ಬೆಂಗಳೂರು(ಆ.01): ಮುಸ್ಲಿಮರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್‌ ಹಬ್ಬಕ್ಕೆ ಸಿದ್ಧತೆ ನಡುವೆಯೇ ರಾಜಧಾನಿಯಲ್ಲಿ ಕುರಿಗಳ ವ್ಯಾಪಾರ ಶುಕ್ರವಾರ ಭರ್ಜರಿಯಾಗಿ ನಡೆದಿದೆ. ಕಳೆದ ಹಲವು ವರ್ಷಗಳಿಂದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಕ್ರೀದ್‌ ಹಬ್ಬಕ್ಕೆ ಕುರಿಗಳ ಮಾರಾಟ ನಡೆಯುತ್ತದೆ. ಈ ವರ್ಷ ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿಯಿಂದ ಈದ್ಗಾ ಮೈದಾನದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರಲಿಲ್ಲ.

ಆದರೆ, ಶನಿವಾರ ಬಕ್ರೀದ್‌ ಹಬ್ಬ ಇರುವುದರಿಂದ, ನಗರದ ಜೆ.ಸಿ.ರಸ್ತೆ, ಫ್ರೇಜರ್‌ಟೌನ್‌ ದೊಡ್ಡಿ ಬಳಿ, ಮೈಸೂರು ರಸ್ತೆಯ ಪಿಆರ್‌ ಗ್ರೌಂಡ್‌ ಎದುರು, ನೆಲಮಂಗಲ ಸೇರಿದಂತೆ ವಿವಿಧೆಡೆ ವ್ಯಾಪಾರ ನಡೆಯಿತು. ನಗರದ ಹೊರ ವಲಯದಿಂದರೈತರು, ವ್ಯಾಪಾರಿಗಳು ಕುರಿಗಳನ್ನು ತಂದು ಮಾರಾಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಈದ್ಗಾ ಮೈದಾನದಲ್ಲಿ ಕುರಿ ಮಾರಾಟಕ್ಕೆ ಬ್ರೇಕ್‌

ಪ್ರತಿ ವರ್ಷ 7 ಸಾವಿರದಿಂದ 1 ಲಕ್ಷದ ವರೆಗೆ ಬೆಲೆ ಇರುತ್ತದೆ. ಈ ಬಾರಿ ಬೇಡಿಕೆ ಇದ್ದರೂ ಬೆಲೆ ಇಲ್ಲ. ಶುಕ್ರವಾರ ಒಳ್ಳೆಯ ವ್ಯಾಪಾರವಾಗಿದೆ. ಕೊರೋನಾ ಲಾಕ್‌ಡೌನ್‌ನಿಂದ ಈಗಾಗಲೇ ಆರ್ಥಿಕ ನಷ್ಟಕ್ಕೆ ಒಳಗಾಗಿರುವ ರೈತರು, ವ್ಯಾಪಾರಿಗಳು ಬಂಡವಾಳ ಹೂಡಲು ಮುಂದೆ ಬಂದಿಲ್ಲ. ಜನರು ಹೆಚ್ಚಿನ ಬೆಲೆ ತೆತ್ತು ಕೊಳ್ಳುವ ಸ್ಥಿತಿಯಲ್ಲೂ ಇಲ್ಲ ಎಂದು ವ್ಯಾಪಾರಿಗಳು ತಿಳಿಸಿದರು. ಇತರೆ ಜಿಲ್ಲೆಗಳಿಂದ ಆಗಮಿಸುತ್ತಿದ್ದ ರೈತರು, ವ್ಯಾಪಾರಿಗಳು ಹೆಚ್ಚು ಬಂದಿಲ್ಲ. ನಾವು 120 ಅಮೀನಗಡ, ಬಂಡೂರು ಮರಿಗಳನ್ನು ತಂದಿದ್ದೆವು. ಅಷ್ಟೂ ಮಾರಾಟವಾಗಿವೆ. ಬಂಡೂರು ಕುರಿಗೆ 85 ಸಾವಿರ ಬೆಲೆ ನಿಗದಿಪಡಿಸಿದ್ದೆವು. ಆದರೆ, 72 ಸಾವಿರಕ್ಕೆ ಖರೀದಿಯಾಯಿತು. ಕೊರೋನಾ ಇರುವುದರಿಂದ ಬೆಲೆ ಕಡಿಮೆಯಾಗಿದೆ. ಇಲ್ಲದಿದ್ದರೆ ಬಂಡೂರು ಕುರಿ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಹೋಗುತ್ತಿತ್ತು ಎಂದು ಕೆಂಗೇರಿಯ ರೈತರೊಬ್ಬರು ಹೇಳಿದರು.
ಬಕ್ರೀದ್‌ ಬಿಟ್ಟರೆ ನಮಗೆ ಬೇರೆ ದಿನಗಳಲ್ಲಿ ವ್ಯಾಪಾರ ಕಷ್ಟ ಸಾಧ್ಯ. ಹಬ್ಬಕ್ಕೂ ಮುನ್ನಾ ದಿನ ಶೇ.75-80ರಷ್ಟು ವ್ಯಾಪಾರವಾಗಿದೆ ಎಂದರು.