ಚಿಕ್ಕಮಗಳೂರು[ಮಾ.08]: ‘ಬಿಜೆಪಿಯವರೇ, ನೀವು ಭಾರತಮಾತೆಯನ್ನು ಗುತ್ತಿಗೆ ತೆಗೆದುಕೊಂಡಿದ್ದೀರಾ?’

-ಇದು ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿರುವ ಪ್ರಶ್ನೆ.

ಸಂವಿಧಾನ ರಕ್ಷಣಾ ಹೋರಾಟ ಸಮಿತಿ, ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ನಾವು ಸಹ ಭಾರತ ಮಾತೆಯ ಮಕ್ಕಳೇ ಆದರೆ ಸಂವಿಧಾನವನ್ನು ಮಾತ್ರ ತಿರುಚುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ದೇಶದಲ್ಲಿ ಧ್ವನಿ ಇಲ್ಲದ ವರ್ಗವನ್ನು ಬಿಜೆಪಿಯ ಪೂರ್ವಿಕರು ಸೃಷ್ಟಿಮಾಡಿದ್ದಾರೆ. ಈಗ ಸಂವಿಧಾನವನ್ನು ತಿರುಚಲು ಹೊರಟ್ಟಿದ್ದಾರೆ. ಇಂತಹವರಿಗೆ ನಾಚಿಕೆಯಾಗಬೇಕು. ಭಾರತಮಾತೆ ಅನ್ನುತ್ತೀರಾ, ಇದೇನಾ ಕಲಿತಿದ್ದು, ನಾವು ಸಹ ಭಾರತೀಯ ಮಕ್ಕಳೇ ಎಂದರು.

ಸಿಎಎ ಸಂವಿಧಾನ ವಿರೋಧಿ: ಸಿಎಎ, 10 ಬಾರಿ ತಿದ್ದುಪಡಿಯಾಗಿದೆ. ಆದರೆ, ಈಗ ಈ ಕಾಯ್ದೆಯಲ್ಲಿ ಧರ್ಮವನ್ನು ಸೇರಿಸುವ ಕೆಲಸ ಬಿಜೆಪಿ ಮಾಡಿದೆ. ಇದಕ್ಕೆ ನಮ್ಮ ವಿರೋಧ ಇದೆ. ಈ ಕಾಯ್ದೆ ಜಾರಿಗೆ ಬಂದರೆ ಬರೀ ಮುಸ್ಲಿಮರಿಗೆ ಮಾತ್ರ ತೊಂದರೆ ಆಗುವುದಿಲ್ಲ, ಅಲೆಮಾರಿಗಳಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಹೀಗೆ ಎಲ್ಲ ವರ್ಗದ ಜನರಿಗೆ ಇದರಿಂದ ತೊಂದರೆಯಾಗಲಿದೆ. ಇದೊಂದು ಸಂವಿಧಾನ ವಿರೋಧ ನಿಲುವು ಎಂದು ಟೀಕಿಸಿದರು.

ದೇಶದ 30 ರಾಜ್ಯಗಳ ಪೈಕಿ ಬಿಹಾರ ಸೇರಿದಂತೆ ಈಗಾಗಲೇ 10 ರಾಜ್ಯಗಳು ಹೊಸದಾಗಿ ಜಾರಿಗೆ ತರಲು ಹೊರಟಿರುವ ಸಿಎಎ, ಎನ್‌ಆರ್‌ಸಿ ತಮ್ಮ ರಾಜ್ಯಗಳಲ್ಲಿ ಅನುಷ್ಠಾನಗೊಳಿಸುವುದಿಲ್ಲ ಎಂದು ಹೇಳಿವೆ ಎಂದು ಸಿದ್ದರಾಮಯ್ಯ ಅವರು, ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಆಚರಣೆಗೆ ತರಲು ಸಾಧ್ಯವಿಲ್ಲ. ಇದರ ಬಗ್ಗೆ ಜನರು ಆತಂಕ ಪಡಬಾರದು, ಹಾಗೆಂದು ಮೈಮರೆತು ಕುಳಿತುಕೊಳ್ಳಬಾರದು. ದಾರಿ ತಪ್ಪಿಸುವ ಬಿಜೆಪಿ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.