ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ವಿಮಾನ ಸಂಚಾರಕ್ಕೆ ಆ.31 ರಂದು ಮುಹೂರ್ತ ಫಿಕ್ಸ್: ಇಲ್ಲಿದೆ ಪಕ್ಷಿ ನೋಟ
ಕನ್ನಡ ನಾಡಿನ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದ ಏರ್‌ಪೋರ್ಟ್‌ನಲ್ಲಿ ಆ.31ರಿಂದ ವಿಮಾನ ಸಂಚಾರ ಆರಂಭವಾಗಲಿದೆ.
ಶಿವಮೊಗ್ಗ (ಆ.29): ಕರ್ನಾಟಕದ ಮಲೆನಾಡಿದ ಹೆಬ್ಬಾಗಿಲು ಎಂದೇ ಪ್ರಸಿದ್ಧಿಯಾದ ಶಿವಮೊಗ್ಗ ನಗರದಲ್ಲಿ ಬಳಿ ನಿರ್ಮಿಸಲಾದ ವಿಮಾನ ನಿಲ್ದಾಣದಲ್ಲಿ ಆ.31 ರಿಂದ ವಿಮಾನ ಹಾರಾಟ ಮತತು ಸಂಚಾರ ಅಧಿಕೃತವಾಗಿ ಆರಂಭವಾಗಲಿದೆ. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಸುಮಾರು ಅರ್ಧ ವರ್ಷದ ಬಳಿಕ ವಿಮಾನ ಹಾರಾಟ ಆರಂಭವಾಗುತ್ತಿದ್ದು, ಸ್ಥಳೀಯರಲ್ಲಿ ಭಾರಿ ಸಂತಸದ ವಾತಾವರಣ ಮನೆ ಮಾಡಿದೆ.
ಹೌದು, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿ ಸುಮಾರು 775 ಎಕರೆ ಪ್ರದೇಶದಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ಬೃಹತ್ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಈ ವಿಮಾನ ನಿಲ್ದಾಣವನ್ನು ಫೆಬ್ರವರಿ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂದು ಉದ್ಘಾಟನೆ ಮಾಡಿದ್ದರು. ಆದರೆ, ವಿಮಾನ ಹಾರಾಟ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿತ್ತು. ಈವರೆಗೆ ಬರೋಬ್ಬರಿ 6 ತಿಂಗಳು ಪೂರ್ಣಗೊಂಡ ನಂತರ, ವಿಮಾನ ಸಂಚಾರಕ್ಕೆ ಆಗಸ್ಟ್ 31ಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಕನ್ನಡ ನಾಡಿನ ಪ್ರತಿಷ್ಠೆಯ ವಿಐಎಸ್ಎಲ್ ಕಾರ್ಖಾನೆ ಪುನಾರಂಭ: ಸಂಸದ ರಾಘವೇಂದ್ರ ವಿಡಿಯೋ ಶೇರ್
ಮೊದಲು ಬೆಂಗಳೂರು, ಶಿವಮೊಗ್ಗ ಸಂಚಾರ ಆರಂಭ: ಒಟ್ಟು 3.5 ಕಿಲೋಮೀಟರ್ ಉದ್ದದ ರನ್ ವೇ ಅತ್ಯಾಧುನಿಕ ಎಟಿಸಿ ಕಟ್ಟಡ, 4,630 ಚದರ ವಿಸ್ತೀರ್ಣದ ಟರ್ಮಿನಲ್ ಕಟ್ಟಡದ ಸೌಲಭ್ಯ ಹೊಂದಿದೆ. ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಲು ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಆದರೆ, ಈವರೆಗೆ ಕೇಂದ್ರದಿಂದ ಯಾವುದೇ ಉತ್ತರ ರಾಜ್ಯಕ್ಕೆ ಲಭ್ಯವಾಗಿಲ್ಲ. ಇನ್ನು ಶಿವಮೊಗ್ಗದಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಶಿವಮೊಗ್ಗ ಮೊದಲ ವಿಮಾನ ಹಾರಾಟ ನಡೆಸಲಿದೆ. ಇದಾದ ಬಳಿಕ ಗೋವಾ, ಚೆನ್ನೈ, ದೆಹಲಿ ಮಾರ್ಗಗಳಲ್ಲಿ ವಿಮಾನಯಾನ ಶುರುವಾಗಲಿದೆ.
ಹಗಲು- ರಾತ್ರಿ ಎರಡೂ ವೇಳೆ ವಿಮಾನ ಸಂಚಾರಕ್ಕೆ ಅನುಕೂಲ: ಇಂಡಿಗೋ, ಸ್ಟಾರ್ ಏರ್‌ಲೈನ್ಸ್, ಸ್ಪೈಸ್ ಜೆಟ್ ಮೊದಲಾದ ವಿಮಾನಯಾನ ಸಂಸ್ಥೆಗಳ ವಿಮಾನಗಳು ಶಿವಮೊಗ್ಗದಿಂದ ವಿವಿಧ ನಗರಗಳು, ಧಾರ್ಮಿಕ ಸ್ಥಳಗಳು, ವಾಣಿಜ್ಯ ನಗರಗಳಿಗೆ ಸಂಚಾರ ಮಾಡಲಿವೆ. ಮಧ್ಯ ಕರ್ನಾಟಕ ಹಾಗೂ ಮಲೆನಾಡು ಕರ್ನಾಟಕದ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಸಾಂಬಾರ ಪದಾರ್ಥ ಮೊದಲಾದವುಗಳ ಸಾಗಾಣಿಕೆಗೆ ಕಾರ್ಗೋ ವಿಮಾನ ನಿಲ್ದಾಣವಾಗಿಯೂ ರೂಪುಗೊಳ್ಳಲಿದೆ. ಹಗಲು ಮತ್ತು ರಾತ್ರಿ ಕಾರ್ಯಾಚರಣೆ ನಡೆಸುವ ವಿಮಾನ ನಿಲ್ದಾಣವಾಗಿದೆ. ಇದರಿಂದ ಸಾರ್ವಜನಿಕರ ಪ್ರಯಾಣಕ್ಕೆ ಮಾತ್ರವಲ್ಲದೇ ವ್ಯಾಪಾರ ವಹಿವಾಟು, ಆರ್ಥಿಕ ಚಟುವಟಿಕೆಗಳಿಗೂ ಅತ್ಯಂತ ಅನುಕೂಲ ಆಗಲಿದೆ.
ಬೆಂಗಳೂರು- ಶಿವಮೊಗ್ಗ ವಿಮಾನ ಟಿಕೆಟ್ ಬುಕಿಂಗ್ ಆರಂಭ: ಟಿಕೆಟ್ ದರ 3,999 ರೂ.
ಬೆಂಗಳೂರಿನಿಂದ 9.50ಕ್ಕೆ ನಿರ್ಗಮನ- ಶಿವಮೊಗ್ಗಕ್ಕೆ 11.05ಕ್ಕೆ ಆಗಮನ: "ವಿಮಾನಯಾನ ಸೇವೆಗಳ ಮೊದಲ ಹೆಜ್ಜೆಯಾಗಿ ಇಂಡಿಗೋ ಸಂಸ್ಥೆಯು ವಿಮಾನವು ಬುಧವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲ ಯಾನದಲ್ಲಿ ತಾವೂ ಪ್ರಯಾಣಿಸಲಿದ್ದು, ಜೊತೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳೂ ಇರಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ವಾಟರ್ ಸೆಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು" ಎಂದಿದ್ದಾರೆ.