಟ ಮಾಡುತ್ತಿರುವ ದೂರುಗಳಿವೆ. ರೂಪಾ ಹಾಗೂ ಅವರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.