100 ಕೋಟಿ ಸನಿಹಕ್ಕೆ ಶಕ್ತಿ ಯೋಜನೆ ಪ್ರಯಾಣಿಕರು..!
ದಿನದಿಂದ ದಿನಕ್ಕೆ ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ ಸರಾಸರಿ 60ರಿಂದ 65 ಲಕ್ಷ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.

ಬೆಂಗಳೂರು(ನ.11): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಅಡಿಯಲ್ಲಿ 92 ಕೋಟಿ ಮಹಿಳಾ ಪ್ರಯಾಣಿಕರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದು, ಪ್ರತಿದಿನದ ಪ್ರಯಾಣಿಕರ ಆಧಾರದಲ್ಲಿ ಈ ತಿಂಗಳ ಅಂತ್ಯದೊಳಗೆ ಆ ಸಂಖ್ಯೆ 100 ಕೋಟಿ ದಾಟುವ ಕುರಿತು ಸಾರಿಗೆ ನಿಗಮಗಳು ಅಂದಾಜಿಸಿವೆ.
ದಿನದಿಂದ ದಿನಕ್ಕೆ ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ ಸರಾಸರಿ 60ರಿಂದ 65 ಲಕ್ಷ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಕಳೆದ ಜೂನ್ 11ರಂದು ಆರಂಭವಾದ ಶಕ್ತಿ ಯೋಜನೆ ಅಡಿಯಲ್ಲಿ ಈವರೆಗೆ 92.75 ಕೋಟಿ ಮಹಿಳಾ ಪ್ರಯಾಣಿಕರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಪ್ರತಿದಿನದ ಪ್ರಯಾಣಿಕರನ್ನು ಗಮನಿಸಿದರೆ ಮುಂದಿನ 12ರಿಂದ 13 ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 100 ಕೋಟಿ ದಾಟುವ ಸಾಧ್ಯತೆಗಳಿವೆ. ಅಲ್ಲದೆ, ನ. 9ಕ್ಕೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 2,200 ಕೋಟಿ ರು. ದಾಟಿದೆ.
ಶಕ್ತಿ ಯೋಜನೆ ಬೆನ್ನಲ್ಲೇ ಸಾರಿಗೆ ನೌಕರರಿಗೆ ಸಿಹಿಸುದ್ದಿ ಕೊಟ್ಟ ಕೆಎಸ್‌ಆರ್‌ಟಿಸಿ
ಈ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿರೋಧ ಪಕ್ಷಗಳ ಟೀಕೆಯ ನಡುವೆ ಹಾಗೂ ಹಲವು ಸವಾಲುಗಳ ನಡುವೆ ಶಕ್ತಿ ಯೋಜನೆ ಯಶಸ್ವಿಗೊಂಡಿದೆ. ಶೀಘ್ರದಲ್ಲಿ 100 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಸೇವೆ ಪಡೆಯುತ್ತಾರೆ. ಹೀಗಾಗಿ ನ. 17ರಂದು ವಿಶೇಷ ಕಾರ್ಯಕ್ರಮ ಆಯೋಜಿಸುವ ಚಿಂತನೆ ಮಾಡಲಾಗಿದೆ ಎಂದಿದ್ದಾರೆ.