ರಾಜ್ಯದಲ್ಲಿ ಬಿಸಿಲ ಝಳ ಮುಂದುವರಿದಿರುವ ನಡುವೆಯೇ ಮಳೆ ಕೂಡ ಮುಂದುವರಿದಿದ್ದು ಯಾದಗಿರಿ, ಕೋಲಾರ, ಚಿತ್ರದುರ್ಗ, ರಾಯಚೂರು, ಚಿಕ್ಕಮಗಳೂರು, ತುಮಕೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಕೆಲಕಾಲ ಸಾಧಾರಣದಿಂದ ಉತ್ತಮ ಮಳೆಯಾಗಿದೆ.
ಬೆಂಗಳೂರು(ಮೇ.14): ರಾಜ್ಯದ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಕೆಲಕಾಲ ಉತ್ತಮ ಮಳೆಯಾಗಿದ್ದು, ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿಯೊಬ್ಬ ಬಲಿಯಾಗಿದ್ದಾನೆ. ಭಾರೀ ಗಾಳಿ ಜತೆಗೆ ಸುರಿದ ಮಳೆ ಹಲವೆಡೆ ಭಾರೀ ಅವಾಂತರವನ್ನೂ ಸೃಷ್ಟಿಸಿದ್ದು, ರಾಯಚೂರಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದರೆ, ಚಿಕ್ಕಮಗಳೂರು ಮತ್ತು ತುಮಕೂರಲ್ಲಿ ಹಲವು ಮರಗಳು ಧರೆಗುರುಳಿವೆ.
ರಾಜ್ಯದಲ್ಲಿ ಬಿಸಿಲ ಝಳ ಮುಂದುವರಿದಿರುವ ನಡುವೆಯೇ ಮಳೆ ಕೂಡ ಮುಂದುವರಿದಿದ್ದು ಯಾದಗಿರಿ, ಕೋಲಾರ, ಚಿತ್ರದುರ್ಗ, ರಾಯಚೂರು, ಚಿಕ್ಕಮಗಳೂರು, ತುಮಕೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಕೆಲಕಾಲ ಸಾಧಾರಣದಿಂದ ಉತ್ತಮ ಮಳೆಯಾಗಿದೆ.
ಇಂದಿನಿಂದ 5 ದಿನ ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ..!
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಬಳಿ ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಿಡಿಲು ಬಡಿದು ಗೋವಿಂದಪ್ಪ (22) ಎಂಬ ಕುರಿಗಾಹಿ ಮೃತಪಟ್ಟಿದ್ದಾರೆ. ಗ್ರಾಮದ ಮಹ್ಮದ್ ಕಾಶಿಂ ಅವರ ಜಮೀನಲ್ಲಿ ಹಾಕಿರುವ ಕುರಿ ಹಟ್ಟಿಯಲ್ಲಿ ಮಲಗಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಈ ವೇಳೆ ಹಟ್ಟಿಯಲ್ಲಿದ್ದ 7 ಕುರಿಗಳು ಕೂಡ ಸಾವಿಗೀಡಾಗಿವೆ.
ಚಿಕ್ಕಮಗಳೂರಲ್ಲೂ ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಹಲವೆಡೆ ಸಾಧಾರಣ ಮಳೆಯಾಗಿದ್ದು, ಭಾರೀ ಗಾಳಿಯಿಂದಾಗಿ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಭಾರೀ ಗಾಳಿ ಸಹಿತ ಸುರಿದ ಮಳೆಯಿಂದಾಗಿ ಟಿಟಿಯೊಂದು ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದ 9 ಜನ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕಾರು ಪಲ್ಟಿ:
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಅಬ್ಬರಕ್ಕೆ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದು ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಗ್ರಾಮದಲ್ಲಿ ಭಾರೀ ಗಾಳಿಗೆ ಅಡಕೆ, ತೆಂಗಿನ ಮರಗಳೂ ಧರೆಗುರುಳಿವೆ.
