ಬೆಂಗಳೂರು(ಆ.13): ಮಂಗಳವಾರ ರಾತ್ರಿ ಹಿಂಸಾಚಾರ ಉಂಟಾಗಿ ಪ್ರಕ್ಷುಬ್ಧಗೊಂಡಿದ್ದ ರಾಜಧಾನಿ ಬೆಂಗಳೂರಿನ ಪೂರ್ವಭಾಗದಲ್ಲೀಗ ಶಾಂತಿ ನೆಲೆಸಿದೆ.

ರಾತ್ರಿ ಸತತ ಐದು ಗಂಟೆಗಳ ಗಲಾಟೆಯಿಂದ ಮೂಡಿದ್ದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗೋಲಿಬಾರ್‌, ಲಾಠಿ ಚಾರ್ಜ್‌ ಸೇರಿದಂತೆ ಸಕಲ ಕ್ರಮ ಕೈಗೊಂಡರು. ಗೋಲಿಬಾರ್‌ ಬಳಿಕ ಜೀವಭೀತಿಯಿಂದ ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಆಯುಕ್ತ ಕಮಲ್‌ ಪಂತ್‌, ಗಲಭೆಪೀಡಿತ ಪ್ರದೇಶದಲ್ಲಿ ಬಿಗಿ ಭದ್ರತೆ ಕಲ್ಪಿಸಿದರು. ಈ ಗಲಭೆಪೀಡಿತ ಕಡೆ ಮುಂಜಾನೆಯಿಂದಲೇ ಜನರ ಸಂಚಾರಕ್ಕೆ ನಿಷೇಧವಿತ್ತು.

ಬೆಂಗಳೂರು ಗಲಭೆ: ಅನಿವಾರ್ಯವಾಗಿ ಕಿಡಿಗೇಡಿಗಳಿಗೆ ಗುಂಡು, ಸಚಿವ ಬೊಮ್ಮಾಯಿ

ಗಲಭೆ ನಂತರ ನಸುಕಿನ 3 ಗಂಟೆ ಬಳಿಕ ಸಣ್ಣದೊಂದು ಗಲಾಟೆ ಸಹ ಸಂಭವಿಸದೆ ಸಂಪೂರ್ಣವಾಗಿ ಪರಿಸ್ಥಿತಿ ಪೊಲೀಸರ ಹತೋಟಿಗೆ ಬಂದಿತು. ಆದರೂ ಕೆಲವೆಡೆ ಬೂದಿ ಮುಚ್ಚಿದ ಕೆಂಡದ ವಾತಾವರಣ ಗೋಚರಿಸಿದೆ. ಈ ಸೂಕ್ಷ್ಮ ಅರಿತು ಆ ಪ್ರದೇಶಗಳಲ್ಲಿ ಮತ್ತಷ್ಟುದಿನ ಬಿಗಿ ಬಂದೋಬಸ್‌್ತ ಮುಂದುವರೆಸಲು ಆಯುಕ್ತರು ನಿರ್ಧರಿಸಿದ್ದಾರೆ. ಬುಧವಾರ ಐವರು ಐಜಿಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೇ ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆ ನಿರ್ವಹಿಸಿದ್ದಾರೆ. ಗಲ್ಲಿ ಗಲ್ಲಿಯಲ್ಲೂ ಖಾಕಿಧಾರಿಗಳು ಪಹರೆ ನಡೆಸಲಾಗಿದೆ.

ಅಘೋಷಿತ ಬಂದ್‌ ಆಚರಣೆ:

ಗಲಭೆ ಹಿನ್ನೆಲೆಯಲ್ಲಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಕಾವಲ್‌ಭೈರಸಂದ್ರ, ಶಿವಾಜಿನಗರ, ಇಸ್ಲಾಂಪುರ, ಗೋವಿಂದಪುರ ಹಾಗೂ ಬಾಣಸವಾಡಿ ಸೇರಿದಂತೆ ಪೂರ್ವ ಭಾಗದಲ್ಲಿ ಅಘೋಷಿತ ಬಂದ್‌ ವಾತಾವರಣ ಕಂಡು ಬಂದಿತು.
ಅಂಗಡಿ ಮುಗ್ಗಟ್ಟುಗಳು ಬಾಗಿಲು ಮುಚ್ಚಿದ್ದವು. ಜನರ ಸಂಚಾರ ವಿರಳವಾಗಿತ್ತು. ಕಣ್ಣು ಹಾಯಿಸಿದೆಡೆ ಪೊಲೀಸರು ಕಂಡು ಬಂದರು. ಇನ್ನು ಮುಂಜಾಗ್ರತಾ ಕ್ರಮವಾಗಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ 24 ಗಂಟೆಗಳ ನಿಷೇಧಾಜ್ಞೆಯನ್ನು ಆಯುಕ್ತರು ಜಾರಿಗೊಳಿಸಿದ್ದಾರೆ.

ಅನಗತ್ಯವಾಗಿ ರಸ್ತೆಗಿಳಿದ ಜನರಿಗೆ ಬೆಳಗ್ಗೆಯಿಂದಲೇ ಪೊಲೀಸರು ಲಾಠಿ ರುಚಿ ತೋರಿಸಿದರು. ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಹಾಗೂ ಕಚೇರಿ ಬಳಿ ಜನರು ಜಮಾಯಿಸಿ ದುಃಖ ವ್ಯಕ್ತಪಡಿಸಿದರು. ಅದೇ ರೀತಿ ಶಾಸಕರ ಹಿರಿಯ ಸೋದರಿ ಜಯಂತಿ ಮನೆಗೆ ಸ್ನೇಹಿತರು ಹಾಗೂ ಬಂಧುಗಳು ತೆರಳಿ ಸ್ವಾಂತನ ಹೇಳಿದರು.