ಬೆಂಗಳೂರು (ಡಿ. 05): ಕರ್ನಾಟಕ ಬಂದ್‌ ವೇಳೆ ಬೀದಿ ಬದಿ ವ್ಯಾಪಾರಿಗಳಿಗೆ ಆಗುವ ನಷ್ಟಸೇರಿದಂತೆ ಆಗುವ ಆರ್ಥಿಕ ನಷ್ಟಕ್ಕೆ ಆಯೋಜಕರೇ ಹೊಣೆಯಾಗಿರುತ್ತಾರೆ ಎಂದು ಹೈಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ.

"

ರಾಜ್ಯದಲ್ಲಿ ಕೋವಿಡ್‌-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಲೆಟ್ಸ್‌ ಕಿಟ್ಸ್ ಫೌಂಡೇಶನ್‌ ಮತ್ತು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಈ ಸ್ಪಷ್ಟನೆ ನೀಡಿದೆ.

ರಾಜಕೀಯ ಪಕ್ಷಗಳ ಕಾರ್ಯಕ್ರಮ ಹಾಗೂ ರಾರ‍ಯಲಿಗಳಲ್ಲಿ ಆಗುತ್ತಿರುವ ಕೋವಿಡ್‌-ಮಾರ್ಗಸೂಚಿಗಳ ಉಲ್ಲಂಘನೆಯನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳಲ್ಲಿ ವಾಟಾಳ್‌ ಪಕ್ಷ ಸೇರಿದಂತೆ ರಾಜ್ಯದಲ್ಲಿ ಮಾನ್ಯತೆ ಪಡೆದಿರುವ ಇತರೆ ಅನೇಕ ರಾಜಕೀಯ ಪಕ್ಷಗಳು ಪ್ರತಿವಾದಿಯಾಗಿವೆ.

ಇಂದು ಕರ್ನಾಟಕ ಬಂದ್; ರಾಜಧಾನಿಯಲ್ಲಿ ಹೀಗಿದೆ ಬಂದ್ ಎಫೆಕ್ಟ್!

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು, ಬಂದ್‌ನಿಂದ ಸರ್ಕಾರದ ಖಜಾನೆಗೆ ಆರ್ಥಿಕ ನಷ್ಟಉಂಟಾಗುವ ಮತ್ತು ಕೋವಿಡ್‌ ಮಾರ್ಗಸೂಚಿಗಳು ಉಲ್ಲಂಘನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸುಪ್ರೀಂ ಕೋರ್ಟ್‌ ಆದೇಶ ಪ್ರಕಾರ ಬಂದ್‌ ವೇಳೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಆಯೋಜಕರೇ ಹೊಣೆಯಾಗಿರುತ್ತಾರೆ. ಬೀದಿ ಬದಿ ವ್ಯಾಪಾರಿಗಳಿಗಾಗುವ ನಷ್ಟಕ್ಕೂ ಅವರೇ ಹೊಣೆ ಎಂದು ಸ್ಪಷ್ಟಪಡಿಸಿತು.

ಅಲ್ಲದೇ, ಬಂದ್‌ ವೇಳೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಮಾರ್ಗಸೂಚಿ ಉಲ್ಲಂಘಿಸಿದರೆ, ತಪ್ಪಿತಸ್ಥರಿಂದ ಪೊಲೀಸರು ದಂಡ ಸಂಗ್ರಹಿಸಬೇಕು. ಈ ನಿರ್ದೇಶನಗಳ ಪಾಲಿಸಿದ ಬಗ್ಗೆ ವರದಿಯನ್ನು ಡಿ.17ಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್‌, ವಾಟಾಳ್‌ ಪಕ್ಷ ಸೇರಿದಂತೆ ಇತರೆ ರಾಜಕೀಯ ಪಕ್ಷಗಳಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.