ಹೆಚ್ಚು ಆಕ್ಸಿಜನ್ ನೀಡಿ; ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕದ ತಟ್ಟಿದ ಕೇಂದ್ರ!
ಚಾಮರಾಜನಗರ ಸೇರಿದಂತೆ ಕರ್ನಾಟಕದ ಕೆಲ ಭಾಗಗಳಲ್ಲಿ ಆಕ್ಸಿಜನ್ ಇಲ್ಲದೆ ಸೋಂಕಿತರು ಬಲಿಯಾಗುತ್ತಿದ್ದಾರೆ. ಈ ಘಟನೆ ಬೆನ್ನಲ್ಲೇ ಹೈಕೋರ್ಟ್ ಕೇಂದ್ರಕ್ಕೆ ಹೆಚ್ಚುವರಿ ಆಕ್ಸಿಜನ್ ನೀಡುವಂತೆ ಆದೇಶಿಸಿತ್ತು. ಆದರೆ ಇದೀಗ ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ನವದೆಹಲಿ(ಮೇ.06): ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕದಲ್ಲಿ ಆಕ್ಸಿಜನ್ ಬೇಡಿಕೆ, ಐಸಿಯು ಬೆಡ್ ಬೇಡಿಕೆ ಹೆಚ್ಚಾಗುತ್ತಿದೆ. ಚಾಮರಾಜನಗರದಲ್ಲಿನ ಆಕ್ಸಿಜನ್ ಕೊರತೆಯಿಂದ ನಡೆದ ದುರಂತದ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಿತ್ತು. ಹೆಚ್ಚುವರಿ ಆಕ್ಸಿಜನ್ ಪೂರೈಕೆ ಮಾಡುವಂತ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ ಈ ಆದೇಶದ ವಿರುದ್ಧ ಇದೀಗ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
'ಮೂರನೇ ಅಲೆಯನ್ನು ಹೇಗೆ ಡೀಲ್ ಮಾಡ್ತೀರಿ' ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಆಕ್ಸಿಜನ್ ಕೊರತೆಯಿಂದ ಚಾಮಾರಾಜನಗರ ಆಸ್ಪತ್ರೆ ಮೃತ್ಯ ಕೂಪವಾಗಿ ಮಾರ್ಪಟ್ಟಿತ್ತು. ಇನ್ನ ಕರ್ನಾಟಕದ ಹಲವು ಭಾಗಗಳಲ್ಲಿ ಆಕ್ಸಿಜನ್ ಕೊರತೆ ಗಂಭೀರವಾಗಿ ಸಮಸ್ಯೆಯಾಗಿ ಪರಿಣಮಿಸಿತ್ತು. ಹೀಗಾಗಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿತ್ತು. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿದ್ದ 965 ಮೆಟ್ರಿಕ್ ಟನ್ ಆಕ್ಸಿಜನ್ ಪ್ರಮಾಣವನ್ನು 1,200 ಮೆಟ್ರಿಕ್ ಟನ್‌ಗೆ ಹೆಚ್ಚಿಸಬೇಕು ಎಂದು ಹೈಕೋರ್ಟ್ ಕೇಂದ್ರಕ್ಕೆ ಆದೇಶ ನೀಡಿತ್ತು.
ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠದಲ್ಲಿ ಮನವಿ ಮಾಡಿದೆ. ಹೈಕೋರ್ಟ್ ಆದೇಶವನ್ನು ತಕ್ಷಣವೇ ತಡೆ ಹಿಡಿಯಬೇಕು ಎಂದು ಮನವಿ ಮಾಡಿದೆ. ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಕೋವಿಡ್ ಅನಾಹುತಕ್ಕೆ ಮೂಕ ಪ್ರೇಕ್ಷಕ ಆಗೋದಿಲ್ಲ: ಸುಪ್ರೀಂ!.
ಕೇಂದ್ರ ಸರ್ಕಾರದ ನಡೆಯನ್ನು ಕರ್ನಾಟಕ ಕಾಂಗೆಸ್ ಟೀಕಿಸಿದೆ. ಕೇಂದ್ರ ಸರ್ಕಾರ ನಡೆ ಆಘಾತವಾಗಿದೆ. ಹೈಕೋರ್ಟ್ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡುವಂತೆ ಆದೇಶಿಸಿದೆ. ಸದ್ಯ ಕರ್ನಾಟಕದಲ್ಲಿ 1,471 ಮೆಟ್ರಿಕ್ ಆಕ್ಸಿಜನ್ ಆಗತ್ಯವಿದೆ. ಆದರೆ ಕೇಂದ್ರದ ನಡೆ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕರ್ನಾಟಕ ಬಿಜೆಪಿ ಮೂಕಪ್ರೇಕ್ಷರಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.