ಬೆಳಗಾವಿ[ಡಿ.21]: ಬಿಜೆಪಿ ನಾಯಕರ ಔತಣಕೂಟದಲ್ಲಿ ಕಾಣಿಸಿಕೊಂಡಿದ್ದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಗುರುವಾರ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಲಾಸ್‌ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಗುರುವಾರ ನಗರದಲ್ಲಿ ಸರ್ಕಿಟ್‌ ಹೌಸ್‌ನಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಕರೆಸಿಕೊಂಡು ಮಾತನಾಡಿಸಿದ ಸಿದ್ದರಾಮಯ್ಯ, ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಳ್ಳದಂತೆ ಮತ್ತು ಅವರಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಇದರ ಜತೆಗೆ ಸಚಿವ ಡಿ.ಕೆ.ಶಿವಕುಮಾರ್‌ ಅವರ ಔತಣ ಕೂಟದಿಂದ ದೂರ ಉಳಿದು, ಬಿಜೆಪಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಅವರ ಔತಣಕೂಟಕ್ಕೆ ಹಾಜರಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದಾಗಿ ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಕಾಂಗ್ರೆಸ್‌ ಜತೆಗೆ ಇರುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಸಿದ್ದರಾಮಯ್ಯ ಅವರ ಸಲಹೆ ಸೂಚನೆಗಳನ್ನು ಆಲಿಸಿ ಅವರ ಎಲ್ಲ ಸಲಹೆಗಳನ್ನು ಪಾಲಿಸುವ ಭರವಸೆ ನೀಡಿ ಸಚಿವ ರಮೇಶ್‌ ಜಾರಕಿಹೊಳಿ ಅಲ್ಲಿಂದ ಹೊರಬಂದರು ಎಂದು ಮೂಲಗಳು ತಿಳಿಸಿವೆ.