ಶಿರೂರು ಗುಡ್ಡ ಕುಸಿತ ದುರಂತದ 12ನೇ ದಿನದ ಕಾರ್ಯಚರಣೆ ಮುಂದುರೆದಿದ್ದು, ಕಣ್ಮರೆಯಾದವರ ಪತ್ತೆಗೆ ಶನಿವಾರ ಮುಳುಗು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಾರವಾರ (ಜು.28): ಶಿರೂರು ಗುಡ್ಡ ಕುಸಿತ ದುರಂತದ 12ನೇ ದಿನದ ಕಾರ್ಯಚರಣೆ ಮುಂದುರೆದಿದ್ದು, ಕಣ್ಮರೆಯಾದವರ ಪತ್ತೆಗೆ ಶನಿವಾರ ಮುಳುಗು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. 'ಉಡುಪಿ ಆಪತ್ಬಾಂದವ ಈಶ್ವರ ಮಲ್ಪೆ' ತಂಡ ಮೂರು ಪಾಯಿಂಟ್‌ಗಳಲ್ಲಿ 8 ಬಾರಿ ಡೈವ್ ಮಾಡಿದರೂ ಲಾರಿಯಾಗಲಿ, ಯಾರೊಬ್ಬರ ದೇಹವಾಗಲಿ ಪತ್ತೆಯಾಗಿಲ್ಲ. ನದಿಯ ಆಳದಲ್ಲಿ ರಾಶಿಬಿದ್ದ ಬಂಡೆಗಳು, ಮಣ್ಣು ಹಾಗೂ ನೀರು ಹರಿಯುತ್ತಿರುವ ವೇಗ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಡೈವಿಂಗ್ ಮಾಡುತ್ತಿದ್ದಾಗ ಹಗ್ಗ ಕೈಜಾರಿ ಈಶ್ವರ ಮಲ್ಪೆ ಗಂಗಾವಳಿ ನದಿಯಲ್ಲಿ ಸುಮಾರು 100 ಮೀ. ದೂರ ತೇಲಿಹೋದರು. ತಕ್ಷಣ ಎರಡು ಬೋಟ್‌ಗಳು ಧಾವಿಸಿ ಸುರಕ್ಷಿತವಾಗಿ ಕರೆತಂದಿದ್ದಾರೆ. 

ಕಾರ್ಯಾಚರಣೆ ಹೇಗಿತ್ತು?: ಗಂಗಾವಳಿ ನದಿಯಲ್ಲಿ ಲಾರಿಯಂತಹ ವಸ್ತುಗಳಿವೆ ಎಂದು ಗುರುತಿಸಿದ ಪಾಯಿಂಟ್‌ನ ಮೇಲ್ಬಾಗದಲ್ಲಿ ಒಂದು ಬೋಟ್ ಹಾಗೂ ಕೆಳಭಾಗದಲ್ಲಿ ಒಂದು ಬೋಟ್ ಲಂಗರು ಹಾಕಲಾಗಿತ್ತು. ಹಗ್ಗದ ಸಹಾಯ ದಿಂದ ಎರಡೂ ಬೋಟ್‌ಗಳ ನಡುವೆ ಈಶ್ವರ ಮಲ್ಪೆ ಸ್ಕೂಬಾ ಡೈವಿಂಗ್ ಸಲಕರಣೆಗಳೊಂದಿಗೆ ಡೈವ್ ಮಾಡಿದರು. ಇವರಿಗೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್, ಸೇನಾಪಡೆಗಳು ಬೆಂಬಲ ನೀಡಿದವು. ಜೊತೆಗೆ ಡೋನ್ ಕೂಡ ಕಾರ್ಯಾಚರಣೆಗೆ ಬಳಸಲಾಗಿತ್ತು. ಹೀಗೆ 3 ಪಾಯಿಂಟ್‌ಗಳಲ್ಲಿ ಈಶ್ವರ ಮಲ್ಪೆ ಶೋಧನಡೆಸಿದರು. ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಕಾರ್ಯಾಚರಣೆಯ ಮಾಹಿತಿ ಪಡೆದು ವೀಕ್ಷಿಸಿದರು. ಈ ನಡುವೆ ಸಂಸದ ಕಾಗೇರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಮಾಹಿತಿ ಪಡೆದರು. ದುರಂತ ನಡೆದು 12 ದಿನಗಳಾದರೂ ಲಾರಿ ಚಾಲಕ ಅರ್ಜುನ್, ಜಗನ್ನಾಥ ನಾಯ್ಕ, ಲೋಕೇಶ ಪತ್ತೆಯಾಗದೆ ಇರುವುದು ಅವರ ಕುಟುಂಬವನ್ನು ಆತಂಕಗೊಳಿಸಿದೆ.

ಮಣ್ಣಿನಡಿ ಕ್ಯಾಂಟೀನ್ ಅವಶೇಷ ಪತ್ತೆ: ಶಿರೂರು ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ದುರಂತದಲ್ಲಿ ಇನ್ನೂ ನಾಪತ್ತೆಯಾಗಿರುವ ಮೂವರ ಶೋಧ ಕಾರ್ಯಾಚರಣೆಗೆ ಮಳೆ, ನದಿಯ ನೀರಿನ ರಭಸ ಅಡ್ಡಿಯಾಗಿದೆ. ಈ ನಡುವೆ ದುರಂತದಲ್ಲಿ ಮಣ್ಣಿನಡಿ ಹೂತು ಹೋಗಿದ್ದ ಕ್ಯಾಂಟೀನ್‌ನ ಕೆಲವು ಅವಶೇಷಗಳು ಪತ್ತೆಯಾಗಿವೆ. ಕ್ಯಾಂಟೀನ್‌ನಲ್ಲಿದ್ದ ಬಕೆಟ್, ಅಡಿಪಾಯ ಹಾಗೂ ಪಕ್ಕದಲ್ಲಿದ್ದ ಗಿಡ ಮರಗಳು ಪತ್ತೆಯಾಗಿವೆ. ಬೂಮ್ ಪೋಕ್ಲೈನ್ ಮೂಲಕ ಮಣ್ಣು ತೆರವುಗೊಳಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸೇನಾಪಡೆ, ನೌಕಾಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ವಿಜಯೇಂದ್ರ ಒಬ್ಬ ಅಪ್ರಬುದ್ಧ ರಾಜಕಾರಣಿ, ಅವರ ಹಗರಣ ಶೀಘ್ರ ಬಹಿರಂಗ: ಡಿಕೆಶಿ ಘೋಷಣೆ

ಇದರೊಂದಿಗೆ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದಲ್ಲಿ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರೀಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಒಳಗೊಂಡಿರುವ ಡ್ರೋನ್‌ ಕಾರ್ಯಾಚರಣೆಯೂ ನಡೆಯುತ್ತಿದೆ. ಸದ್ಯಕ್ಕೆ ಎಲ್ಲ ಶೋಧ ತಂಡಗಳು ಪತ್ತೆ ಹಚ್ಚಿದ ಪ್ರಕಾರ ಕೇರಳದ ಚಾಲಕ ಅರ್ಜುನ್ ಇರುವ ಲಾರಿ ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣಿನಡಿಯಲ್ಲಿದೆ. ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಇನ್ನೂ ಪತ್ತೆಯಾಗಬೇಕಿದೆ. ನೌಕಾಪಡೆಯ ಮುಳುಗು ತಜ್ಞರು ಡೈವಿಂಗ್ ನಡೆಸಲು ಅವಿರತವಾಗಿ ಪ್ರಯತ್ನಿಸುತ್ತಿದ್ದರೂ ಗಂಗಾವಳಿ ನದಿ ನೀರು ಭಾರಿ ವೇಗದಲ್ಲಿ ಪ್ರವಹಿಸುತ್ತಿರುವುದು ಡೈವಿಂಗ್ ನಡೆಸಲು ಅಡ್ಡಿಯಾಗಿದೆ. ನೀರಿನ ರಭಸದ ವೇಗ ಕಡಿಮೆಯಾದಲ್ಲಿ ಡೈವಿಂಗ್ ನಡೆಸಲು ಸಾಧ್ಯವಾಗಲಿದೆ. ವಿವಿಧ ವಿಭಾಗಗಳ ಸುಮಾರು 600 ಪರಿಣತರು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.