ಪ್ರಜ್ವಲ್ ರೇವಣ್ಣ, ಎನ್‌ಡಿಎ ವಿರುದ್ಧ ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶ: ಸಾಮಾಜಿಕ ಜಾಲತಾಣದಲ್ಲೂ ಟೀಕೆ
ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹಾಸನ, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸೋಮವಾರ ಪ್ರತಿಭಟನೆಗಳು ನಡೆದರೆ, ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲೂ ಸಂಸದನ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬೆಂಗಳೂರು (ಏ.30): ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹಾಸನ, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸೋಮವಾರ ಪ್ರತಿಭಟನೆಗಳು ನಡೆದರೆ, ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲೂ ಸಂಸದನ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೇ ವೇಳೆ ಪ್ರಜ್ವಲ್ ಪ್ರಕರಣವನ್ನು ಮುಂದಿಟ್ಟುಕೊಂಡು ಜೆಡಿಎಸ್-ಬಿಜೆಪಿ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್ ಮುಖಂಡರು, ಈ ಸಂಬಂಧ ಮಿತ್ರಪಕ್ಷದ ನಾಯಕರು ಮೌನ ಮುರಿಯಬೇಕು ಎಂದು ಒತ್ತಾಯಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕಾಗುತ್ತಿದ್ದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರೆ ಹುಬ್ಬಳ್ಳಿ ಹಾಗೂ ಹೊಳೆನರಸೀಪುರದಲ್ಲಿ ಯುವ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರಜ್ವಲ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಲಾಯಿತು. ಇನ್ನು ತುಮಕೂರಲ್ಲಿ ಜಿಲ್ಲಾ ಕೊಳಗೇರಿ ಸಂಘಟನೆಗಳ ಹಿತರಕ್ಷಣಾ ಸಮಿತಿ, ಹಾಸನದಲ್ಲಿ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಪ್ರಜ್ವಲ್ ರೇವಣ್ಣ ಬಂಧಿಸುವಂತೆ ಒತ್ತಾಯಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಲಾಯಿತು.
ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ ಉಚ್ಚಾಟನೆಗೆ ನಿರ್ಧಾರ: ಎಚ್.ಡಿ.ಕುಮಾರಸ್ವಾಮಿ
ಬಿಜೆಪಿ ವಿರುದ್ಧವೂ ಕಿಡಿ: ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವಿರುದ್ಧ ಕಿಡಿಕಾರುವ ಜತೆ ಜತೆಗೇ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕರ ವಿರುದ್ಧವೂ ಟೀಕಾ ಪ್ರಹಾರ ಆರಂಭಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಬಿಜೆಪಿ ನಾಯಕರು ತಮ್ಮ ನಿಲುವೇನು ಎಂಬುವುದನ್ನು ಸ್ಪಷ್ಟಪಡಿಸಬೇಕು. ವಿಜಯೇಂದ್ರ, ಆರ್.ಅಶೋಕ್ ಮತ್ತಿತರ ಬಿಜೆಪಿ ನಾಯಕರು ಮೌನಮುರಿಯಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.
‘ಸಂಸದ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮಹಿಳಾ ದೌರ್ಜನ್ಯಗಳ ಎಲ್ಲಾ ದಾಖಲೆಯನ್ನು ಮುರಿದಿದ್ದಾರೆ. ಪ್ರಧಾನಿ ತಮ್ಮ ಜತೆಗಿದ್ದಾರೆ ಎಂಬ ಮದದಿಂದಲೇ ಅವರು ಈ ಕೃತ್ಯಗಳನ್ನು ಎಸಗಿದ್ದಾರೆ’ ಎಂದು ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಅಲಕಾ ಲಾಂಬಾ ಆರೋಪಿಸಿದ್ದು, ಇದಕ್ಕೆ ದನಿಗೂಡಿಸಿರುವ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಗೆ ಈ ಕುರಿತು ಮೊದಲೇ ಮಾಹಿತಿ ಇದ್ದರೂ ಪ್ರಜ್ವಲ್ ರೇವಣ್ಣಗೆ ಚುನಾವಣೆಯಲ್ಲಿ ಟಿಕೆಟ್ ನೀಡಿದರು ಎಂದು ಆರೋಪಿಸಿದ್ದಾರೆ.
ಜತೆಗೆ, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆಂದು ಹೇಳುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಈಗ ದಾರಿ ತಪ್ಪಿದ್ದು ಯಾರು? ಎಂದು ಕಾಲೆಳೆದಿದ್ದಾರೆ. ದಾರಿ ತಪ್ಪಿದ್ದು ನಿಮ್ಮ ಮನೆ ಮಗನೇ ಹೊರತು ಮಹಿಳೆಯರಲ್ಲ. ಪ್ರಜ್ವಲ್‌ನನ್ನು ಪಕ್ಷದಿಂದ ಉಚ್ಚಾಟಿಸುವುದು ದೊಡ್ಡ ವಿಷಯವಲ್ಲ. ಇದರ ಜತೆಗೆ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ್ ವಾದ್ರಾ ಅವರೂ ಇದೇ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಂಗಲಸೂತ್ರ ಕುರಿತು ಮಾತನಾಡುವ ಪ್ರಧಾನಿ ಅವರು ಈ ಪ್ರಕರಣದ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ವಸೂಲಿ ಗ್ಯಾಂಗ್ ನಡೆಸ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ
ಸಾಮಾಜಿಕ ಜಾಲತಾಣದಲ್ಲೂ ಕಿಡಿ: ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟ್ವಿಟರ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ಸಾರ್ವಜನಿಕರು, ಸಂಸದರೊಬ್ಬರು ಈ ರೀತಿಯ ಕೃತ್ಯದಲ್ಲಿ ತೊಡಗಿದ್ದು ನಾಚಿಗೆಗೇಡು, ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು, ಜೆಡಿಎಸ್ ಪಕ್ಷದಿಂದಲೂ ಉಚ್ಚಾಟಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.