ಬೆಂಗಳೂರು(ಮಾ.23): ಕೊರೋನಾ ವೈರಸ್‌ನ ಎರಡನೇ ಅಲೆ ಹರಡುವುದನ್ನು ತಡೆಯಲು ಸದ್ಯಕ್ಕೆ ಸೆಮಿ ಲಾಕ್‌ಡೌನ್‌ನಂಥ ಕಠಿಣ ಕ್ರಮಗಳನ್ನು ಕೈಗೊಳ್ಳದೆ ಕಾದು ನೋಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೋನಾ ವೈರಸ್‌ನ ಎರಡನೇ ಅಲೆ ಹರಡುತ್ತಿರುವ ಬಗ್ಗೆ ಚರ್ಚೆ ನಡೆದರೂ ಸೆಮಿ ಲಾಕ್‌ಡೌನ್‌ನಂಥ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಸರಿಯಲ್ಲ. ಅದರ ಬದಲು ಜನರಿಗೆ ಅರಿವು ಮೂಡಿಸುವ ಬಗ್ಗೆ ಒತ್ತು ನೀಡಬೇಕು ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ವ್ಯಕ್ತಪಡಿಸಿದರು ಎನ್ನಲಾಗಿದೆ.

ಲಾಕ್‌ಡೌನ್‌ ಹೇರುವ ಬದಲಿಗೆ ಕೋವಿಡ್‌ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಉಪಚುನಾವಣೆ ವೇಳೆ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಬೇಕು ಎಂದು ಎಲ್ಲಾ ಸಚಿವರಿಗೂ ಮುಖ್ಯಮಂತ್ರಿಗಳು ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಒಂದು ವಾರ ಅವಕಾಶ:

ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್‌, ಸಾಕಷ್ಟುಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಜನರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಜನ ಅವರವರ ರಕ್ಷಣೆ ಮಾಡಿಕೊಳ್ಳಬೇಕು. ಇನ್ನೊಂದು ವಾರ ಕಾಲ ಅವಕಾಶ ಕೊಟ್ಟಿದ್ದೇವೆ. ಜನರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಮತ್ತೊಂದೆಡೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌, ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರಬೇಕಾದರೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಒಂದು ವೇಳೆ ಯಾರಾದರೂ ಮಾಸ್ಕ್‌ ಧರಿಸದಿದ್ದರೆ 250 ರು. ದಂಡ ವಿಧಿಸಲಾಗುವುದು. ಸಾಮಾಜಿಕ ಅಂತರ, ಮಾಸ್ಕ್‌ ಧಾರಣೆ, ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಕೋವಿಡ್‌ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಪಾಲನೆಯ ಉಸ್ತುವಾರಿಗಾಗಿ ಮಾರ್ಷಲ್‌ಗಳನ್ನು ನೇಮಿಸುತ್ತೇವೆ.

ಮದುವೆ, ಸಭೆ, ಸಮಾರಂಭಗಳಿಗೆ ಹೆಚ್ಚು ಜನರು ಸೇರದಂತೆ, ಕೋವಿಡ್‌ ನಿಯಮ ಪಾಲನೆ ಆಗುವಂತೆ ಕ್ರಮ ಕೈಗೊಳ್ಳುತ್ತೇವೆ. ಕಲ್ಯಾಣ ಮಂಟಪದಲ್ಲಿ ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯೋಜಕರದ್ದು. ನಿಯಮ ಉಲ್ಲಂಘನೆಯಾದರೆ ಕಲ್ಯಾಣ ಮಂಟಪದ ಆಯೋಜಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.