ಮೊಟ್ಟೆ ಎಸೆತ ಪ್ರಕರಣ: ಸಿದ್ದರಾಮಯ್ಯ ಭದ್ರತೆ ಹೆಚ್ಚಿಸಿದ ಪೊಲೀಸ್ ಇಲಾಖೆ
Siddaramaiah Egg Incident: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದ ನಂತರ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಸೆಕ್ಯುರಿಟಿಯನ್ನು ಹೆಚ್ಚಿಸಿದೆ. ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಭದ್ರತೆಗೆ ಹೆಚ್ಚಿನ ಸಿಬ್ಬಂದಿಯನ್ನು ನೀಡಿದೆ.
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಬೆಂಗಾವಲು ಪಡೆಯನ್ನು ಹೆಚ್ಚಿಸಿ ಪೊಲೀಸ್ ಇಲಾಖೆ ಆದೇಶಿಸಿದೆ. ಸಿದ್ದರಾಮಯ್ಯಗೆ ಎಸ್ಕಾರ್ಟ್ ಹೆಚ್ವಿಸಿ ಬೆಂಗಳೂರು ಪೊಲೀಸರು ಆದೇಶಿಸಿದ್ದಾರೆ. ಅಧಿಕಾರಿ, ಸಿಬ್ಬಂದಿಗಳು ಸೇರಿ 21 ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮೂರು ಪಾಳಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ. ಘಟನೆ ಬಳಿಕ ಪ್ರತಿ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲೆ ಹೋದರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಏನಾದ್ರು ಅವಘಡ ಸಂಭವಿದರೆ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲು ಸಹ ತಿಳಿಸಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬೆಂಗಳೂರು ಪೊಲೀಸರು ಭದ್ರತೆ ನೀಡಲಿದ್ದು, ಬೆಂಗಳೂರಿನಿಂದ ಹೊರ ಹೋಗುವ ವೇಳೆ ಹೈವೆ ಪ್ಯಾಟ್ರೋಲಿಂಗ್, ಸ್ಥಳೀಯ ಪೊಲೀಸರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆದೇಶಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿಗೆ ಝಡ್ ಕ್ಯಾಟಗರಿ ಭದ್ರತೆಯನ್ನು ನೀಡಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಝಡ್ ಪ್ಲಸ್ ಭದ್ರತೆ ಕಲ್ಪಿಸಲಾಗಿದೆ.
ಜಿಲ್ಲಾ ಪ್ರವಾಸದ ವೇಳೆ ಸಂದರ್ಭಾನುಸಾರ ಸಿಬ್ಬಂದಿ ಹೆಚ್ಚಿಸಲು ಎಲ್ಲ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಖುದ್ಧು ಹಿರಿಯ ಅಧಿಕಾರಿಗಳು ಸಿದ್ದುಗೆ ಇರುವ ಸಿಬ್ಬಂದಿ ಬಳಿ ತೆರಳಿ ಕರ್ತವ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ಮುಖ್ಯಮಂತ್ರಿಗಳಿಗಿರುವಷ್ಟೇ ಗೌರವ ಮತ್ತು ಸವಲತ್ತುಗಳಿರುತ್ತವೆ. ಒಂದರ್ಥದಲ್ಲಿ ಮುಖ್ಯಮಂತ್ರಿ ನಂತರದ ಪವರ್‌ಫುಲ್ ಅಧಿಕಾರ ಅವರದ್ದೇ ಆಗಿರುತ್ತದೆ. ಹೀಗಿರುವಾಗ ಅವರ ಭದ್ರತೆಯಲ್ಲಿ ಲೋಪವಾದರೆ ಗಂಭಿರವಾಗಿ ಪರಿಗಣಿಸಲಾಗುತ್ತಿದೆ.
ಆಗಿದ್ದೇನು?:
ಸಾವರ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿ ಬಾರಿ ಅವಹೇಳನಕಾರಿ ಹಾಗೂ ಟೀಕೆ ಮಾಡುವುದನ್ನು ಖಂಡಿಸಿ ಅನೇಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ದ ಬೀದಿಗಳಿದು ಪ್ರತಿಭಟನೆ ನಡೆಸಿದ್ದರು. ಮಡಿಕೇರಿಯಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣ ಇಡೀ ರಾಜ್ಯಾದ್ಯಂತ ದೊಡ್ಡ ಸದ್ದು ಮಾಡಿತು. ಈ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ, ವಿಪಕ್ಷ ನಾಯಕ ಸಿದ್ಧರಾಮಯ್ಯ ಮೇಲೆ ಮೊಟ್ಟೆ ಎಸೆತಕ್ಕೆ ಖಂಡನೀಯ ಎಂದಿದ್ದರು.
ಪ್ರಜಾಪ್ರಭುತ್ವದಲ್ಲಿ ಸಿದ್ಧರಾಮಯ್ಯ ತಮ್ಮ ವಿಚಾರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅಶಾಂತಿ ಮೂಡಿಸುವ ಕೆಲಸ ಸರಿ ಅಲ್ಲ. ಮಾಜಿ ಸಿಎಂ ಸಿದ್ಧರಾಮಯ್ಯಗೆ ಅವಮಾನ ಅಲ್ಲ, ರಾಜ್ಯಕ್ಕೆ ಅವಮಾನ ಎಂದು ಕೆಂಡಕಾರಿದರು. ಅವಮಾನದ ಜವಬ್ದಾರಿಯನ್ನು ಸಿಎಂ ಹೊತ್ತುಕೊಳ್ಳಬೇಕು. ಪ್ರಕರಣದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಲಹೆ ನೀಡಿದ್ದೇನೆ, ಮನವಿ ಮಾಡಿದ್ದೇನೆ. ಕ್ಷುಲ್ಲಕ ವಿಚಾರ ದೂರವಟ್ಟು, ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯರಂಥ ರಾಷ್ಟ್ರದ್ರೋಹಿಯನ್ನು ಕಂಡಿಲ್ಲ: ಈಶ್ವರಪ್ಪ
ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಶಾಂತಿಯುತವಾಗಿ ಬದುಕಲು ಬಿಡಿ. ಯಾವುದೇ ಸಂಘಟನೆಗಳಿರಲಿ, ಹಿಂದೂಪರ ಅಥವಾ ಯಾವುದೇ ಸಮಾಜದ ಪರ ಸಂಘಟನೆಯಿರಲಿ. ಜನರ ಬದುಕಿಗೆ ಕಾರ್ಯಕ್ರಮಗಳು ಬೇಕಿದೆ. ಸಿದ್ಧರಾಮಯ್ಯ ಮೇಲೆ ಕೋಳಿ ಮೊಟ್ಟೆ ಎಸೆದಿದ್ದಕ್ಕೆ ನಾನು ಖುಷಿ ಪಡಲ್ಲ. ಇಂಥ ಘಟನೆಗಳು ನಡೆಯಬಾರದು. ಜನರ ಸಮಸ್ಯೆ ಕೇಳಲು ಬಂದವರ ಮೇಲೆ ಮೊಟ್ಟೆ ಎಸೆತ ಸರಿಯಲ್ಲ. ಮೊಟ್ಟೆ ಎಸೆದ ಸಂಘಟನೆಯವರು ಮಡಿಕೇರಿಗೆ ಗೌರವ ತಂದಿದ್ದೀರಾ ಎಂದು ಪ್ರಶ್ನಿಸಿದರು. ಗಣೇಶ ಹಬ್ಬದ ಸಮಯದಲ್ಲಿಯೂ ಸಾವರ್ಕರ್ ಪೊಟೋ ಇಡ್ತೀವಿ ಎಂದ ಪ್ರಮೋದ್ ಮುತಾಲಿಕ್‌ಗೆ ಈ ದೇಶದ ಸಮಸ್ಯೆ, ಬಡತನದ ಬಗ್ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.