ತುಮಕೂರು :  ಅಮಾವಾಸ್ಯೆ ದಿನ ಶ್ರೀಗಳು ಮಠ ಬಿಟ್ಟು ಹೊರಗೆ ಹೋಗುತ್ತಿರಲಿಲ್ಲ, ಅಂದು ಬೆಳಿಗ್ಗೆ 7 ಗಂಟೆಯಿಂದ ಮಠದ ಭಾಗದಲ್ಲಿರುವ ಮಂಚದ ಮೇಲೆ ಕುಳಿತು ಯಂತ್ರ ಚಿಕಿತ್ಸೆ ಮಾಡುತ್ತಿದ್ದರು. 

ಈ ಸಂಪ್ರದಾಯ ಅವರ ಗುರುಗಳಾದ ಉದ್ದಾನ ಶಿವಯೋಗಿಗಳಿಂದ ಬಂದದ್ದು, ಕಬ್ಬಿಣದ ದಬ್ಬಳದಲ್ಲಿ ಮಂತ್ರವನ್ನು ರೇಖಿಸಿದ ತಾಮ್ರದ ಹಾಳೆಯನ್ನು ಸುತ್ತಿ ತಾಯತ ಮಾಡಿ ಕಟ್ಟುತ್ತಾರೆ. ತಮ್ಮ ಕಷ್ಟಗಳಿಗೆ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆಯಿಂದ ಜನ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ನಂಬಿಕೆಯ ರಕ್ಷಾಕವಚ ಅದಕ್ಕಿರುವುದರಿಂದ ಜನರು ತಾಮುಂದು ಎಂದು ಬರುತ್ತಾರೆ. 

ಭಕ್ತರ  ದೃಷ್ಟಿಯಲ್ಲಿ ಇದು ತಾಮ್ರದ ತಗಡಲ್ಲ, ಗುರುಮಂತ್ರ. ಮಾನಸಿಕ ದುಗುಡಗಳಿಂದ ಬಿಡುಗಡೆ ಮಾಡುವ ದಿವ್ಯ ಸಂಜೀವಿನಿ. ಸರ್ವರೋಗ ನಿವಾರಕ ಎಂಬ ಗಾಢವಾದ ನಂಬಿಕೆ. ನೊಂದ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಸ್ಪರ್ಶ ಮಣಿ. ಭಕ್ತರು ಹೋಗುವವರೆಗೂ ಪೂಜ್ಯ ಶ್ರೀಗಳು ಮಂಚಬಿಟ್ಟು ಇಳಿಯುತ್ತಿರಲಿಲ್ಲ.