ಬೆಂಗಳೂರು :  ರಾಜ್ಯ ಪೊಲೀಸ್‌ ಇಲಾಖೆಗೆ ಕಪ್ಪು ಚುಕ್ಕೆಯಾಗಿರುವ ಚಡಚಣ ಪ್ರಕರಣದಲ್ಲಿ ಚಡಚಣ ಸಹೋದರರನ್ನು ಹತ್ಯೆಗೈಯಲು ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ನಿಯೋಜನೆಗೊಂಡಿದ್ದನ್ನು ರದ್ದುಗೊಳಿಸಿ ಸಬ್‌ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಗೋಪಾಲ ಹಳ್ಳೂರನನ್ನು ‘ಹತ್ಯೆ ಕರ್ತವ್ಯ’ಕ್ಕೆ ನಿಯೋಜಿಸಲಾಗಿತ್ತು.

ಹೌದು, ಇಂತಹದೊಂದು ಆಘಾತಕಾರಿ ವಿಚಾರವನ್ನು ಸಿಐಡಿ ತನಿಖಾ ತಂಡ ಧರ್ಮರಾಜ ನಕಲಿ ಎನ್‌ಕೌಂಟರ್‌ ಹತ್ಯೆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದ್ದು, ಖುದ್ದು ಗೋಪಾಲ ಹಳ್ಳೂರ ಹೇಳಿಕೆ ನೀಡಿದ್ದಾನೆ.

2017ರ ಅಕ್ಟೋಬರ್‌ 29ರಂದು ವಿಜಯಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಇತ್ತು. ಕಾರ್ಯಕ್ರಮದ ಬಂದೋಬಸ್‌್ತ ಕರ್ತವ್ಯಕ್ಕೆ ಚಡಚಣ ವೃತ್ತ ಮಹಾ ನಿರೀಕ್ಷಕ ಅಸೋದೆ, ಡಿವೈಎಸ್ಪಿ ಹಾಗೂ ನನ್ನನ್ನು ನಿಯೋಜಿಸಲಾಗಿತ್ತು. ಅ.30ರಂದು ಧರ್ಮರಾಜನನ್ನು ಎನ್‌ಕೌಂಟರ್‌ ಮಾಡಲು ಮೊದಲೇ ಸಂಚು ರೂಪಿಸಿದ್ದರಿಂದ ಅಸೋದೆ ಅವರು ನನ್ನ ಮೋದಿ ಮೋದಿ ಬಂದೋಬಸ್‌್ತ ಕರ್ತವ್ಯಕ್ಕೆ ಹೋಗುವುದನ್ನು ರದ್ದುಗೊಳಿಸಿದ್ದರು. ಅಸೋದೆ ಅವರು ನನಗೆ ಕರೆ ಮಾಡಿ, ‘ನಾನು ಮತ್ತು ಡಿಎಸ್‌ಪಿ ಅವರು ಬಂದೋಬಸ್‌್ತಗೆ ಹೋಗಿ ಅದೇ ದಿನ ರಾತ್ರಿ ಬಂದೋಬಸ್‌್ತ ಮುಗಿಸಿಕೊಂಡು ವಾಪಸ್‌ ಬಂದು ಚಡಚಣದಲ್ಲಿ ಇರ್ತೀವಿ’. ನೀನು ಅ.30ರಂದು ಬೆಳಗ್ಗೆ ಧರ್ಮರಾಜ ಚಡಚಣನನ್ನು ಎನ್‌ಕೌಂಟರ್‌ ಮಾಡಲು ಬೇಕಾದ ಸಿದ್ಧತೆ ಮಾಡಿಕೋ. ನಾನು ಹತ್ಯೆಯಾದ ಬಳಿಕ ಸ್ಥಳಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಅಲ್ಲದೆ, ‘ನೀನು ಚಿಂತೆ ಮಾಡಬೇಡ, ಅಸೋದೆ ಅವರು ಧರ್ಮರಾಜನನ್ನು ಎನ್‌ಕೌಂಟರ್‌ ಮಾಡುವಾಗ ನೀನು ಸಹ ಸ್ವಲ್ಪ ಗಾಯ ಮಾಡ್ಕೋ ಅಂತ ಹೇಳಿದರು. ಆಯ್ತು ಸರ್‌ ಅಂತ ಹೇಳಿ ನಾನು ಹೋದೆ ಎಂದು ಗೋಪಾಲ ಹಳ್ಳೂರು ತನಿಖಾಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾನೆ.

ನಾನು ವರ್ಗಾವಣೆಯಾದ ಬಳಿಕ ಮಹಾದೇವ ಭೈರಗೊಂಡನನ್ನು ಭೇಟಿಯಾಗಿದ್ದೆ. ಈ ವೇಳೆ ಧರ್ಮರಾಜನನ್ನು ಸುಮ್ಮನೆ ಬಿಟ್ಟರೆ ನಮಗೆ ಆಪತ್ತು ಐತೆ, ಏನಾದ್ರೂ ಮಾಡಿ ಅವರನ್ನ ಮುಗಿಸಿ ಬಿಡಿ. ನಾನು ಸಿಪಿಐ ಅಸೋದೆ ಸಾಹೇಬರಿಗೂ ಸಹಾ ತಿಳಿಸಿದ್ದೇನೆ ಎಂದು ಹೇಳಿದ. ಅದಕ್ಕೆ ನಾನು ಒಬ್ಬನೇ ಎನ್‌ಕೌಂಟರ್‌ ಮಾಡಿದರೆ ನನ್ನ ಮೇಲೆ ಕೇಸ್‌ ಆಗುತ್ತದೆ. ನನ್ನ ಜೀವನ ಎಲ್ಲಾ ಹಾಳಾಗುತ್ತದೆ ಎಂದು ಹೇಳಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಮಹಾದೇವ ಭೈರಗೊಂಡ ಮತ್ತು ದೇವರನಿಂಬರಗಿಯ ಭೀಮನಗೌಡ ‘ನಾವು ಮೇಲಿನವರು ಎಲ್ಲರನ್ನೂ ನೋಡ್ಕೋತಿನಿ. ರಾಜಕೀಯದವರನ್ನು ನೋಡ್ಕೋತಿನಿ ಎಂದು ಹೇಳಿ ನನಗೆ . 35 ಲಕ್ಷ ನೀಡಿದ್ದನು.

ನಂತರ ಸಿಪಿಐ ಅಸೋದೆ ಅವರ ಬಳಿ ಹೋಗಿ ಮಹಾದೇವ ಭೈರಗೊಂಡ ಹೇಳಿದ್ದ ವಿಚಾರ ಹೇಳಿದೆ. ಅಸೋದೆ ಅವರು ಸಾಹುಕಾರ್‌ ಎಲ್ಲಾ ಮೇಲಾಧಿಕಾರಿಗಳೊಂದಿಗೆ ಚೆನ್ನಾಗಿ ಸಂಬಂಧ ಇಟ್ಟುಕೊಂಡಿರುತ್ತಾನೆ. ಪೊಲೀಸರನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ ನಾನು ಒಂದು ದಿನ ರಜೆ ತಗೋತೀನಿ, ಅವತ್ತು ನೀನು ಎನ್‌ಕೌಂಟರ್‌ ಮಾಡು’ ಎಂದು ತಿಳಿಸಿದರು. ಆಗ ನಾನು ನೀವು ಬನ್ರಿ ಸರಾ ಒಟ್ಟಿಗೆ ಕೂಡಿ ಮಾಡೋಣ’ ಅಂದೆ. ನಾನು ಸಾಹುಕಾರರಿಗೆ ಮೊದಲಿನಿಂದಲೂ ಚೆನ್ನಾಗಿದ್ದೀನಿ. ಇಲ್ಲಿನ ಜನ ಹಾಗೂ ರಾಜಕೀಯದವರು ನನ್ನ ಮೇಲೆ ಅಲಿಗೇಷನ್‌ ಮಾಡುತ್ತಾರೆ. ನಾನು ಇರುತ್ತೀನಿ ಎಲ್ಲಾ ಜವಾಬ್ದಾರಿ ತಗೋತಿನಿ. ನೀನು ಕೆಲಸ ಮಾಡಿ ಮುಗಿಸು. ನಾನು ರಜಾ ಹಾಕಿ ಇಲ್ಲೇ ಬಿಜಾಪುರದಲ್ಲೇ ಇರ್ತೀನಿ ಕೆಲಸದ ಆದ ಬಳಿಕ ತಕ್ಷಣ ಬರ್ತೀನಿ’ ಅಂತ ಹೇಳಿದರು.

2017ರ ಅ.27ರಂದು ಅಸೋದೆ ಅವರ ಜತೆ ಡಿಎಸ್ಪಿ ಸಾಹೇಬರ ಕಚೇರಿಗೆ ಹೋಗಿದ್ದವು. ಈ ವೇಳೆ ಧರ್ಮರಾಜನ ಬಳಿ ಅಕ್ರಮ ಶಸ್ತ್ರಾಸ್ತ್ರ ಇದ್ದು, ದಾಳಿ ಮಾಡಲಾಗುವುದು ಎಂದು ಹೇಳಿದವು. ಅದಕ್ಕೆ ಡಿವೈಎಸ್ಪಿ ಅವರು ಆಗಲಿ ದಾಳಿ ಮಾಡಿ ಎಂದರು. ಬಳಿಕ ಸಿಪಿಐ ಅಸೋದೆ ಅವರು ನೀನು ಹೊರಗೆ ಇರು ಡಿಎಸ್‌ಪಿ ಅವರ ಮಾತನಾಡಿ ಬರುತ್ತೇನೆ ಎಂದರು ನನ್ನ ಹೊರಗೆ ಕಳುಹಿಸಿದರು. 10 ನಿಮಿಷದ ನಂತರ ಅಸೋದೆ ಅವರು ಹೊರಗೆ ಬಂದು ಡಿಎಸ್‌ಪಿ ಸಾಹೇಬರು ಒಪ್ಪಿಕೊಂಡಿದ್ದಾರೆ ಎಂದರು.

ಡಿಎಸ್‌ಪಿ ಕಚೇರಿಯಿದ ವಾಪಸ್‌ ಚಡಚಣಕ್ಕೆ ಬರುವಾಗ ಈ ಘಟನೆಯಲ್ಲಿ ಸಾಹುಕಾರ ಮೇಲಿನವರೆಲ್ಲರನ್ನೂ (ಹಿರಿಯ ಪೊಲೀಸ್‌ ಅಧಿಕಾರಿಗಳು) ನೋಡ್ಕೋತಾನೋ ಹೇಗೆ ಪಕ್ಕಾ ಕೇಳೋಣ ಎಂದು ಹೇಳಿ ನಾನು ಮತ್ತು ಸಿಪಿಐ ಸಾಹುಕಾರ ಭೈರಗೊಂಡನ ಹೊಸ ಮನೆ ಕಡಿಮಿಷಿನ್‌ ಬಳಿ ಹೋದೆವು.

ಅಸೋದೆಯೇ ಸಂಚು ರೂಪಿಸಿದ್ದು:

ಭೈರಗೊಂಡನ ಹೊಸ ಮನೆಯಲ್ಲಿ ಮಾತನಾಡಿಕೊಂಡು ಎನ್‌ಕೌಂಟರ್‌ ಬಗ್ಗೆ ಒಳಸಂಚು ರೂಪಿಸಿದೆವು. ಅಸೋದೆ ಸಾಹೇಬರು ಸಾಹುಕಾರನಿಗೆ ’ನೋಡ್ರಿ ಸಾಹುಕಾರ್ರೇ ನಾಳೆ ಹಳ್ಳೂರಗಾಗಲೀ, ಸಿಬ್ಭಂದಿಗಾಗಲೀ, ನನಗಾಗಲೀ ಯಾರಿಗೂ ತೊಂದರೆ ಆಗಬಾರದು, ತೊಂದರೆ ಆಗದಂತೆ ನೋಡ್ಕೋಳಾದಾದ್ರೆ ಆಗಲಿ’ ಅಂತ ಹೇಳಿದರು. ಅದಕ್ಕೆ ಭೈರಗೊಂಡ ’ಸರಾ ನಾನು ಮೇಲಿನವರನ್ನೂ ನೋಡಿಕೊಂಡಿದ್ದೀನಿ. ನೀವು ಏನು ಚಿಂತೆ ಮಾಡಬೇಡಿ, ನೀವು ಹೊಡೀರಿ ಸರಾ, ಮಿಕ್ಕಿದೆಲ್ಲಾ ನು ನೋಡ್ಕೋತೀನಿ ಅಂದನು. ಅದಕ್ಕೆ ಸಿಪಿಐ ಸಾಹೇಬರು ಆಯ್ತು ಎಂದು ಒಪ್ಪಿಕೊಂಡರು.

ಹಿರಿಯ ಅಧಿಕಾರಿ ಮೇಲೆ ತೂಗುಕತ್ತಿ!

2017ರ ಅಕ್ಟೋಬರ್‌ 24ರಂದು ಭೈರಗೊಂಡನ ಸ್ನೇಹಿತ ಉಮರ್‌ನನ್ನು ಭೇಟಿಯಾಗಿ ’ಭೈರಗೊಂಡನ ಎನ್‌ಕೌಂಟರ್‌ ಬಗ್ಗೆ ಮಾತನಾಡಿರುವ ವಿಚಾರ ನಿಮಗೆ ಗೊತ್ತಾ’ ಎಂದಿದ್ದಕ್ಕೆ ’ಹೌದು ಸಾಹುಕಾರ ಎಲ್ಲಾ ಹೇಳಿದ್ದಾರೆ. ಮೇಲಿನವರು ಹೂಂ (ಹಿರಿಯ ಪೊಲೀಸ್‌ ಅಧಿಕಾರಿಗಳ ಬಗ್ಗೆ ಅನುಮಾನ) ಅಂದಿದ್ದಾರೆ ಎಂದರು. ಬಳಿಕ ನಾನು ಐಜಿಪಿ ಸಾಹೇಬರಿಗೆ ಈ ಬಗ್ಗೆ ಭೇಟಿ ಮಾಡಿ ಅಲ್ಲಿಂದ ವಾಪಸ್‌ ಚಡಚಣಕ್ಕೆ ರಾತ್ರಿ ಹೋದೆನು ಎಂದು ಗೋಪಾಲ್‌ ಹಳ್ಳೂರ ಹೇಳಿಕೆ ನೀಡಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ಅಧಿಕಾರಿ ಬಳಿ ಏನು ಮಾತನಾಡಲಾಗಿದೆ ಎಂಬುದನ್ನು ಹೇಳಲಾಗಿಲ್ಲ. ಈ ಬಗ್ಗೆ ಐಜಿಪಿ ಸಾಹೇಬರಿಗೆ ಭೇಟಿಯಾಗಿದ್ದೆ ಎಂಬ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಧರ್ಮರಾಜ್‌ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್‌ ಸಲ್ಲಿಸಿದ್ದು, ಇನ್ಸ್‌ಪೆಕ್ಟರ್‌ ಅಸೋದೆಯನ್ನು ಪ್ರಕರಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ಸ್‌ಪೆಕ್ಟರ್‌ ನೀಡುವ ಹೇಳಿಕೆ ಆಧಾರಿಸಿ ಇತರ ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಗುವುದು. ಇನ್ಸ್‌ಪೆಕ್ಟರ್‌ ಹೊರತುಪಡಿಸಿ ಯಾವ ಅಧಿಕಾರಿಗಳಿದ್ದಾರೆಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ಎಚ್‌.ಡಿ.ಆನಂದ್‌ಕುಮಾರ್‌, ಸಿಐಡಿ ಎಸ್ಪಿ

ವದರಿ : ಎನ್‌.ಲಕ್ಷ್ಮಣ್‌