ಬೆಂಗಳೂರು (ನ.18): ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನದಲ್ಲಿ ಹೊಂದಾಣಿಕೆ ವಿಚಾರವಾಗಿ ಜೆಡಿಎಸ್‌ ವಿರುದ್ಧ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಜೆಡಿಎಸ್‌ನವರು ಮೊದಲಿನಿಂದಲೂ ಹೊಂದಾಣಿಕೆ ಮಾಡಿಕೊಂಡು ಬಂದವರು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅಧಿಕಾರ ಎಲ್ಲಿ ಇರುತ್ತದೆಯೋ ಅಲ್ಲಿ ಜೆಡಿಎಸ್‌ನವರು ಇರುತ್ತಾರೆ.

ಅವಕಾಶವಾದಿ ರಾಜಕೀಯವನ್ನು ಜೆಡಿಎಸ್‌ ಮಾಡುತ್ತದೆ. ಅದಕ್ಕೆ ಕಳೆದ ಬಾರಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಬಿ ಟೀಮ್‌ ಎಂದು ಕರೆದಿದ್ದೆ ಎಂದು ಜೆಡಿಎಸ್‌ ನಾಯಕರ ಕಾಲೆಳೆದಿದ್ದಾರೆ.
 
ಕಾಲೇಜು ಬೇಡ ಎಂದಿದ್ದೆ:  ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ-ಕಾಲೇಜು ತೆರೆಯದಂತೆ ಎರಡು ಬಾರಿ ಸರ್ಕಾರಕ್ಕೆ ಪತ್ರ ಬರೆದು ಸಲಹೆ ನೀಡಿದ್ದೆ. ಮಕ್ಕಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. 

ಸಂಪತ್‌ ಆರೋಪಿ ಅಷ್ಟೆ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಸಿದ್ದು

 ಕಾಲೇಜು ತೆರೆಯಬಾರದು ಎಂದು ಹೇಳಿದ್ದೆ. ಆದರೆ ಕಾಲೇಜು ತೆರೆಯಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಣಿದು ಸರ್ಕಾರ ಕಾಲೇಜು ತೆರೆಯುವ ನಿರ್ಧಾರ ಕೈಗೊಂಡಿದ್ದಾರೆಯೋ ಏನೋ ಗೊತ್ತಿಲ್ಲ. ಸರ್ಕಾರದ ಈ ನಿರ್ಧಾರದಿಂದಾಗಿ ಈಗ ಮಕ್ಕಳಿಗೆ ಮೇಲಿಂದ ಮೇಲೆ ಕೊರೋನಾ ಪರೀಕ್ಷೆ ಮಾಡುತ್ತಲೇ ಇರಬೇಕು. ಆದ್ದರಿಂದ ಮಕ್ಕಳಿಗೆ ಉಚಿತ ಕೊರೋನಾ ಪರೀಕ್ಷೆ ಮಾಡಬೇಕು ಮತ್ತು ಕಾಲೇಜಿಗೆ ಹಾಜರಿ ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಿದರು.