ಕೇಂದ್ರ ಸರ್ಕಾರದಿಂದ ಜನರ ಲೂಟಿ: ಸಿದ್ದು ಗರಂ| ಅಗತ್ಯ ವಸ್ತುಗಳ ಬೆಲೆ ಕಮ್ಮಿ ಮಾಡೋದಾಗಿ ಮೋದಿ ಹೇಳಿದ್ದರು| ಪೆಟ್ರೋಲ್ ದರ ಏರಿಸಿ ಜನರ ಲೂಟಿ ಹೊಡಿತಿದ್ದಾರೆ| ದರ ಏರಿಕೆಗೆ ಕಾಂಗ್ರೆಸ್ ಮೇಲೆ ಮೋದಿ ದೂಷಣೆ| ಮೋದಿ ಅವಧಿಯಲ್ಲೇ ಆಮದು ಭಾರೀ ಏರಿಕೆ|
ಬೆಂಗಳೂರು(ಮಾ.20): ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದು ಕಷ್ಟ ಎಂಬಂತಾಗಿದೆ. ಇದರ ನಡುವೆಯೂ ಕೊರೋನಾ ಸಂಕಷ್ಟದಿಂದ ಹೊರಬಂದು ಬದುಕು ಕಟ್ಟಿಕೊಳ್ಳುತ್ತಿದ್ದ ಬಡ ಜನರಿಗೆ ತೆರಿಗೆ ಹೆಚ್ಚಳದ ಮೂಲಕ ಕೇಂದ್ರ ಸರ್ಕಾರ ಬೆನ್ನು ಮೂಳೆ ಮುರಿದಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ವಿಧಾನಸಭೆ ಮಾತನಾಡಿದ ಅವರು, ಸದನದಲ್ಲಿ ನಿಯಮ 69ರ ಅಡಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಪ್ರಸ್ತಾಪಿಸಿದ ಅವರು, 2014ಕ್ಕೆ ಮೊದಲು ಅಗತ್ಯ ವಸ್ತುಗಳ ದರ ಕಡಿಮೆ ಮಾಡುವುದಾಗಿ ಭರವಸೆ ನೀಡಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು. ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಅರ್ಧದಷ್ಟು ಕಡಿಮೆಯಾಗಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿಸಿದ್ದಾರೆ. ಈ ಮೂಲಕ ಜನರನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದರು.
‘2014ರಲ್ಲಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದಾಗ ಪೆಟ್ರೋಲ್ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ 9.21 ರು. ಇತ್ತು. ಡೀಸೆಲ್ ಮೇಲೆ 3.46 ರು. ಇತ್ತು. ಈಗ ಪೆಟ್ರೋಲ್ ಮೇಲೆ 32.98 ರು. ಹಾಗೂ ಡೀಸೆಲ್ ಮೇಲೆ 31.83 ರು. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರಲ್ಲಿ ಕಚ್ಚಾತೈಲದ ಬೆಲೆ ಒಂದು ಬ್ಯಾರಲ್‌ಗೆ 6,794 ರು. ಇತ್ತು. ಇದೀಗ 4,008 ರು.ಗೆ ಇಳಿಕೆಯಾಗಿದೆ. ಕಚ್ಚಾತೈಲ ಬೆಲೆ ಕಡಿಮೆಯಾದಂತೆ ಪೆಟ್ರೋಲ್ ಬೆಲೆ ಕಡಿಮೆಯಾಗಬೇಕಿತ್ತಲ್ಲವೇ? ಇದಕ್ಕೆ ಮೋದಿ ಸರ್ಕಾರವನ್ನು ಹೊಣೆ ಮಾಡದೆ ಇನ್ಯಾರನ್ನು ಹೊಣೆ ಮಾಡಬೇಕು?’ ಎಂದು ಕಿಡಿ ಕಾರಿದರು.
'ಈ ಬಾರಿ ಸಿದ್ದರಾಮಯ್ಯ ಸೋಲು ಖಚಿತ'
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ವೇಳೆ, ‘ಪೆಟ್ರೋಲ್ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳು ಆಮದು ಕಡಿಮೆ ಮಾಡಿಕೊಳ್ಳಲು ಪ್ರಯತ್ನಸದೆ ಇರುವುದೇ ಕಾರಣ ಎಂದು ನರೇಂದ್ರ ಮೋದಿ ಹೇಳಿದ್ದಾರೆ. 2013-14 ರಲ್ಲಿ 184 ಮಿಲಿಯನ್ ಟನ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದ ಭಾರತ 2019-20 ರಲ್ಲಿ 228 ಮಿಲಿಯನ್ ಟನ್ ಆಮದು ಮಾಡಿಕೊಂಡಿದೆ. ಹಿಂದಿನ ಸರ್ಕಾರಗಳನ್ನು ದೂರುವ ನೀವು ಬಂದು 7 ವರ್ಷವಾದರೂ ಆಮದು ತಡೆಯದೆ ಇನ್ನೂ ಹೆಚ್ಚೆಚ್ಚು ಆಮದು ಮಾಡಿಕೊಳ್ಳುತ್ತಿರುವುದೇಕೆ?’ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದಿಂದ ಲೂಟಿ:
ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಕೇವಲ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯಿಂದ 1.18 ಲಕ್ಷ ಕೋಟಿ ರು. ಹೋಗಿದೆ. ಆದರೆ, ಇದರಲ್ಲಿ ಕರ್ನಾಟಕಕ್ಕೆ ವಾಪಸ್ಸು ನೀಡಿರುವುದು 732 ಕೋಟಿ ರು. ಮಾತ್ರ. ಇದನ್ನು ನೋಡಿದರೆ ಕೇಂದ್ರ ಸರ್ಕಾರ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ ಎಂದು ಹೇಳಬೇಕೋ, ಬೇಡವೋ ಎಂದು ಪ್ರಶ್ನಿಸಿದರು.
‘ಎಣ್ಣೆ’ ಹಾಕಬೇಕು ಎಂದಿಲ್ಲ: ಸ್ಪೀಕರ್ ಚಟಾಕಿ
ವಿಧಾನಸಭೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಮಾತಿನ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ನಮ್ಮ ವ್ಯಾಪ್ತಿಗೆ (ವಿಧಾನಸಭೆ) ಬರುತ್ತದೆಯೇ ಎಂದು ಸಂಶಯ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಎಚ್.ಕೆ. ಪಾಟೀಲ್, ‘ಪೆಟ್ರೋಲ್-ಡೀಸೆಲ್ ಹಾಕಿಕೊಂಡೇ ನಾವು ವಿಧಾನಸಭೆಗೆ ಬರಬೇಕು’ ಎಂದು ಸೂಚ್ಯವಾಗಿ ಹೇಳಿದರು. ಸ್ಪೀಕರ್ ಕಾಗೇರಿ, ’ಸದ್ಯ ನೀವು ಗೌರವಯುತವಾಗಿ ಹೇಳಿದಿರಿ. ನಮ್ಮ ಹಳ್ಳಿ ಕಡೆ ಹೇಳಿದಂತೆ ಎಣ್ಣೆ ಹಾಕಿಕೊಂಡೇ ಸದನಕ್ಕೆ ಬರಬೇಕು ಅನ್ನಲಿಲ್ಲ ಪುಣ್ಯ’ ಎಂದು ಹಾಸ್ಯಚಟಾಕಿ ಹಾರಿಸಿದರು.
