ಚಾಮರಾಜಪೇಟೇಲಿ ನಾನ್ ಕೋವಿಡ್ ಆಸ್ಪತ್ರೆ: ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ಟಾಂಗ್
* ರಾಜ್ಯದ ಎಲ್ಲಾ ಕ್ಷೇತ್ರಗಳ ಮೇಲೂ ನನಗೆ ಪ್ರೀತಿ ಇದೆ
* ಕಾಂಗ್ರೆಸ್ ಬಡವರ ಪಕ್ಷ, ಬಡವರಿಗಾಗಿ ಹೋರಾಟ ಮಾಡುತ್ತೆ
* ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
ಬೆಂಗಳೂರು(ಮೇ.22): ನಗರದ ಬಹುತೇಕ ಆಸ್ಪತ್ರೆಗಳು ಕೋರೋನಾ ರೋಗಿಗಳಿಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆಂದೇ ಶಾಸಕ ಜಮೀರ್ ಅಹಮದ್ ಖಾನ್ ಅವರ ನಿರ್ಮಾಣದ ತಾತ್ಕಾಲಿಕ ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು(ಶನಿವಾರ) ಚಾಲನೆ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ 80 ಹಾಸಿಗೆಗಳ ನಾನ್ ಕೋವಿಡ್ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣವಾಗಿದೆ.
ಚಾಮರಾಜಪೇಟೆ ಮೇಲೆ ಹೆಚ್ಚು ಮೋಹ ಎಂಬ ಬಿಜೆಪಿ ಟ್ವೀಟ್ ವಿಚಾರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೇವಲ ಚಾಮರಾಜಪೇಟೆ ಒಂದೇ ಕಡೆ ಬಂದಿಲ್ಲ. ಎಲ್ಲ ಕ್ಷೇತ್ರಗಳಿಗೂ ಹೋಗಿದ್ದೇನೆ. ರಾಜ್ಯದ ಎಲ್ಲಾ ಕ್ಷೇತ್ರಗಳ ಮೇಲೂ ನನಗೆ ಪ್ರೀತಿ ಇದೆ. ನಾನು ಕೋಲಾರ, ಚಾಮರಾಜನಗರ ಎಲ್ಲಾ ಕಡೆ ಹೋಗಿದ್ದೇನೆ. ಈ ರೀತಿ ರಾಜಕಾರಣಕ್ಕೆ ನಾನು ಉತ್ತರಿಸಬೇಕಿಲ್ಲ ಎಂದು ಬಿಜೆಪಿಗರಿಗೆ ಟಾಂಗ್ ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ಅಪಪ್ರಚಾರ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ CT ರವಿ
"
ಸರ್ಕಾರದ ದುಡ್ಡಲ್ಲಿ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ ಎಂಬ ಸಿ.ಟಿ. ರವಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅದು ಸಿ.ಟಿ. ರವಿ ಮನೆ ದುಡ್ಡಲ್ಲ. ಬಿಜೆಪಿಯವರೇನು ಮನೆಯಿಂದ ತಂದು ಮಾಡ್ತಿದ್ದಾರಾ?, ರಸ್ತೆ, ಅಭಿವೃದ್ದಿ ಕಾಮಗಾರಿ ಎಲ್ಲಾ ಸರ್ಕಾರದ ದುಡ್ಡೇ ಅಲ್ವಾ? ಅದೆಲ್ಲ ಯಾರದ್ದು? ಎಲ್ಲವೂ ಜನರ ದುಡ್ಡೇ ಅಲ್ವಾ?, ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಬಡವರಿಗಾಗಿ ಹೋರಾಟ ಮಾಡುತ್ತದೆ ಅಂತ ಸಿ.ಟಿ. ರವಿಗೆ ತಿರುಗೇಟು ನೀಡಿದ್ದಾರೆ.