ಹೋಟೆಲ್‌ಗಳ ಸಿಸಿಟೀವಿ ದೃಶ್ಯವಾಳಿ ಸಂಗ್ರಹಿಸಿದ ಎಸ್‌ಐಟಿ| ಮಾಸ್ಟರ್ ಮೈಂಡ್ ಪತ್ರಕರ್ತನ ಕೊನೆ ಕರೆ ಆಧರಿಸಿ ಪತ್ತೆಗೆ ಕಾರ್ಯಾಚರಣೆ| ಮಧ್ಯಪ್ರದೇಶದ ಭೋಪಾಲ್‌ನಲ್ಲೇ ಕೊನೆ ಬಾರಿ ಮಾತನಾಡಿದ ನರೇಶ್‌ಗೌಡ|
ಬೆಂಗಳೂರು(ಮಾ.25): ತಮ್ಮ ಬಲೆಗೆ ಬೀಳದೆ ಹೊರರಾಜ್ಯಗಳಲ್ಲಿ ಅವಿತುಕೊಂಡಿರುವ ಮಾಜಿ ಸಚಿವರ ಸಿ.ಡಿ. ಸ್ಫೋಟ ತಂಡದ ಪತ್ತೆದಾರಿಕೆ ಮುಂದುವರೆಸಿರುವ ಎಸ್‌ಐಟಿ ಪೊಲೀಸರು, ಈಗ ‘ಮಾಸ್ಟರ್ ಮೈಂಡ್’ ಎನ್ನಲಾದ ಪತ್ರಕರ್ತ ನರೇಶ್‌ಗೌಡ ಮಾಡಿರುವ ಕೊನೆ ಕರೆ ಆಧರಿಸಿ ಕಾರ್ಯಾಚರಣೆ ಬಿರುಸುಗೊಳಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲೇ ಕೊನೆ ಬಾರಿ ನರೇಶ್‌ಗೌಡ ಮಾತನಾಡಿದ್ದಾನೆ ಎಂಬ ಮಾಹಿತಿ ಪಡೆದ ಎಸ್‌ಐಟಿ ಅಧಿಕಾರಿಗಳು, ಇದೇ ವಿಚಾರವಾಗಿ ಆತನ ಪತ್ನಿಯನ್ನು ಕೂಡ ವಿಚಾರಣೆ ನಡೆಸಿದ್ದಾರೆ. ಆದರೆ ಆತನ ಕುಟುಂಬದವರು ನರೇಶ್‌ಗೌಡನ ಇರುವಿಕೆ ಬಗ್ಗೆ ಯಾವುದೇ ಸುಳಿವು ಬಹಿರಂಗಪಡಿಸಿಲ್ಲ ಎನ್ನಲಾಗಿದೆ. ಇನ್ನೊಂದೆಡೆ ಭೋಪಾಲ್‌ನಲ್ಲೇ ಬೀಡು ಬಿಟ್ಟಿರುವ ಎಸ್‌ಐಟಿ ಅಧಿಕಾರಿಗಳು, ಸಿ.ಡಿ. ಸ್ಫೋಟದ ಗುಂಪಿನ ಆಶ್ರಯದಾತರ ಪತ್ತೆಗೆ ತೀವ್ರ ಹುಡುಕಾಟ ನಡೆಸಿದ್ದಾರೆ.
ಜಾರಕಿಹೊಳಿ ಸೀಡಿ ಕೇಸ್ : ಭಾರಿ ಸಂಶಯಕ್ಕೆ ಎಡೆ ಮಾಡಿದ ನಡೆ
ಬೆಂಗಳೂರು ತೊರೆದ ಬಳಿಕ ಉತ್ತರ ಭಾರತದಲ್ಲಿ ತಲೆಮರೆಸಿಕೊಂಡಿರುವ ವಿವಾದಿತ ಯುವತಿ ಹಾಗೂ ಪತ್ರಕರ್ತರಾದ ನರೇಶ್‌ಗೌಡ ಮತ್ತು ಶ್ರವಣ್, ದೆಹಲಿ, ಉತ್ತರಪ್ರದೇಶದ ವಾರಾಣಾಸಿ, ಲಖನೌ ಹಾಗೂ ಮಧ್ಯಪ್ರದೇಶದ ಭೋಪಾಲ್ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಅವರಿಗೆ ಐದಾರು ಪಂಚತಾರಾ ಹೋಟೆಲ್‌ಗಳಲ್ಲೇ ರಾಜಾಶ್ರಯ ಸಿಕ್ಕಿದೆ ಎನ್ನಲಾಗುತ್ತಿದೆ. ಮೊಬೈಲ್ ಟವರ್ ಲೋಕೇಷನ್ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಸಿ.ಡಿ. ಸ್ಫೋಟದ ಗುಂಪಿನ ಬೆನ್ನತ್ತಿರುವ ಪೊಲೀಸರು, ಶಂಕಿತ ಆರೋಪಿಗಳು ತಂಗಿದ್ದ ಹೋಟೆಲ್‌ಗಳಲ್ಲಿ ಪರಿಶೀಲಿಸಿ ಸಿಸಿಟೀವಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತ್ಯೇಕವಾದ ತಂಡ?
ಇನ್ನೊಂದೆಡೆ ಭೋಪಾಲ್ ತಲುಪಿದ ಬಳಿಕ ಸಿ.ಡಿ. ಸ್ಫೋಟದ ಗುಂಪಿನ ಸದಸ್ಯರು ಪ್ರತ್ಯೇಕವಾಗಿದ್ದು, ವಿವಾದಿತ ಯುವತಿಯನ್ನು ಬೇರೆಡೆ ಸುರಕ್ಷಿತ ತಾಣಕ್ಕೆ ತಲುಪಿಸಿದ್ದಾರೆ ಎನ್ನಲಾಗುತ್ತಿದೆ. ನೂರಾರು ಕಿ.ಮೀ. ತಲೆಮರೆಸಿಕೊಂಡು ಓಡಿದರೂ ಬೆಂಬಿಡದೆ ಬೆನ್ನಟ್ಟಿರುವ ಎಸ್‌ಐಟಿ ಕಾರ್ಯಾಚರಣೆಗೆ ಆತಂಕಗೊಂಡಿರುವ ಸಿ.ಡಿ. ಸ್ಫೋಟದ ತಂಡವು, ಎಸ್‌ಐಟಿ ದಿಕ್ಕು ತಪ್ಪಿಸುವ ಸಲುವಾಗಿ ಒಬ್ಬೊಬ್ಬರು ಒಂದು ದಿಕ್ಕಿನ ಕಡೆಗೆ ಹೋಗಿದ್ದಾರೆ ಎಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
