ಬೆಂಗಳೂರು(ಜು. 24): ಆರೋಗ್ಯ ಇಲಾಖೆಯ ಉಪಕರಣದಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆಸುತ್ತಿದೆ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್‌ ನಾಯಕರಿಗೆ, ಅವರ ಆಪಾದನೆಯೇ ತಿರುಗುಬಾಣ ಆಗುವ ಸಾಧ್ಯತೆ ಗೋಚರಿಸುತ್ತಿದೆ. ಇದೀಗ ಅವರದ್ದೇ ಅವಧಿಯಲ್ಲಿ ಅಕ್ರಮ ನಡೆದಿತ್ತು ಎಂಬ ಪ್ರತಿ-ಆರೋಪ ಕೇಳಿಬಂದಿದೆ.

‘ಕೋಟ್ಯಂತರ ರುಪಾಯಿಗೆ ಬಿಜೆಪಿ ಸರ್ಕಾರ ವೆಂಟಿಲೇಟರ್‌ ಖರೀದಿ ಮಾಡಿದೆ’ ಎಂದು ಕಾಂಗ್ರೆಸ್‌ ನಾಯಕರು ಗುರುವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದರು. ಆದರೆ ಮಧ್ಯಾಹ್ನದ ವೇಳೆ ಬಿಜೆಪಿ ಸಚಿವರು ಸುದ್ದಿಗೋಷ್ಠಿ ನಡೆಸಿ, ಅಂಕಿ-ಅಂಶ ಸಮೇತ ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಬಿಚ್ಚಿಡುವ ಮೂಲಕ ಕಾಂಗ್ರೆಸ್‌ ನಾಯಕರಿಗೆ ರಾಚುವಂತೆ ಮಾಡಿದ್ದಾರೆ.

ಗುರುವಾರ ರಾಜ್ಯದಲ್ಲಿ 5 ಸಾವಿರ ಕೇಸ್.. ಜಿಲ್ಲೆಗಳು ಡೇಂಜರ್..ಡೇಂಜರ್!

ಕಳೆದ 2019ರ ಜನವರಿ ತಿಂಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಯಾವುದೇ ಆರೋಗ್ಯದ ಸಮಸ್ಯೆ, ಒತ್ತಡ ಇಲ್ಲದ ಸಂದರ್ಭದಲ್ಲಿ ಲಕ್ಷಾಂತರ ರುಪಾಯಿ ವ್ಯಯಿಸುವ ಮೂಲಕ ದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಬಿಜೆಪಿ ಸಚಿವರು ಗಂಭೀರ ಆಪಾದನೆ ಮಾಡಿದ್ದಾರೆ.

ಬಿಜೆಪಿ ಸಚಿವರ ಅರೋಪವೇನು?:

‘ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಇದ್ದಾಗ ಹೋಮ್‌ ಮೆಡಿಕ್ಸ್‌ ಎಂಬ ಕಂಪನಿಯಿಂದ ಒಂದು ವೆಂಟಿಲೇಟರ್‌ಗೆ . 21.73 ಲಕ್ಷದಂತೆ 9 ವೆಂಟಿಲೇಟರ್‌ಗಳನ್ನು ಖರೀದಿ ಮಾಡಲಾಗಿತ್ತು. 2019ರಲ್ಲೇ ಅಲೈಡ್‌ ಮೆಡಿಕಲ್‌ನಿಂದ ಒಂದು ವೆಂಟಿಲೇಟರ್‌ಗೆ . 15.12 ಲಕ್ಷದಂತೆ 28 ವೆಂಟಿಲೇಟರ್‌ ಖರೀದಿ ಮಾಡಲಾಗಿತ್ತು. ಟ್ರಾನ್ಸ್‌ ಹೆಲ್ತ್‌ ಕೇರ್‌ ಇಂಡಿಯಾ ಕಂಪನಿಯಿಂದ 2019ರಲ್ಲಿ ಒಂದು ವೆಂಟಿಲೇಟರ್‌ಗೆ . 14.51 ಲಕ್ಷದಂತೆ 9 ವೆಂಟಿಲೇಟರ್‌ಗಳನ್ನು ಖರೀದಿಸಲಾಗಿತ್ತು. ಇಷ್ಟುದೊಡ್ಡ ಮೊತ್ತದ ವೆಂಟಿಲೇಟರ್‌ನ್ನು ಏಕೆ ಖರೀದಿ ಮಾಡಲಾಗಿದೆ?’ ಎಂದು ಬಿಜೆಪಿ ಸಚಿವರು ಖಾರವಾಗಿ ಪ್ರಶ್ನಿಸಿದರು.

1000 ರೂ. ಕಡಿಮೆಗೆ ಸಿಗಲಿದೆ ಕೊರೋನಾ ಔಷಧ, ಕೊನೆಯ ಪ್ರಯೋಗವೊಂದೇ ಬಾಕಿ

ಆದರೆ, ತಮಿಳುನಾಡು ಪ್ರತಿ ವೆಂಟಿಲೇಟರ್‌ಗೆ . 4 ಲಕ್ಷ ಕೊಟ್ಟು ಖರೀದಿ ಮಾಡಿದೆ ಎಂದು ಕಾಂಗ್ರೆಸ್ಸಿಗರು ಹೇಳಿದ್ದಾರೆ. ಹಾಗಾದಲ್ಲಿ ಒಂದು ಸಾವಿರ ವೆಂಟಿಲೇಟರ್‌ಗೆ . 40 ಕೋಟಿ ಆಗಬೇಕಿತ್ತು. ಕರ್ನಾಟಕದಲ್ಲಿ ಇದರ ಖರೀದಿಗೆ . 120 ಕೋಟಿ ವ್ಯಯ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ. ಪ್ರಸ್ತುತ ಬಿಜೆಪಿ ಸರ್ಕಾರ 80 ವೆಂಟಿಲೇಟರ್‌ಗಳನ್ನು . 5.80 ಲಕ್ಷದಂತೆ ಖರೀದಿ ಮಾಡಿದೆ. ವಿಶೇಷವಾಗಿ .7 ಲಕ್ಷಕ್ಕೆ 28 ವೆಂಟಿಲೇಟರ್‌ ಹಾಗೂ 18 ಲಕ್ಷಕ್ಕೆ ಒಂದು ವೆಂಟಿಲೇಟರ್‌ ಖರೀದಿ ಮಾಡಲಾಗಿದೆ. ಒಟ್ಟು 747 ವೆಂಟಿಲೇಟರ್‌ಗಳನ್ನು . 10.61 ಕೋಟಿ ಕೊಟ್ಟು ಖರೀದಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್‌್ಥನಾರಾಯಣ್‌ ಸ್ಪಷ್ಟಪಡಿಸಿದರು. ಈ ಮೂಲಕ ಜೆಡಿಎಸ್‌-ಕಾಂಗ್ರೆಸ್‌ಗಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲಾಗಿದೆ ಎಂದು ಪ್ರತಿಪಾದಿಸಿದರು.

ಆರೋಗ್ಯ ಇಲಾಖೆಯಲ್ಲಿ .535 ಕೋಟಿ ಅವ್ಯಹಾರ:

ಇನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿದ್ದ . 535 ಕೋಟಿ ಅವ್ಯವಹಾರ ನಡೆದಿತ್ತು. ಅಂದಿನ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಮಾತ್ರೆ, ಆ್ಯಂಬುಲೆನ್ಸ್‌, ಔಷಧಿ, ವೆಂಟಿಲೇಟರ್‌ ಹಾಗೂ ಇತರ ಉಪಕರಣ ಖರೀದಿಯಲ್ಲಿ . 535 ಕೋಟಿ ಅವ್ಯಹಾರ ನಡೆದಿದೆ. ಅಂದಿನ ಆರೋಗ್ಯ ಸಚಿವರು ಯಾರು ಗೊತ್ತಾ? ಈ ಅವ್ಯವಹಾರವನ್ನು ಖುದ್ದು ಮಹಾಲೆಕ್ಕ ಪರಿಶೋಧಕ (ಸಿಎಜಿ) ಇಲಾಖೆ ಉಲ್ಲೇಖಿಸಿದೆ. ಈ ವೇಳೆ ಯಾರಿಗೆಲ್ಲಾ ಕಮಿಷನ್‌ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ವಾಗ್ದಾಳಿ ನಡೆಸಿದರು.

ಈ ಅವ್ಯವಹಾರದ ಬಗ್ಗೆ ವಕೀಲ ಶಿವಾರೆಡ್ಡಿ ಎಂಬುವರು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದರು. ಬಳಿಕ ಲೋಕಾಯುಕ್ತಕ್ಕೆ ಈ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದರು.