ಸಿದ್ದರಾಮಯ್ಯ 1995ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದಾಗ ಅದರ ಗಾತ್ರ 12,000 ಕೋಟಿ ರೂ. ಆಗಿತ್ತು. ಇದೀಗ 16ನೇ ಬಜೆಟ್ ಮಂಡನೆ ಮಾಡಿದ್ದು 4.09 ಲಕ್ಷ ಕೋಟಿ ರೂ. ಗಾತ್ರವಾಗಿದೆ.  ಇದು ಸಾಮಾಜಿಕ ಕಳಕಳಿ ಮತ್ತು ಉದ್ಯಮ ಸ್ನೇಹಿ ಬಜೆಟ್ ಎಂದು ಸಚಿವ ಎಂ.ಬಿ. ಪಾಟೀಲ ಶ್ಲಾಘಿಸಿದ್ದಾರೆ.

ಬೆಂಗಳೂರು (ಮಾ.07): ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 1995ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದಾಗ ಅದರ ಗಾತ್ರ 12,000 ಕೋಟಿ ರೂ. ಆಗಿತ್ತು. ಆದರೆ, ಇದೀಗ 16ನೇ ಬಜೆಟ್ ಮಂಡನೆ ಮಾಡಿದ್ದು 4.09 ಲಕ್ಷ ಕೋಟಿ ರೂ. ಗಾತ್ರವಾಗಿದೆ. ಇದು ಸಾಮಾಜಿಕ ಕಳಕಳಿ ಹಾಗೂ ಉದ್ಯಮ ಸ್ನೇಹಿ ಬಜೆಟ್ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಬಜೆಟ್ ಮಂಡನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು 16ನೇ ಬಾರಿಗೆ ಮಂಡಿಸಿರುವ ಬಜೆಟ್ ಸಾಮಾಜಿಕ ಕಳಕಳಿ ಹೊಂದಿರುವ ಕಲ್ಯಾಣ ಕಾರ್ಯಕ್ರಮಗಳು ಮತ್ತು ಆರ್ಥಿಕ ಬೆಳವಣಿಗೆಗೆ ಇಂಬು ನೀಡುವ ಕೈಗಾರಿಕಾ ಬೆಳವಣಿಗೆ ಎರಡಕ್ಕೂ ಸಮಾನ ಪ್ರಾತಿನಿಧ್ಯ ನೀಡಿರುವ ಸಮಗ್ರ ದೃಷ್ಟಿಕೋನದ ಬಜೆಟ್ ಆಗಿದೆ. ಸಿದ್ದರಾಮಯ್ಯನವರು 1995ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದಾಗ ಅದರ ಗಾತ್ರ 12 ಸಾವಿರ ಕೋಟಿ ರೂ.ಗಳಿತ್ತು. ಈ ವರ್ಷ ಇದು 4.09 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಇದು ಅವರ ಆರ್ಥಿಕ ಚಿಂತನೆಯನ್ನು ಪ್ರತಿಫಲಿಸುತ್ತದೆ. ಜತೆಗೆ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರವು ಮಾಡುತ್ತಿರುವ ಅನ್ಯಾಯದ ಬಗ್ಗೆಯೂ ಅವರು ಹೇಳಿದ್ದಾರೆ. ಇದು ಒಂದು ಹೊಸ ಚರ್ಚೆಗೆ ನಾಂದಿ ಹಾಡಲಿದೆ ಎಂದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳಕ್ಕೆ ಮುಖ್ಯಮಂತ್ರಿಗಳು ಕೃಷಿ ಸಂಶೋಧನಾ ಕೇಂದ್ರ ಮತ್ತು ಮುಧೋಳಕ್ಕೆ ಹೆರಿಗೆ ಆಸ್ಪತ್ರೆ ಘೋಷಿಸಿದ್ದಾರೆ. ಇದು ಪ್ರಾದೇಶಿಕ ಸಮತೋಲನೆಯನ್ನು ನಿವಾರಣೆ ಮಾಡುವ ಕ್ರಮವಾಗಿದೆ. ಹಾಗೆಯೇ, ತಿಡಗುಂದಿಯಲ್ಲಿ ಪ್ಲೇ & ಪ್ಲಗ್ ಮಾದರಿಯ ಕೈಗಾರಿಕಾ ಪಾರ್ಕ್ ಸ್ಥಾಪನೆ ಘೋಷಿಸಿರುವುದು ಆ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವ ತಮಗೆ ಖುಷಿ ತಂದಿದೆ. ಮುಖ್ಯಮಂತ್ರಿಗಳು ಬಂಡವಾಳ ಹೂಡಿಕೆಸ್ನೇಹಿ ವಾತಾವರಣ ಸೃಷ್ಟಿಯ ಬಗ್ಗೆ ಬಜೆಟ್ಟಿನಲ್ಲಿ ಪ್ರಸ್ತಾಪಿಸಿದ್ದಾರೆ. ಇ.ವಿ.ಕ್ಲಸ್ಟರ್ ಸ್ಥಾಪನೆಗೆ 25 ಕೋಟಿ ರೂ ಕೊಟ್ಟಿರುವುದು ಒಳ್ಳೆಯ ಕ್ರಮವಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ. ಅನುದಾನ ನೀಡುತ್ತಿರುವುದು ಮತ್ತು ನಗರದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸುಗಮಗೊಳಿಸಿರುವ ಮೆಟ್ರೋ ರೈಲು ಯೋಜನೆಯನ್ನು ದೇವನಹಳ್ಳಿಯವರೆಗೂ ವಿಸ್ತರಿಸಿರುವುದು ಸಕಾಲಿಕ ಕ್ರಮಗಳಾಗಿವೆ ಎಂದು ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Budget 2025: ನಿರ್ಜೀವ ಬಜೆಟ್ ಎಂದ ಪ್ರಭು ಚೌವ್ಹಾಣ್, ಸಮಾಜಮುಖಿ ಬಜೆಟ್ ಎಂದ ಶಿವರಾಮ್ ಹೆಬ್ಬಾರ್!

ರಾಜ್ಯದ ಸಮಗ್ರ ಅಭಿವೃದ್ಧಿ ಎಂದರೆ, ಕೃಷಿ ಮತ್ತು ಕೈಗಾರಿಕೆ ಎರಡಕ್ಕೂ ಗಮನ ಹರಿಸಬೇಕಾಗುತ್ತದೆ. ಇದಕ್ಕೆ ತಕ್ಕಂತೆ ಹನಿ ನೀರಾವರಿ, ಯಾಂತ್ರೀಕೃತ ಕೃಷಿ, ಸಾವಯವ ಕೃಷಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ರಚನಾತ್ಮಕವಾಗಿವೆ. ಇದರಿಂದ ರೈತರ ಸಬಲೀಕರಣ ಸಾಧ್ಯವಾಗಲಿದೆ. ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ನೂತನ ಯೋಜನೆ ಪ್ರಾರಂಭಿಸಿ, ಅದಕ್ಕೆ 8,000 ಕೋಟಿ ರೂ. ಅನುದಾನ ಕೊಡುತ್ತಿರುವುದು ಗ್ರಾಮೀಣ ಭಾಗಗಳಲ್ಲಿ ಸೌಕರ್ಯಗಳ ಸುಧಾರಣೆಗೆ ದಾರಿ ಮಾಡಿಕೊಡಲಿದೆ ಎಂದು ಸಚಿವರು ಹೇಳಿದ್ದಾರೆ.