ಕಲ್ಯಾಣ ಕರ್ನಾಟಕದ ರೈತರಿಗೆ ಸಿಎಂ ಸಿದ್ದರಾಮಯ್ಯ ಯುಗಾದಿ ಕೊಡುಗೆ ನೀಡಿದ್ದಾರೆ. ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಭದ್ರಾ ಜಲಾಶಯದಿಂದ ನೀರು ಹರಿಸಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ಬೆಳೆಗಳಿಗೆ ನೀರು ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

ಬೆಂಗಳೂರು (ಮಾ.30): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕಲ್ಯಾಣ ಕರ್ನಾಟಕದ ಭಾಗದ ರೈತರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಯುಗಾದಿ ಗಿಫ್ಟ್‌ ನೀಡಿದ್ದಾರೆ. ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರುಣಿಸುವ ಸಲುವಾಗಿ ಭದ್ರಾ ಜಲಾಶಯದಿಂದ ನೀರು ಹರಿಸಲು ಒಪ್ಪಿಗೆ ನೀಡಿದ್ದಾರೆ. ರೈತರ ಬೆಳೆಗಳಿಗೆ ಮಾತ್ರವಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ದಾಹವನ್ನೂ ಇದು ನೀಗಿಸಲಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ

'ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು.
ಎಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ. 
ಮಾರ್ಚ್ 30ರಂದು ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಇದರಲ್ಲಿ ಮೇ 8ರವರೆಗೆ ನೀರಾವರಿಗೆ 11ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ 14ಟಿಎಂಸಿ ಅಗತ್ಯವಿದ್ದು, 3ಟಿಎಂಸಿ ನೀರು ಜಲಾಶಯದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಎಪ್ರಿಲ್ 6ರಿಂದ ಕಾಲುವೆಗಳನ್ನು ಕೇವಲ ಕುಡಿಯುವ ನೀರಿನ ಪೂರೈಕೆಗೆ ಮಾತ್ರ ಬಳಸಿಕೊಳ್ಳಲಾಗುವುದು.
ರೈತಾಪಿ ಜನರ ಬೆಳೆಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸಲು ಸರ್ಕಾರ ಎಲ್ಲಾ ಹಂತದಲ್ಲೂ ಬದ್ಧವಾಗಿದೆ.

Scroll to load tweet…