ಮಂಡ್ಯ :  ಡಾ. ಮನಮೋಹನ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ಸಿನ ಹಾಲಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಂವಿಧಾನೇತರ ಅಧಿಕಾರ (ಎಕ್ಸ್‌ಟ್ರಾ ಕಾನ್ಸ್‌ಟಿಟ್ಯೂಷನಲ್‌ ಅಥಾರಟಿ) ಹೊಂದಿದ್ದರು. ಆ ಮನುಷ್ಯ ಸೋನಿಯಾ ಗಾಂಧಿ ಮಗ ಎನ್ನುವುದನ್ನು ಬಿಟ್ಟರೆ ಕಾಂಗ್ರೆಸ್ಸಿನಲ್ಲಿ ಏನೂ ಆಗಿರಲಿಲ್ಲ. ರಾಷ್ಟ್ರ ಹಾಗೂ ಸಂಸತ್‌ಗೆ ಜವಾಬ್ದಾರರಲ್ಲದಿದ್ದರೂ ಅವರ ಆದೇಶವನ್ನು ನಾವು ಪಾಲಿಸಬೇಕಾದ ಸ್ಥಿತಿ ಇತ್ತು ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತೀವ್ರ ವಾಗಾಳಿ ನಡೆಸಿದ್ದಾರೆ.

ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಮುನ್ನ ಕೃಷ್ಣ ಅವರು ರಾಹುಲ್‌ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಆನಂತರ ಹೆಚ್ಚೂಕಡಿಮೆ ಮೌನಕ್ಕೆ ಶರಣಾಗಿದ್ದ ಅವರು ಮತ್ತೊಮ್ಮೆ ಕಾಂಗ್ರೆಸ್‌ ಅಧ್ಯಕ್ಷರ ವಿರುದ್ಧ ಹರಿಹಾಯ್ದಿದ್ದಾರೆ. ಅವರೊಬ್ಬ ಸರ್ವಾಧಿಕಾರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ತಾವು ವಿದೇಶಾಂಗ ಸಚಿವ ಸ್ಥಾನ ತ್ಯಜಿಸಲು ರಾಹುಲ್‌ ಹೊರಡಿಸಿದ್ದ ಫರ್ಮಾನೇ ಕಾರಣ ಎಂದೂ ಹೇಳಿದ್ದಾರೆ.

ಮಂಡ್ಯ ನಗರದ ಬಿಜಿಎಸ್‌ ಸಮುದಾಯ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಬ್ಬ ಸರ್ವಾಧಿಕಾರಿ. ಈ ರಾಹುಲ್‌ಗೆ ಕಾಂಗ್ರೆಸ್‌ನಲ್ಲಿ ಸಂವಿಧಾನಕ್ಕಿಂತ ಹೆಚ್ಚಿನ ಅಧಿಕಾರವಿತ್ತು ಎಂದು ಹೇಳಿದರು.

ಮೂರೂವರೆ ವರ್ಷಗಳ ಕಾಲ ವಿದೇಶಾಂಗ ಸಚಿವನಾಗಿ ಕೆಲಸ ಮಾಡಿದೆ. ಈ ವೇಳೆ ರಾಹುಲ್‌ ಗಾಂಧಿ ಒಂದು ಫರ್ಮಾನು ಹೊರಡಿಸಿದರು. ಆಗ ಆ ಮನುಷ್ಯ ಸೋನಿಯಾ ಗಾಂಧಿ ಮಗ ಎನ್ನುವುದನ್ನು ಬಿಟ್ಟರೆ ಕಾಂಗ್ರೆಸ್‌ ಪಕ್ಷದಲ್ಲಿ ಏನೂ ಆಗಿರಲಿಲ್ಲ. ಸಚಿವ ಸಂಪುಟದಲ್ಲಿ 80 ವರ್ಷ ಮೇಲ್ಪಟ್ಟವರು ಯಾರೂ ಮಂತ್ರಿಯಾಗುವಂತಿಲ್ಲ ಎಂದು ಫರ್ಮಾನು ಹೊರಡಿಸಿದರು. ಕೂಡಲೇ ನಾನು ರಾಜೀನಾಮೆ ಕೊಟ್ಟು ಹೊರಬಂದೆ ಎಂದು ತಿಳಿಸಿದರು.

ಡಾ. ಸಿಂಗ್‌ಗೂ ಗೊತ್ತಾಗುತ್ತಿರಲಿಲ್ಲ:

ಕಾಂಗ್ರೆಸ್‌ ಪಕ್ಷದಲ್ಲಿ ಆಗುತ್ತಿದ್ದ ಕೆಲವೊಂದು ವಿಚಾರಗಳು ಹಾಗೂ ಆದೇಶಗಳು ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಗೊತ್ತಾಗದೇ ನಡೆದು ಹೋಗುತ್ತಿದ್ದವು. ಪ್ರಧಾನಿಯ ಗಮನಕ್ಕೆ ತಾರದೇ ಕೆಲವೊಂದು ಆದೇಶಗಳನ್ನು ಹೊರಡಿಸುತ್ತಿದ್ದರು. ಹೀಗಾಗಿ ರಾಹುಲ್‌ ಗಾಂಧಿ ಪಕ್ಷದಲ್ಲಿ ಸಂವಿಧಾನಕ್ಕಿಂತ (ಎಕ್ಟ್ರಾ ಕಾನ್ಸಿಟ್ಯೂಷನಲ… ಅಥಾರಿಟಿ) ಹೆಚ್ಚು ಹಿಡಿತ ಹೊಂದಿದ್ದರು. ಮನಮೋಹನ್‌ ಸಿಂಗ್‌ ಆದೇಶಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿತ್ತು. ಪಕ್ಷದಲ್ಲಿ ಯಾವ ಹುದ್ದೆ ಇಲ್ಲದಿದ್ದರೂ ರಾಹುಲ್‌ ಅವರು ಪ್ರಧಾನಿ ಮನಮೋಹನ ಸಿಂಗ್‌ ಆದೇಶಗಳನ್ನು ಹರಿದು ಬೀಸಾಡಿದ್ದೂ ಉಂಟು. ರಾಷ್ಟ್ರಕ್ಕೆ ಹಾಗೂ ಸಂಸತ್‌ಗೆ ಜವಾಬ್ದಾರರಲ್ಲದಿದ್ದರೂ ಅವರ ಆದೇಶವನ್ನು ನಾವು ಪಾಲಿಸಬೇಕಾಗಿತ್ತು ಎಂದು ಟೀಕಿಸಿದರು.

2004-14ರವರೆಗೆ 10 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ ಪಕ್ಷ ದೇಶವನ್ನು ದಿವಾಳಿಯ ಹಂತಕ್ಕೆ ತಂದು ನಿಲ್ಲಿಸಿತ್ತು. ಆ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರಿಗಿಂತ ರಾಹುಲ್‌ಗೇ ಹೆಚ್ಚು ಅಧಿಕಾರವಿತ್ತು ಎಂದರು.

ನಾನು 2009-14ರ 2ನೇ ಅವಧಿಯಲ್ಲಿ ಮಂಡಲದಲ್ಲಿ ವಿದೇಶಾಂಗ ಸಚಿವನಾಗಿದ್ದೆ. ಆ ವೇಳೆ ಸಂಪುಟದಲ್ಲಿ ವಿಷಪೂರಿತ ಪರಿಸ್ಥಿತಿ ಇತ್ತು. ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಕೈಯಲ್ಲಿ ಮಂತ್ರಿಮಂಡಲ ಹಿಡಿತವಿರಲಿಲ್ಲ. ಹೀಗಾಗಿ ದೊಡ್ಡ ದೊಡ್ಡ ಹಗರಣಗಳು ದೇಶವನ್ನೇ ಕಿತ್ತುತಿಂದವು. ಕಾಮನ್‌ ವೆಲ್ತ್‌ ಗೇಮ್ 2ಜಿ, ಕಲ್ಲಿದ್ದಲು ಹಗರಣಗಳು ಭ್ರಷ್ಟತೆಗೆ ಕೈಗನ್ನಡಿ. ಮಂತ್ರಿಗಳ ಮೇಲೆ ಮನಮೋಹನ ಸಿಂಗ್‌ ಹಿಡಿತ ಸಾಧಿಸಲು ಆಗಲೇ ಇಲ್ಲ ಎಂದು ಕಿಡಿಕಾರಿದರು.

ಮಂಡ್ಯ ಬಿಜಿಎಸ್‌ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಮಾತನಾಡಿದರು.