ಬೆಂಗಳೂರು(ಜು.17):  ಕೊರೋನಾ ಪಿಡುಗಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ. ಕೊನೆಯದಾಗಿ ರಾಜ್ಯವನ್ನು ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. 

ಶ್ರೀರಾಮುಲು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕರಾದ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ, ತಮ್ಮ ವೈಫಲ್ಯ ಮರೆ ಮಾಚಲು ದೇವರ ಮೊರೆ ಹೋಗುವವರಿಗೆ ಅಧಿಕಾರದಲ್ಲಿರುವ ಹಕ್ಕಿಲ್ಲ. ಕೂಡಲೇ ಯಡಿಯೂರಪ್ಪ ಹಾಗೂ ಅವರ ಸಂಪುಟದ ಸದಸ್ಯರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ರಾಮುಲು, ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಮ್ಮ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಚಿಕಿತ್ಸೆ ನೀಡದ ವೈದ್ಯ ಸಿಬ್ಬಂದಿಗೆ ಜೈಲು, ನಿದ್ದೆ ವಿಚಾರಕ್ಕೆ ಸಿದ್ದುಗೆ ಅಶೋಕ್ ಗುದ್ದು!

ಡಿ.ಕೆ.ಶಿವಕುಮಾರ್‌ ಅವರೇ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೋಂಕು ಹೆಚ್ಚಾಗಲು, ಸರ್ಕಾರದ ನಿರ್ಲಕ್ಷ್ಯ, ಸಚಿವರ ಬೇಜವಾಬ್ದಾರಿ, ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸುವ ವೇಳೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಪ್ರತಿಪಕ್ಷಗಳ ಆರೋಪವು ಸತ್ಯಕ್ಕೆ ದೂರವಾದುದು. ಸೋಂಕು ತಡೆಯಲು ಜನರಲ್ಲಿ ಜಾಗೃತಿ ಬರಬೇಕು. ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಎಡವಿದರೆ ಪರಿಸ್ಥಿತಿ ಕ್ಲಿಷ್ಟಕರ ಎಂದು ಹೇಳುವ ವೇಳೆ ಇನ್ನೂ ಎಡವಿದರೆ ದೇವರೇ ಕಾಪಾಡಬೇಕು ಎಂದು ಹೇಳಿದ ಎಚ್ಚರಿಕೆ ಮಾತುಗಳು ಅವು ಎಂದಿದ್ದಾರೆ ರಾಮುಲು. ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಚಿವರು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಶತಮಾನದ ಸವಾಲನ್ನು ಸಮರ್ಥವಾಗಿ ಗೆಲ್ಲಲು, ಜನರಿಗಾಗಿ ದುಡಿಯುತ್ತಿದ್ದೇವೆ’ ಎಂದು ಹೇಳಿದ್ದಾರೆ.

"

ರಾಮುಲು ಸಹಾಯಕ್ಕೆ ಬೊಮ್ಮಾಯಿ, ರಮೇಶ್‌

ದೇವರೇ ಕಾಪಾಡಬೇಕು ಎಂಬ ಶ್ರೀರಾಮುಲು ಅವರ ಮಾತು ಅಸಹಾಯಕ ಹೇಳಿಕೆ ಅಲ್ಲ, ಲೋಕಾರೂಢಿ ಹೇಳಿಕೆ ಅಷ್ಟೇ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಶ್ರೀರಾಮುಲು ಅವರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ. ಜಲ​ಸಂಪ​ನ್ಮೂಲ ಸಚಿ​ವ ರಮೇಶ್‌ ಜಾರ​ಕಿ​ಹೊಳಿ ಸಹ ರಾಮುಲು ಬೆನ್ನಿಗೆ ನಿಂತಿದ್ದು, ‘ಭಾ​ರ​ತೀ​ಯರು ದೇವ​ರನ್ನು ನಂಬು​ವುದು ಜಾಸ್ತಿ. ಹಾಗಾಗಿ ರಾಮುಲು ಆ ರೀತಿ ಹೇಳಿಕೆ ಕೊಟ್ಟಿ​ರ​ಬ​ಹುದು. ಕಾಂಗ್ರೆಸ್‌ನವರು ವಿಷಯ ದೊಡ್ಡದು ಮಾಡಿ​ದರೆ ಏನು ಮಾಡೋ​ದು’ ಎಂದಿ​ದ್ದಾರೆ.

ಕೊರೋನಾ ವಿಚಾರದಲ್ಲಿ ಶ್ರೀರಾಮುಲು ಅಸಹಾಯಕತೆ: ಜನ ಸಾಮಾನ್ಯರ ಗತಿ...?

ಕಾಂಗ್ರೆಸ್‌ ವಾಗ್ದಾಳಿ:

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೋವಿಡ್‌ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ಸರ್ಕಾರ ರಾಜೀನಾಮೆ ನೀಡಲಿ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರಲಿ ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಮಾತನಾಡಿ, ಅಧಿಕಾರ ಇರುವವರು ಮಾನವ ಪ್ರಯತ್ನಗಳನ್ನೆಲ್ಲವನ್ನು ಮಾಡಿ ಬಳಿಕ ದೇವರ ಮೇಲೆ ಭಾರ ಹಾಕಬೇಕು. ರಾಜ್ಯವನ್ನು ದೇವರೇ ಕಾಪಾಡಬೇಕು ಎಂದಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ನೈತಿಕತೆ ಇದ್ದರೆ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸೋಂಕಿನಲ್ಲಿ ರಾಜ್ಯ ದೇಶದಲ್ಲೇ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದು ನಿತ್ಯ 2-3 ಸಾವಿರ ಸೋಂಕು ವರದಿಯಾಗುತ್ತಿದ್ದು, 70-80 ಮಂದಿ ನಿತ್ಯ ಬಲಿಯಾಗುತ್ತಿದ್ದಾರೆ. ಪೌರಕಾರ್ಮಿಕರು, ಆರೋಗ್ಯ ಪರಿವೀಕ್ಷಕರಿಗೂ ಚಿಕಿತ್ಸೆ ನೀಡಲಾಗದ ಹೀನಾಯ ಸ್ಥಿತಿಗೆ ತಲುಪಲಾಗಿದೆ. ತಮ್ಮ ವೈಫಲ್ಯವನ್ನು ಮರೆ ಮಾಚಲು ದೇವರ ಮೇಲೆ ಭಾರ ಹಾಕುವ ಅವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಇಂತಹ ಸಂಕಷ್ಟಎದುರಾಗಿರುವಾಗ ತಿರುಪತಿಯಲ್ಲಿ 200 ಕೋಟಿ ರು. ವೆಚ್ಚ ಮಾಡಿ ನೂತನ ಭವನ ನಿರ್ಮಿಸಲು ಮುಂದಾಗಿದೆ. ಇಂತಹ ನಿರ್ಧಾರ ಕೈಗೊಳ್ಳುವ ಬದಲು ಮೊದಲು ಇಲ್ಲಿನ ಜನರಿಗೆ ಚಿಕಿತ್ಸೆ ನೀಡಲಿ ಎಂದು ಒತ್ತಾಯಿಸಿದರು.

ಅವ್ಯವಹಾರ ಬಿಚ್ಚಿ ಬಿಡುತ್ತೇನೆ:

ಆರೋಗ್ಯ ಇಲಾಖೆಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಲೆಕ್ಕ ಕೊಡಿ ಎಂದು ಕೇಳಿದ್ದೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು 2-3 ದಿನದಲ್ಲಿ ಎಲ್ಲಾ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಎಲ್ಲ ಲೆಕ್ಕಗಳೊಂದಿಗೆ ಮತ್ತೆ ಬರುತ್ತೇನೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ತಲ್ಲಣ- ಡಿಕೆಶಿ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಶ್ರೀರಾಮುಲು ಅವರ ಹೇಳಿಕೆಯಿಂದ ಇಡೀ ರಾಜ್ಯ ತಲ್ಲಣಗೊಂಡಿದೆ. ಇದು ಕೇವಲ ಶ್ರೀರಾಮುಲು ಅವರ ಹೇಳಿಕೆಯಲ್ಲ. ಮುಖ್ಯಮಂತ್ರಿಗಳು ಮತ್ತು ಅವರ ತಂಡದ ಹೇಳಿಕೆ ಇದಾಗಿದ್ದು, ಶ್ರೀರಾಮುಲು ಸರ್ಕಾರದ ಧ್ವನಿಯಾಗಿ ಈ ಮಾತನ್ನು ಹೇಳಿದ್ದಾರೆ. ಈ ಹೇಳಿಕೆ ನೀಡಿದ ಮರುಕ್ಷಣದಿಂದ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಜನರನ್ನು ದೇವರು ಕಾಪಾಡಬೇಕಾದರೆ ಬಿಜೆಪಿಯವರು ಯಾಕೆ ಅಧಿಕಾರದಲ್ಲಿ ಇರಬೇಕು. ರಾಜ್ಯದ ಜನತೆಯನ್ನು ರಕ್ಷಣೆ ಮಾಡಲು ಆಗದಿದ್ದರೆ ಕೂಡಲೇ ರಾಜೀನಾಮೆ ಕೊಡಲಿ’ ಎಂದು ಒತ್ತಾಯಿಸಿದರು.