ಧರ್ಮಸ್ಥಳದ ಶವಗಳ ಶೋಧನೆ ಬಗ್ಗೆ ಶಾಸಕಾಂಗ ಸಭೆಯಲ್ಲಿ ತೀವ್ರ ಚರ್ಚೆಯಾಗಿದೆ. ಇದೇ ವೇಳೆ  13ನೇ ಸ್ಥಳದಲ್ಲೂ ಶವ ಸಿಗದಿದ್ದರೆ ಎಸ್ಐಟಿ ಶವ ಶೋಧನೆ ಸ್ಥಗಿತದ ಕುರಿತು ಸರ್ಕಾರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಆ.12) ಧರ್ಮಸ್ಥಳದಲ್ಲಿ ಎಸ್ಐಟಿ ನಡೆಸುತ್ತಿರುವ ಶವ ಶೋಧನೆಗಳ ತನಿಖೆ ತೀವ್ರಗೊಂಡಿದೆ. ಇಂದು (ಆ.12) ರೇಡಾರ್ ಮೂಲಕ ಶವ ಶೋಧನೆ ಕಾರ್ಯ ನಡೆಸಿತ್ತು. ಮುಸುಕುದಾರಿ ದೂರುದಾರ ಗುರುತಿಸಿದ 13ನೇ ಸ್ಥಳದಲ್ಲಿ 18 ಅಡಿ ಆಳದವರೆಗೆ ಎರಡು ಜೆಸಿಬಿ ಮೂಲಕ ಅಗೆಯಲಾಗಿದೆ. ಆದರೆ ಯಾವುದೇ ಕಳೇಬರ ಬತ್ತೆಯಾಗಿಲ್ಲ. ಇಂದು 13ನೇ ಸ್ಥಳದಲ್ಲಿ ಉತ್ಖನನ ಕಾರ್ಯಾಚರಣೆಗೂ ಮೊದಲು ಶಾಸಕಾಂಗ ಸಭೆಯಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ಭಾರಿ ಚರ್ಚೆಯಾಗಿದೆ. 13ನೇ ಸ್ಥಳದಲ್ಲೂ ಶವ ಸಿಗದಿದ್ದರೆ ಎಸ್ಐಟಿಯ ಶವ ಶೋಧನೆ ಸ್ಥಗಿತ ಮಾಡಬೇಕಾಗಬಹುದು. ಈ ಕುರಿತು ಸರ್ಕಾರ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಧರ್ಮಸ್ಥಳದ ಶವ ಪತ್ತೆ ಕಾರ್ಯ ಹಾಗೂ ಎಸ್ಐಟಿ ತನಿಖೆ ಕುರಿತು ಬೇಳೂರು ಗೋಪಾಲಕೃಷ್ಣ ಚರ್ಚೆ ಕೈಗೆತ್ತಿಕೊಂಡಿದ್ದಾರೆ. ಈ ವೇಳೆ ಸ್ವತಃ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದಾರೆ. ಎಸ್ಐಟಿ ರಚನೆಗೆ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಧರ್ಮಸ್ಥಳ ವಿಚಾರವಾಗಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ ಎಂದು ಸಿದ್ದರಾಮಯ್ಯ ಶಾಸಕಾಂಗ ಸಭೆಯಲ್ಲಿ ತಮ್ಮ ನಾಯಕರಿಗೆ ಸೂಚನೆ ನೀಡಿದ್ದಾರೆ. ಎಸ್ಐಟಿಯಿಂದ ಸಾರ್ವಜನಿಕ ವಲಯದಲ್ಲಿ ಪಾಸಿಟಿವ್ ಅಭಿಪ್ರಾಯ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಚರ್ಚೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅದನ್ನು ಚರ್ಚಿಸುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಎಸ್.ಐ.ಟಿ ಪರಿಶೋಧನೆ ನಿಲ್ಲಿಸಬೇಕಾಗಬಹುದು

ದೂರುದಾರ ಗುರುತಿಸಿದ 13ನೇ ಸ್ಥಳದಲ್ಲೂ ಶವ ಸಿಗದೇ ಇದ್ದರೆ ಎಸ್ಐಟಿ ಶವ ಶೋಧನೆಯನ್ನು ನಿಲ್ಲಿಸಬೇಕಾಗಬಹುದು. ಈ ಬಗ್ಗೆ ಸಚಿವರ ಜೊತೆಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ. ಎಸ್.ಐಟಿ ಯಿಂದ ಶವ ಶೋಧನೆಯನ್ನು ಮುಂದುವರಿಸಬೇಕಾ ಬೇಡವಾ ಎಂದು ಸರ್ಕಾರ ಚರ್ಚಿಸಿ ತೀರ್ಮಾನ ಮಾಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಂದು ಸ್ಥಳದಲ್ಲಿ ಮಾತ್ರ ಮೂಳೆಗಳು ಪತ್ತೆಯಾಗಿದೆ. ಅದು ಪುರುಷನ ಮೂಳೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

13ರಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ

ಸಿದ್ದರಾಮಯ್ಯ ಈ ವಿಚಾರ ಚರ್ಚಿಸುವ ವೇಳೆ ಕಾರ್ಯಾಚರಣೆ ಮಾಹಿತಿ ಮುಖ್ಯಮಂತ್ರಿ ಕೈಸೇರಿರಲಿಲ್ಲ. ಇಂದು (ಆ.12) ನಡೆದ 13ನೇ ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಬರೋಬ್ಬರಿ 18 ಅಡಿ ಜೆಸಿಬಿ ಮೂಲಕ ಅಗೆಯಲಾಗಿದೆ. ಯಾವುದೇ ಕಳೇಬರ ಪತ್ತೆಯಾಗಿಲ್ಲ. ಹೀಗಾಗಿ ಎಸ್ಐಟಿ ಶವ ಶೋಧನೆ ಪ್ರಕ್ರಿಯೆ ಸ್ಥಗಿತಗೊಳಿಸುವ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ. ಆಧರೆ ಎಸ್ಐಟಿ ತನಿಖೆ ಮುಂದುವರಿಯಲಿದೆ. ಸಿಕ್ಕಿರುವ ಮೂಳೆಯ ವಿಧಿವಿಜ್ಞಾನ ವರದಿ, ಮುಸುಕುದಾರಿ ದೂರುದಾರ ನೀಡಿರುವ ಮಾಹಿತಿ, ಇತರರು ಹೊಸದಾಗಿ ನೀಡಿರುವ ದೂರುಗಳು, ಹಾಗೂ ಧರ್ಮಸ್ಥಳಧ ಬುರಡೆ ಪ್ರಕರಣದ ತನಿಖೆ ಮುಂದುವರಿಯಲಿದೆ. ಕೇವಲ ಶವ ಶೋಧನೆ ಪ್ರಕ್ರಿಯೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.