ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆ ಕರಗುತ್ತಿದೆ ಚಂದ್ರಗುತ್ತಿ ಬೆಟ್ಟ; ಅರಣ್ಯ ಇಲಾಖೆ ಮೌನ!
ಪಶ್ಚಿಮಘಟ್ಟದ ಮಲೆನಾಡ ಸೆರಗಿನಲ್ಲಿ ಪ್ರಾಕೃತಿಕ ಸೊಬಗು ಹೊಂದಿರುವ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ, ಶ್ರೀ ರೇಣುಕಾಂಬೆಯ ನೆಲೆಬೀಡು ಚಂದ್ರಗುತ್ತಿ ಕಲ್ಲು ಗಣಿಗಾರಿಕೆಗೆ ಸಿಲುಕಿ ನಲುಗುತ್ತಿದೆ.
ಎಚ್.ಕೆ.ಬಿ. ಸ್ವಾಮಿ
ಸೊರಬ (ಫೆ.11) : ಪಶ್ಚಿಮಘಟ್ಟದ ಮಲೆನಾಡ ಸೆರಗಿನಲ್ಲಿ ಪ್ರಾಕೃತಿಕ ಸೊಬಗು ಹೊಂದಿರುವ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ, ಶ್ರೀ ರೇಣುಕಾಂಬೆಯ ನೆಲೆಬೀಡು ಚಂದ್ರಗುತ್ತಿ ಕಲ್ಲು ಗಣಿಗಾರಿಕೆಗೆ ಸಿಲುಕಿ ನಲುಗುತ್ತಿದೆ.
ಗಣಿಗಾರಿಕೆ ಪರಿಣಾಮ ಐತಿಹಾಸಿಕ ಕೋಟೆಗೆ ರಕ್ಷಾ ಕವಚದಂತ್ತಿದ್ದ ಕಲ್ಲುಗುಡ್ಡಗಳು ಮಾಯವಾಗುತ್ತಿವೆ. ಪಗಡೆ ಕಲ್ಲುಗುಡ್ಡ ಸಂಪೂರ್ಣ ನಾಶವಾಗಿದೆ. ಗಡಿಗೆ ಗುಡ್ಡ ನವಿಲುಗಳಿಗೆ ಆಶ್ರಯ ತಾಣವಾಗಿದ್ದ ಹಕ್ಕಿಬಲೆ ಕರಗುತ್ತಿದೆ. ಗುಹೆಗಳಲ್ಲಿ ಹುಲಿಗಳು ವಾಸವಾಗಿದ್ದವು ಎಂದು ಹೇಳಲಾಗುತ್ತಿದ್ದ ಗುರಿಕೆ ಬಂಡೆ ಛಿದ್ರಗೊಂಡಿದೆ. ಜನತೆ ಚಪ್ಪಲಿ ಮೆಟ್ಟಿಓಡಾಡಲು ಹೆದರುತ್ತಿದ್ದ, ಪೂಜ್ಯ ಭಾವನೆ ಹೊಂದಿದ್ದ ಬಸವನಕಲ್ಲು ಮೇಲೆಯೂ ಗಣಿಗಾರಿಕೆ ಹೆಜ್ಜೆ ಮೂಡಿಸಿದೆ. ಜೋರು ಪ್ರತಿಧ್ವನಿಸುತ್ತಿದ್ದ ಕೂಗಪ್ಪನ ಕಲ್ಲು, ನಿಧಾನ ಪ್ರತಿಧ್ವನಿ ನೀಡುತ್ತಿದ್ದ ಕೆಪ್ಪಗನ ಕಲ್ಲುಬಂಡೆ ಸಹ ಧ್ವನಿ ಕಳೆದುಕೊಂಡಿವೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ.
ಬೆಳಗಾವಿ: ಜನರ ನೆಮ್ಮದಿ ಕಳೆಯುತ್ತಿರುವ ಕಲ್ಲು ಗಣಿಗಾರಿಕೆ
ರಾಜರು ಬೇಟೆಯಾಡುತ್ತಿದ್ದ ಸ್ಥಳ ಎನ್ನಲಾದ ಹಿರೇಗುಡ್ಡ, ಮೆಟ್ಟಿಲುಕಲ್ಲು ಬಂಡೆಗಳು ಗಣಿ ಧಣಿಗಳ ಹೊಡೆತಕ್ಕೆ ಬಲಿಯಾಗುತ್ತಿವೆ. ದಾಸರಕಲ್ಲು ಗುಡ್ಡವೂ ಪದ ಕಳೆದುಕೊಂಡಿದೆ. ಜಾರಗಲ್ಲು ಗುಡ್ಡ ಕೈ ಜಾರಿದೆ. ಚನ್ನಂಗಿ ಬಂಡೆ ಜೀವ ಕಳೆದುಕೊಂಡಿದೆ. ಮಾವಿನಕಲ್ಲು ಬಂಡೆ, ಶಟ್ಟೆಮ್ಮನ ಗುಡ್ಡ, ಸಿದ್ದಪ್ಪನ ಬಂಡೆ, ನಿಡಗಲ್ಲು ಬಂಡೆ, ಬೀರಪ್ಪ ಮತ್ತು ಚೌಡಮ್ಮನ ಬಂಡೆ, ದೊಡ್ಡ ಬಿಸಿಲು ಭೂತಪ್ಪನ ಗುಡ್ಡಗಳಲ್ಲಿ ಯಾರ ಭಯವೂ ಇಲ್ಲದೇ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎನ್ನಲಾಗಿದೆ.
ಐತಿಹಾಸಿಕ ಕೋಟೆಗೆ, ಇಲ್ಲಿನ ವನಸಂಪತ್ತಿಗೆ ಧಕ್ಕೆ ತರುವ ಅನಧಿಕೃತ ಬಿಳಿಗಲ್ಲು ಗಣಿಗಾರಿಕೆ(Unauthorized whitestone mining), ಅಂತರ್ಜಲ ಕುಸಿತಕ್ಕೆ ಕಾರಣವಾಗುವ, ಪರಿಸರ ಅಸಮತೋಲನಕ್ಕೆ ಪ್ರಧಾನವಾಗಿರುವ ಜಂಬಿಟ್ಟಿಗೆ ಕ್ವಾರೆ, ಸಾಲದೆಂಬಂತೆ ಅಲ್ಲಿರುವ ನೂರಾರು ವರ್ಷಗಳ ಬೆಲೆಬಾಳುವ ಮರಗಳ ಮಾರಣಹೋಮ ನಡೆಯುತ್ತಿದೆ. ಈಚೆಗೆ ಇಲ್ಲಿನ ಬಸ್ತಿಕೊಪ್ಪ ಹಾಗೂ ಬೆಟ್ಟದ ಉತ್ತರ ಭಾಗದಲ್ಲಿನ ನೂರಾರು ನಾಟದ ಮರಗಳು ಕೊಡಲಿ ಏಟಿಗೆ ನೆಲಕ್ಕೆ ಉರುಳುತ್ತಿವೆ. ಇವೆಲ್ಲವೂ ವ್ಯಾಪಾರಿ ದೃಷ್ಟಿಯಿಂದ ಕಡಿಯಲಾಗುತ್ತಿದೆ. ಇಷ್ಟಾದರೂ ಅರಣ್ಯ ಇಲಾಖೆ ಮೌನ ಎಂಬುದು ಗ್ರಾಮಸ್ಥರು ಆರೋಪ.
ಚಂದ್ರಗುತ್ತಿ ಬೆಟ್ಟ(Chandragutti betta)ಪ್ರದೇಶದಲ್ಲಿ ಅಪರೂಪದ ಚಿಟ್ಟಳಿಲು, ಬರ್ಕ, ಚಿಪ್ಪುಹಂದಿ, ಮುಳ್ಳುಹಂದಿ, ಕರಡಿಗಳು ಅಪರೂಪಕ್ಕೆ ಕಾಣಿಸಿಕೊಂಡಿದ್ದು, ಗಣಿಗಾರಿಕೆಯ ರಾಸಾಯನಿಕ ಸ್ಫೋಟದ ಶಬ್ಧ ಹಾಗೂ ಅಗತ್ಯ ಆಹಾರ ದೊರಕದ ಕಾರಣ ಕಣ್ಮರೆ ಆಗುತ್ತಿವೆ. ಅಪರೂಪದ ಗಿಡಮೂಲಿಕೆಗಳಾದ ಸರ್ಪಗಂಧಿ, ಇಸಮುಂಗರಿ, ಹಿರೆಮದ್ದಿನ ಗಿಡ, ಅಮೃತಬಳ್ಳಿ, ಚಿತ್ರಾಮೂಲ, ಝರಿ ಗಿಡಗಳು, ಕಲ್ಲುಹೂವು, ಬೆಲೆ ಬಾಳುವ ಹೊನ್ನೆ, ಬೀಟೆ, ದೇವದಾರು, ತೇಗ, ಮಸಿ ಮುಂತಾದ ಮರಗಳು ವಿನಾಶದ ಅಂಚಿನಲ್ಲಿವೆ.
ಐತಿಹಾಸಿಕ ಅವಶೇಷಗಳ ಕಣ್ಮರೆ
ಕ್ರಿ.ಶ. 13-16ನೇ ಶತಮಾನದಲ್ಲಿ ರಾಜ್ಯದ ಪ್ರಮುಖ ವಾಣಿಜ್ಯ ಮತ್ತು ಜೈನ ಕೇಂದ್ರವಾಗಿದ್ದ ಚಂದ್ರಗುತ್ತಿಯಲ್ಲಿ ಇದೇ ಕಾಲದ 7 ಸುತ್ತಿನ ಕೋಟೆಯಿದೆ. ಕೋಟೆಯ ಮೂರು ಸುತ್ತುಗಳು ಈಗಾಗಲೆ ಕಣ್ಮರೆಯಾಗಿವೆ. ಉಳಿದ ನಾಲ್ಕು ಸುತ್ತುಗಳು ಅಕ್ರಮ ಚಟುವಟಿಕೆಯಿಂದಾಗಿ ನಶಿಸಲಾರಂಭಿಸಿವೆ. ಈಗಾಗಲೇ ಕೋಟೆಯೊಳಗಿನ ಅಮೂಲ್ಯ ದುರ್ಗಾ ವಿಗ್ರಹ ಕಿಡಿಗೇಡಿಗಳಿಂದ ಭಗ್ನಗೊಂಡಿದೆ. ಅಳಿದುಳಿದ ದೇಗುಲಗಳಲ್ಲಿ ನಿಧಿಗಾಗಿ ಶೋಧನೆ ನಡೆಸಿ, ದೇಗುಲಗಳನ್ನು ವಿರೂಪಗೊಳಿಸಲಾಗಿದೆ. ತಾಲೂಕಿನ ಅತಿ ಹೆಚ್ಚು ಸರಾಸರಿ 1930.80 ಮಿ.ಮೀ. ಮಳೆ ಬೀಳುವ ದಟ್ಟಕಾನನ, ಬೆಟ್ಟಪ್ರದೇಶದ ಚಂದ್ರಗುತ್ತಿ ಪ್ರದೇಶ ಮೇಲಿಂದ ಮೇಲೆ ನಡೆಯುತ್ತಿರುವ ಗಣಿಗಾರಿಕೆಯಿಂದ, ಪ್ರಾಚ್ಯವಸ್ತು, ಪುರಾತತ್ವ ಮತ್ತು ಮುಜರಾಯಿ ಇಲಾಖೆಗಳ ದೀರ್ಘ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಇದರಿಂದ ಅಂತರ ರಾಷ್ಟ್ರೀಯ ಪ್ರವಾಸಿ ತಾಣವಾಗಬೇಕಿದ್ದ ಧಾರ್ಮಿಕ ಕ್ಷೇತ್ರ ಕುಕೃತ್ಯಕ್ಕೆ ಸಿಲುಕಿ ನರಳುತ್ತಿದೆ.
ಗಣಿ ಸ್ಫೋಟಕ್ಕೆ ಪ್ರಾಣಿ-ಪಕ್ಷಿ ಸಂಕುಲವೇ ನಾಶ: ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ
ದೇಶದಲ್ಲಿ ಅತ್ಯುತ್ತಮ ಪ್ರವಾಸಿ ಕೇಂದ್ರವಾಗಬೇಕಿದ್ದ ಚಂದ್ರಗುತ್ತಿ ಅಭಿವೃದ್ಧಿ ಕಾಣದೇ ಮುಕ್ಕಾಗುತ್ತಿದೆ. ಇದನ್ನು ಶಾಪವೆಂದೇ ತಿಳಿದು ಕೈಚೆಲ್ಲುವಂತಹ ವಾತಾವರಣವಿದೆ. ಹಾಗಾಗಿ ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಚಂದ್ರಗುತ್ತಿ ಗುಡ್ಡ-ಬೆಟ್ಟಗಳಿಗೆ ಹೆಚ್ಚಿನ ರಕ್ಷಣೆ ಹಾಗೂ ಅಭಿವೃದ್ಧಿಯ ಕಡೆ ಗಮನ ಹರಿಸಬೇಕಿದೆ
- ಅನಂತ ಹೆಗಡೆ ಆಶೀಸರ, ಮಾಜಿ ಅಧ್ಯಕ್ಷ, ಜೀವವೈವಿಧ್ಯ ಮಂಡಳ