ಗಣಿಗಾರಿಕೆ ಉದ್ಯಮ ಬೆಳೆಸಲು ಸರ್ಕಾರ ಬದ್ಧವಾಗಿದೆ. ಪರವಾನಗಿ ಪಡೆಯುವುದು, ನವೀಕರಣಕ್ಕಿರುವ ಕಾನೂನು ಪ್ರಕ್ರಿಯೆ, ಸರ್ಕಾರಿ ನೀತಿಗಳನ್ನು ಸರಳಗೊಳಿಸಲಾಗುವುದು. ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸಲಾಗುವುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು(ಫೆ.19): ‘ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಗೆ ತೊಡಕಾಗಿರುವ ಕಾನೂನು ಅಂಶಗಳನ್ನು ನಿವಾರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಯಮಿಗಳಿಗೆ ಭರವಸೆ ನೀಡಿದರು. ಅವರು ಶನಿವಾರ ಭಾರತೀಯ ಗ್ರಾನೈಟ್ ಮತ್ತು ಗಣಿ ಉದ್ಯಮದ ಒಕ್ಕೂಟದಿಂದ (ಎಫ್‌ಐಜಿಎಸ್‌ಐ) ನಡೆದ ‘ಸ್ಟೋನಾ- 2023’ 15ನೇ ಅಂತಾರಾಷ್ಟ್ರೀಯ ಗ್ರಾನೈಟ್ ಮತ್ತು ಕಲ್ಲುಗಳ ವಸ್ತು ಪ್ರದರ್ಶನ’ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಗಣಿಗಾರಿಕೆ ಉದ್ಯಮ ಬೆಳೆಸಲು ಸರ್ಕಾರ ಬದ್ಧವಾಗಿದೆ. ಪರವಾನಗಿ ಪಡೆಯುವುದು, ನವೀಕರಣಕ್ಕಿರುವ ಕಾನೂನು ಪ್ರಕ್ರಿಯೆ, ಸರ್ಕಾರಿ ನೀತಿಗಳನ್ನು ಸರಳಗೊಳಿಸಲಾಗುವುದು. ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸಲಾಗುವುದು. ಯಾವ ಉದ್ಯಮಿಗೂ ಅನಗತ್ಯ ಕಿರುಕುಳ ಅನ್ನಿಸದಂತೆ ಕ್ಲಿಷ್ಟಕಾನೂನು ವಿಧಾನಗಳನ್ನು ತೆಗೆದುಹಾಕಲಾಗುವುದು. ಪಾರದರ್ಶಕತೆ ಹಾಗೂ ದಕ್ಷತೆಯಿಂದ ಗಣಿ ಉದ್ಯಮ ನಡೆಯಬೇಕು’ ಎಂದರು.
ಕಲ್ಲು ಗಣಿಗಾರಿಕೆಗೆ ಒಸಿ ನೀಡಲು ವಿಳಂಬ ಮಾಡಿದ ಎಸಿ ವಿರುದ್ಧ ಕ್ರಮ: ಸಚಿವ ಅಶೋಕ್
‘ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಿಗಿಂತ ಭಿನ್ನವಾದ ಗಣಿನೀತಿ ನಮ್ಮದಾಗಿದ್ದು, ಇಲ್ಲಿನ ಗಣಿಗಳಿಗೂ ಅಲ್ಲಿನ ಗಣಿಗಳಿಗೂ ಬಹಳ ವ್ಯತ್ಯಾಸವಿದೆ. ನಮ್ಮಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಕಬ್ಬಿಣದ ಅದಿರು ಲಭ್ಯವಿದೆ. ಉದ್ಯಮಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಾಯ್ದುಕೊಳ್ಳಬೇಕು. ಗಣಿ ಒಕ್ಕೂಟವು ಮಾಹಿತಿ ವಿನಿಮಯದ ವೇದಿಕೆಯನ್ನು ಒದಗಿಸಿ, ಉತ್ಪಾದನೆ ಹಾಗೂ ಮಾರಾಟದಲ್ಲಿ ಸುಧಾರಣೆ ತರಲು ಪ್ರಯತ್ನಿಸಬೇಕು’ ಎಂದರು.
‘ಗಣಿ ಉದ್ಯಮಿಗಳು ಸುಸ್ಥಿರ ಗಣಿಗಾರಿಕೆಗೆ ಮಹತ್ವ ನೀಡಬೇಕು. ಅಕ್ರಮ, ಮಿತಿಯಿಲ್ಲದ ಗಣಿಗಾರಿಕೆ ಮಾಡಿದರೆ ಭವಿಷ್ಯದ ಪೀಳಿಗೆಯ ಹಕ್ಕುಗಳನ್ನು ಕದ್ದಂತೆ ಆಗುತ್ತದೆ. ಜತೆಗೆ ಆರ್ಥಿಕಾಭಿವೃದ್ಧಿಗೂ ಇದು ತೊಡಕು. ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣಗಳ ಬಳಕೆಯಿಂದ ಉದ್ಯಮವನ್ನು ಮುನ್ನಡೆಸಬೇಕು. ಅವೈಜ್ಞಾನಿಕ ಗಣಿಗಾರಿಕೆಯಿಂದ ಪ್ರಕೃತಿಯ ಸಂಪನ್ಮೂಲ ನಷ್ಟವಾಗುತ್ತದೆ. ಉದ್ಯಮಿಗಳಿಗೂ ಆರ್ಥಿಕ ಹೊರೆಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸುವುದು ಅಗತ್ಯ’ ಎಂದರು.
ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆ ಕರಗುತ್ತಿದೆ ಚಂದ್ರಗುತ್ತಿ ಬೆಟ್ಟ; ಅರಣ್ಯ ಇಲಾಖೆ ಮೌನ!
ಒಕ್ಕೂಟದ ಅಧ್ಯಕ್ಷ ಇಶಿಂದರ್ ಸಿಂಗ್, ‘ಕೋವಿಡ್ ಸವಾಲನ್ನು ಸಮರ್ಥವಾಗಿ ಎದುರಿಸಿರುವ ಗಣಿ ಉದ್ಯಮ ಇದೀಗ ಚೇತರಿಸಿಕೊಂಡಿದೆ. ಸರ್ಕಾರಗಳು ಅನವಶ್ಯಕ ಕಾನೂನು ಹೇರಿಕೆ ಮಾಡದೆ ಸುಲಲಿತವಾಗಿ ಉದ್ಯಮ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕು’ ಎಂದರು.
ಈ ವೇಳೆ ಗಣಿ ಉದ್ಯಮದಲ್ಲಿ ಜೀವಮಾನ ಸಾಧನೆಗೆ ಮುನಾವರ್ ಬಾಷಾ ಸೇರಿ ಇತರರನ್ನು ಪುರಸ್ಕರಿಸಲಾಯಿತು. ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ರಾಜಸ್ಥಾನ ಗಣಿ ಒಕ್ಕೂಟದ ರಾಜೀವ್ ಅರೋರಾ, ಮನೋಜ್‌ಕುಮಾರ್ ಸಿಂಗ್, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಇದ್ದರು.
