ಸಿದ್ದೇಶ್ವರ ಶ್ರೀಗಳು ಇಚ್ಛಾ ಮರಣ ಬಯಸಿದ್ದರೆ?: ಶ್ರೀಗಳನ್ನು ಕಾಡಿತ್ತಾ‘ಪ್ರಾಸ್ಟೇಟ್’ಬಾಧೆ
ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಇಚ್ಛಾ ಮರಣ ಹೊಂದಿದರೆ ಎಂಬುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಹೌದು, ಸಿದ್ದೇಶ್ವರ ಶ್ರೀಗಳಿಗೆ ಯಾವುದೇ ರೋಗರುಜಿನಗಳಿರಲಿಲ್ಲ. ನಸುಕಿನ ಜಾವದಲ್ಲಿ ದಿನಂಪ್ರತಿ ವಾಯು ವಿಹಾರಕ್ಕೆ ಹೋಗುತ್ತಿದ್ದರು.
ರುದ್ರಪ್ಪ ಆಸಂಗಿ
ವಿಜಯಪುರ (ಜ.04): ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಇಚ್ಛಾ ಮರಣ ಹೊಂದಿದರೆ ಎಂಬುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಹೌದು, ಸಿದ್ದೇಶ್ವರ ಶ್ರೀಗಳಿಗೆ ಯಾವುದೇ ರೋಗರುಜಿನಗಳಿರಲಿಲ್ಲ. ನಸುಕಿನ ಜಾವದಲ್ಲಿ ದಿನಂಪ್ರತಿ ವಾಯು ವಿಹಾರಕ್ಕೆ ಹೋಗುತ್ತಿದ್ದರು. ನಿರೋಗಿಯಾಗಿ 80 ಹರೆಯದ ಸಂತರಾಗಿದ್ದರು. ಒಂದು ದಿನವೂ ನೆಗಡಿ, ಜ್ವರ, ಕೈ ಕಾಲು ಹಿಡಿಯಿತು ಎನ್ನಲಿಲ್ಲ. ಅಂಥವರು ಕಳೆದ ಎರಡು ತಿಂಗಳುಗಳಿಂದಷ್ಟೇ ಮೆತ್ತಗಾಗಿದ್ದರು. ಆಹಾರ ಸೇವನೆ ಕಡಿಮೆ ಮಾಡುತ್ತಲೇ ಬಂದರು. ಈಗ್ಗೆ 15 ದಿನಗಳಿಂದೀಚೆಗೆ ಆಹಾರವನ್ನು ಕಡಿತ ಮಾಡಿದರು. ತೀರ ಒಂದು ವಾರದಿಂದ ಈಚೆಗೆ ಕಫ ಆಗಿದೆ. ಹೀಗಾಗಿ ಶ್ರೀಗಳು ಅಸ್ವಸ್ಥರಾಗಿದ್ದಾರೆ ಎಂದು ಅವರ ಅನುಯಾಯಿಗಳು ಹೇಳುತ್ತಿದ್ದರು.
ಜನರು ತಮಗೆ ತಿಳಿದಂತೆ ಶ್ರೀಗಳ ಸ್ಥಿತಿ ಬಗ್ಗೆ ತಮ್ಮ ತಿಳಿದಂತೆ ವ್ಯಾಖ್ಯಾನ ಮಾಡುತ್ತ ಬಂದರು. ಕೆಲವರು ಜ್ವರ, ನೆಗಡಿ, ಕೆಮ್ಮು, ಕಫದ ತೊಂದರೆ ಎಂದು ಹೇಳಿದರೆ, ಮತ್ತೆ ಕೆಲವರು ಪ್ರಾಸ್ಟೇಟ್ ಕ್ಯಾನ್ಸರ್ ಆಗಿದೆ ಎಂದು ಹೇಳಿದರು. ಇನ್ನು ಕೆಲವರು ಅವರು ಸ್ವಇಚ್ಛಾ ಮರಣ ಹೊಂದಲು ನಿರ್ಧರಿಸಿದ್ದರು ಎಂಬ ಮಾತುಗಳು ಪುಂಖಾನುಪುಂಖವಾಗಿ ಹರಿದಾಡಿದವು.ಇದೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ಶ್ರೀಗಳು ಇಚ್ಛಾ ಮರಣ ಹೊಂದಲು ನಿರ್ಧರಿಸಿದ್ದರು ಎಂಬ ಸಂಶಯ ಬಲವಾಗುತ್ತಿದೆ.
ಪಂಚಭೂತಗಳಲ್ಲಿ ಲೀನರಾದ ಶತಮಾನದ ಸಂತ ಸಿದ್ದೇಶ್ವರ ಶ್ರೀ: ಅಪೇಕ್ಷೆಯಂತೆ ಅಂತ್ಯಕ್ರಿಯೆ!
ಕಳೆದ ಒಂದು ವಾರದಿಂದ ಸಿದ್ದೇಶ್ವರ ಶ್ರೀಗಳು ಆಹಾರವನ್ನು ಸೇವಿಸುವುದನ್ನು ಬಿಟ್ಟರು. ಈ ಸುದ್ದಿ ತಿಳಿದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಆಹಾರ ಸೇವನೆ ಮಾಡುವಂತೆ ಮನವಿ ಮಾಡಿಕೊಂಡರೂ ಅದಕ್ಕೆ ಸುತಾರಾಂ ಒಪ್ಪಲಿಲ್ಲ ಎನ್ನಲಾಗಿದೆ. ಇದಾದ ನಂತರ ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ ಅವರೂ ಶ್ರೀಗಳ ಮನವೊಲಿಸಿದ ಮೇಲೆ ಪ್ರಸಾದ ಸೇವನೆಗೆ ಮುಂದಾದರು. ಅವರು ಹೇಳಿದಾಗಷ್ಟೇ ಕೆಲವೊಂದು ಬಾರಿ ಗಂಜಿ ಸೇವನೆ ಮಾಡಿದ್ದರು. ಹೀಗೆ ನಿಯಮಿತ ಆಹಾರ ಸೇವನೆ ಮಾಡದ ಕಾರಣ ಶ್ರೀಗಳ ಆರೋಗ್ಯ ಕ್ರಮೇಣ ವಿಷಮ ಸ್ಥಿತಿಗೆ ತಲುಪಿತು. ಆಗ ಶಾಸಕ ಎಂ.ಬಿ.ಪಾಟೀಲರು ಓಲೈಸಿ ಆಸ್ಪತ್ರೆಗೆ ಕರೆದರೂ ಬರಲಿಲ್ಲ. ಕೊನೆಗೆ ಬಿಎಲ್‌ಡಿಇ ವೈದ್ಯಕೀಯ ಕಾಲೇಜಿನ ವೈದ್ಯರ ತಂಡವನ್ನು ಆಶ್ರಮಕ್ಕೆ ಕರೆಯಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರು.
ಇನ್ನು ಕೆಲ ಭಕ್ತರು ಪ್ರಾಸ್ಟೇಟ್ ಕ್ಯಾನ್ಸರ್ ಆಗಿದ್ದರೆ ಅದನ್ನು ಚಿಕ್ಕ ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ಶ್ರೀಗಳಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸಾಕಷ್ಟು ಕೋರಿದರೂ ಅವರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆಶ್ರಮದಲ್ಲಿಯೂ ವೈದ್ಯರಿಂದ ಚಿಕಿತ್ಸೆ ಪಡೆಯಲು ನಿರಾಕರಿಸಿದರು. ಇದರಿಂದಾಗಿ ವೈದ್ಯರಿಗೆ ದಾರಿ ಕಾಣದಾಯಿತು. ಪರಿಣಾಮ ಸಾಯುವ ನಾಲ್ಕು ದಿನಗಳ ಮುನ್ನ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಆಗತೊಡಗಿತು.
ನಂತರ ಸಿದ್ದೇಶ್ವರ ಶ್ರೀಗಳು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಭಕ್ತರ ದಂಡು ಆಶ್ರಮದತ್ತ ಧಾವಿಸಿತು. ದೇವರಲ್ಲಿ ಪ್ರಾರ್ಥನೆ ಮಾಡುತ್ತ ಹಗಲು ರಾತ್ರಿ ಎನ್ನದೇ ಅಲ್ಲಿಯೇ ಕುಳಿತರು. ಭಕ್ತರ ಸಂಕಟ ತಾಳದೆ ಕಿರಿಯ ಸ್ವಾಮಿಗಳು ಸಿದ್ದೇಶ್ವರರು ತೀರಾ ಅಶಕ್ತರಾಗಿದ್ದರೂ ವೀಲ್‌ಚೇರ್‌ನಲ್ಲಿ ಆಶ್ರಮದ ಆವರಣಕ್ಕೆ ಕರೆ ತಂದು ದರ್ಶನಕ್ಕೆ ಅವಕಾಶವಿತ್ತರು. ಸಾಯುವ ಎರಡು ದಿನಗಳ ಮನ್ನವಂತೂ ಸಿದ್ದೇಶ್ವರ ಶ್ರೀಗಳು ಹೊರ ಬರಲೇ ಇಲ್ಲ.
Vijayapura: ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ನಿಧನ: ಯಾರು ಈ ಸಂತ ಸಿದ್ಧೇಶ್ವರ ಸ್ವಾಮೀಜಿ?
ಈ ಎಲ್ಲ ಘಟನೆಗಳನ್ನು ಅವಲೋಕಿಸಿದಾಗ ಸಿದ್ದೇಶ್ವರ ಶ್ರೀಗಳು ನಿಜಕ್ಕೂ ಇಚ್ಛಾಮರಣ ಹೊಂದಿದ್ದರು ಎಂಬುವುದು ದೃಢವಾಗುತ್ತಿದೆ. ಅದಕ್ಕಾಗಿಯೇ ಅವರು ನಿಯಮಿತ ಆಹಾರ, ನೀರು ತ್ಯಜಿಸಿದರು ಎನ್ನಲಾಗುತ್ತದೆ. ಸಿದ್ದೇಶ್ವರ ಶ್ರೀಗಳು ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದರೆ ಅವರು ನಿಜಕ್ಕೂ ಶತಾಯುಷಿಯಾಗಿ ಬದುಕುತ್ತಿದ್ದರು. ಅವರು ಇಚ್ಛಾ ಮರಣ ಬಯಸಿದ್ದರಿಂದಾಗಿ ಈಗ ಅವರು ಎಂದೂ ಮರಳಿ ಬಾರದ ದಾರಿಗೆ ಸಾಗಿದ್ದಾರೆ. ಸಿದ್ದೇಶ್ವರ ಶ್ರೀಗಳು ಇನ್ನು ನೆನಪು.