ಪಂಚಭೂತಗಳಲ್ಲಿ ಲೀನರಾದ ಶತಮಾನದ ಸಂತ ಸಿದ್ದೇಶ್ವರ ಶ್ರೀ: ಅಪೇಕ್ಷೆಯಂತೆ ಅಂತ್ಯಕ್ರಿಯೆ!

ವೈಕುಂಠ ಏಕಾದಶಿ ದಿನವೇ ಇಹಲೋಕ ತ್ಯಜಿಸಿದ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ವಿಜಯಪುರದ ಜ್ಞಾನಯೋಗಾಶ್ರಮದ ಆವರಣದಲ್ಲಿ ನಡೆದಿದೆ. ಶ್ರೀಗಳ ಅಪೇಕ್ಷೆಯಂತೆ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ. ಶತಮಾನದ ಸಂತ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

Jnanayogashrama siddheshwar swamiji cremated in vijayapura Devotees chief minister politicians bid farewell to walking God Sat

ವಿಜಯಪುರ (ಜ.03): ಶತಮಾನದ ಸಂತ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ವಿಜಯಪುರದ ಜ್ಞಾನಯೋಗಾಶ್ರಮದ ಆವರಣದಲ್ಲಿ ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜ್ಞಾನಯೋಗಾಶ್ರಮ ಮಠದ ಅಧ್ಯಕ್ಷರಾದ ಬಸವಲಿಂಗಯ್ಯ ಸ್ವಾಮೀಜಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಶ್ರೀಗಳ ಇಚ್ಚೆಯಂತೆ ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಅಂತ್ಯಕ್ರಿಯೆ ನೇರವೇರಿಸಲಾಗಿದೆ. ವೈಕಾಂಠ ಏಕಾದಶಿ ದಿನದಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇರುತ್ತದೆ. ಕಳೆದ ಇಪ್ಪತ್ತು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರೂ ನಿನ್ನೆ ವೈಕುಂಠ ಏಕಾದಶಿ ದಿನದಂದು ಇಹಲೋಕ ತ್ಯಜಿಸುವ ಮೂಲಕ ಸಿದ್ದೇಶ್ವರ ಶ್ರೀಗಳು ಸ್ವರ್ಗಕ್ಕೆ ಹೋಗಿದ್ದಾರೆಂಬ ಭಾವನೆ ಭಕ್ತಗಣದಲ್ಲಿ ಮೂಡಿದೆ. ನಿನ್ನೆ ರಾತ್ರಿ ಲಿಂಗೈಕ್ಯರಾದ ಅವರ ಸುದ್ದಿ ತಿಳಿಯುತ್ತಿದ್ದಂತೆಯೇ ಲಕ್ಷೋಪಾದಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿ ಹಲವು ರಾಜ್ಯಗಳ ಮೂಲೆಗಳಿಂದ ಆಗಮಿಸಿದ ಭಕ್ತರು ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆವರೆಗೆ ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಟ್ಟು ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಸಂಜೆ 5.15ಕ್ಕೆ ಶ್ರೀಗಳ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ವಂದನೆಗಳನ್ನು ಸಲ್ಲಿಸಲಾಯಿತು. ನಂತರ ಜ್ಞಾನ ಯೋಗಾಶ್ರಮದ ಆವರಣಕ್ಕೆ ತರಲಾಯಿತು.

ಜ್ಞಾನಯೋಗಾಶ್ರಮದ ಆವರಣದಲ್ಲಿ ಶ್ರೀಗಳು ತಂಗುತ್ತಿದ್ದ ಕೋಣೆಯ ಬಳಿಯಲ್ಲಿಯೇ ಇರುವ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಗದ್ದುಗೆಯೊಂದನ್ನು ನಿರ್ಮಿಸಿ ಅಲ್ಲಿ ಅಗ್ನಿ ಸ್ಪರ್ಶದ ಮೂಲಕ ಅಂತ್ಯ ಕ್ರಿಯೆ ನೆರವೇರಿಸಲಾಯಿತು. ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳ ಪ್ರಾರ್ಥಿವ ಶರೀರವನ್ನು ಶ್ರೀಗಂಧದ ಕಟ್ಟಿಗೆಯಿಂದ ಕ್ರಿಯೆ ನಡೆಸಲಾಯಿತು. ಜೊತೆಗೆ, ದೇಸಿ ಗೋವುಗಳ ಸಗಣಿಯ ಕುಳ್ಳು, ದೇಸಿ ಹಸುಗಳ ತುಪ್ಪವನ್ನು ಅಂತ್ಯಕ್ರಿಯೆ ವೇಳೆ ಬಳಸಲಾಯಿತು. ಇನ್ನು ಬಾಗಲಕೋಟೆ ಜಿಲ್ಲೆಯ ಹುಲ್ಯಾಳದಲ್ಲಿ ಗುರುದೇವ ಆಶ್ರಮದ ಶ್ರೀಗಳ ಶಿಷ್ಯ ಹರ್ಷಾನಂದ ಮಹಾಸ್ವಾಮಿಗಳ ಆಶ್ರಮದಲ್ಲಿ ಬೆಳೆದಿದ್ದ ಶ್ರೀಗಂಧ ಕಟ್ಟಿಗೆ ತರಲಾಗಿತ್ತು. 

ಎರಡೂವರೆ ಅಡಿ ತಾತ್ಕಾಲಿಕ ಗದ್ದುಗೆ:
ಸಿದ್ದೇಶ್ವರ ಶ್ರೀಗಳು ಕಳೆದ 8 ವರ್ಷಗಳ ಹಿಂದೆಯೇ ತಮ್ಮ ಅಂತ್ಯಕ್ರಿಯೆ ಹೇಗಿರಬೇಕು ಎಂದು ಅಭಿವಂದನಾ ಪತ್ರವನ್ನು ಬರೆದಿಟ್ಟಿದ್ದರು. ಶ್ರೀಗಳ ಇಚ್ಛೆಯಂತೆ ಯಾವುದೇ ಸ್ಥಾವರ, ಗದ್ದುಗೆ ನಿರ್ಮಾಣ ಬೇಡವೆಂದು ತಿಳಿಸಿದ್ದರು. ಆದರೆ, ಜ್ಞಾನಯೋಗಾಶ್ರಮ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಅನುಕೂಲ ಆಗುವಂತೆ ಸುಮಾರು ೨೦ ಅಡಿ ವೃತ್ತಾಕಾರದಲ್ಲಿ ಒಂದೂವರೆ ಅಡಿ ಸಣ್ಣ ಕಟ್ಟೆಯೊಂದನ್ನು ನಿರ್ಮಿಸಲಾಗಿತ್ತು. ನಂತರ ಅದರ ಮೇಲೆ ಶ್ರೀಗಳ ಪಾರ್ಥಿವ ಶರೀರ ಅಂತ್ಯಕ್ರಿಯೆ ನಡೆಸಲು ಸುಮಾರು ೨ ಅಡಿ ಎತ್ತರದ ತಾತ್ಕಾಲಿಕ ಗದ್ದುಗೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಗದ್ದುಗೆಯನ್ನು ಅಂತ್ಯಕ್ರಿಯೆ ಬಳಿಕ ತೆರವು ಮಾಡಲಾಗುತ್ತದೆ ಎಂದು ಮಠದ ಅಧ್ಯಕ್ಷರು ತಿಳಿಸಿದ್ದಾರೆ.

ರಸ್ತೆಯುದ್ದಕ್ಕೂ ಭಕ್ತಿ-ಭಾವ ಸಮರ್ಪಣೆ: 
ಇನ್ನು ವಿಜಯಪುರ ನಗರದ ಸೈನಿಕ ಶಾಲೆಯಿಂದ 5 ಕಿ.ಮೀ ದೂರವಿರುವ ಜ್ಞಾನಯೋಗಾಶ್ರಮ ಮಠದ ಆವರಣದವರೆಗೆ ಶ್ರೀಗಳ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ಲಕ್ಷಾಂತರ ಭಕ್ತರು ದರ್ಶನ ಪಡೆದು ಪುನೀತರಾದರು. ಪಾರ್ಥಿವ ಶರೀರ ಆಗಮಿಸುವ ರಸ್ತೆಯನ್ನು ಗುಡಿಸಿ ಸ್ವಚ್ಛಗೊಳಿಸಿ, ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ, ದೀಪವನ್ನು ಹಚ್ಚಿ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಎಲ್ಲ ಭಕ್ತರು ಕೂಡ ಸ್ವಾಮಿಗಳ ಪಾರ್ಥಿವ ಶರೀರ ವೀಕ್ಷಣೆ ಮಾಡಿ ಕಣ್ಣೀರಿಟ್ಟು, ಅಂತಿಮವಾಗಿ ಕೈಮುಗಿದರು. ರಸ್ತೆಯುದ್ದಕ್ಕೂ ಸಿದ್ದೇಶ್ವರ ಶ್ರೀಗಳ ಬಗ್ಗೆ ಹಾಡು ಹೇಳುತ್ತ ಪಾರ್ಥಿವ ಶರೀರದ ಆಗಮನದ ವೇಳೆ ವಿವಿಧ ಗೀತೆಗಳನ್ನು ಹಾಡುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ತಮ್ಮ ಮನೆಗಳ ಮುಂದೆ ಶ್ರೀಗಳ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಆರತಿ ತಟ್ಟೆಯನ್ನು ಬೆಳಗಿ, ಹೂವುಗಳನ್ನು ಎರಚಿ ಮನೆಯ ಒಡೆಯನಂತೆ ಬೀಳ್ಕೊಡುಗೆ ನೀಡಿದರು.

ಓ ನಮಃ ಶಿವಾಯ ಪಠಣ:
ವಿಜಯಪುರದ ಎಲ್ಲ ಬೀದಿಗಳು ಕೂಡ ಇಂದು ಶ್ರೀಗಳ ಜಪವನ್ನೇ ಮಾಡುತ್ತಾ ಕಣ್ಣೀರುತ್ತಾ ಕುಟುಂಬದ ಒಡೆಯನನ್ನೇ ಕಳೆದುಕೊಂಡಂತೆ ದುಃಕಿಸುತ್ತಿದ್ದರು. ಇಡೀ ಭಕ್ತರೆಲ್ಲರೂ ಸಿದ್ದೇಶ್ವರ ಸ್ವಾಮೀಜಿಗೆ ಪ್ರಿಯವಾದ ಓಂ ನಮಃ ಶಿವಾಯ ಪಠಣ ಮಾಡುತ್ತಿದ್ದರು. ಸಿದ್ದೇಶ್ವರ ಶ್ರೀಗಳಿಗೆ ಜೈಕಾರ ಕೂಗುತ್ತಾ ಮುನ್ನಡೆಯುತ್ತಿದ್ದರು. ಸುಮಾರು 15 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಸ್ಥಳೀಯವಾಗಿ ಶ್ರೀಗಳ ಭಕ್ತರು ಅಂತಿಮ ದರ್ಶನಕ್ಕಾಗಿ ಬಂದವರಿಗೆ ಹಣ್ಣು, ನೀರಿನ ಬಾಟಲ್‌, ಜ್ಯೂಸ್‌, ಬಿಸ್ಕತ್‌ ಪ್ಯಾಕೆಟ್‌ಗಳನ್ನು ಕೊಟ್ಟು ಹಸಿವು ಮತ್ತು ದಣಿವನ್ನು ತಣಿಸಿದರು.

Latest Videos
Follow Us:
Download App:
  • android
  • ios