ಮಂಗಳೂರು ಆಸ್ಪತ್ರೆಯಲ್ಲಿ ಹಿರಿಯ ಸಾಹಿತಿ ನಾ ಡಿಸೋಜ ನಿಧನ

87 ವರ್ಷದ ಹಿರಿಯ ಸಾಹಿತಿ ನಾ.ಡಿಸೋಜ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. 'ದ್ವೀಪ' ಕಾದಂಬರಿಯ ಲೇಖಕರಾಗಿದ್ದರು.

Senior Kannada writer Na DSouza passes away in Mangaluru Hospital mrq

ಮಂಗಳೂರು: 87 ವರ್ಷದ ಹಿರಿಯ ಸಾಹಿತಿ ನಾ.ಡಿಸೋಜ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾ.ಡಿಸೋಜ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದ ನಾ ಡಿಸೋಜಾ ಅವರು ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶರಾವತಿ ಮುಳುಗಡೆ ಪ್ರದೇಶದ ಹಿನ್ನೆಲೆ ಕಥನವಿದ್ದ ಇವರ 'ದ್ವೀಪ' ಕಾದಂಬರಿ ಸಿನಿಮಾ ಆಗಿತ್ತು. ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಇರುವ ಪಾರ್ಥಿವ ಶರೀರ ನಾಳೆ ಸಂಜೆ ಸಾಗರಕ್ಕೆ ತರುವ ನಿರೀಕ್ಷೆಗಳಿವೆ. 

ಮೃತ ನಾ.ಡಿಸೋಜ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸಾಗರದ ನಗರಸಭೆ ಆವರಣದಲ್ಲಿರುವಂತ ಗಾಂಧಿ ಮೈದಾನದಲ್ಲಿ ಡಿಸೋಜಾ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜನವರಿ 7ರಂದು ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ನಾ.ಡಿಸೋಜ ಅವರ ಪುತ್ರ ನವೀನ್‌ ಡಿಸೋಜ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಂದೆಯ ನಿಧನದ ಮಾಹಿತಿ ಪ್ರಕಟಿಸಿದ್ದಾರೆ. ಹಿರಿಯ ಸಾಹಿತಿ ನಾ.ಡಿಸೋಜ  ನಿಧನದ ವಿಷಯ ತಿಳಿಯುತ್ತಿದ್ದಂತೆ ರಾಜ್ಯದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ನಾ ಡಿಸೋಜ ಅವರ ಪುತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಇದ್ದುದರಿಂದ ಅವರಿಗೆ ಮಂಗಳೂರಿನ ನಂಟು ಬಹುವಾಗಿತ್ತು. ಇಲ್ಲಿನ ಸಾಹಿತ್ಯ ವಲಯದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದರು.
ಮಂಗಳೂರಿನ ಸಂದೇಶ ಪ್ರತಿಷ್ಠಾನವು ಪ್ರತಿವರ್ಷ ಕೊಡ ಮಾಡುವ ಸಾಧಕರ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಅವರು ಕಾರ್ಯ ನಿರ್ವಹಿಸಿದ್ದರು. ಮೂರು ವರ್ಷಗಳ ಹಿಂದಷ್ಟೇ ಅನಾರೋಗ್ಯದ ಕಾರಣದಿಂದಾಗಿ ಆ ಜವಾಬ್ದಾರಿಯಿಂದ ನಿವೃತ್ತಿ ಪಡೆದುಕೊಂಡಿದ್ದರು. ಮಂಗಳೂರು ಸೇರಿದಂತೆ ಕರಾವಳಿಯ ವಿವಿಧ ಕಾಲೇಜುಗಳು, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಅವರು ಉಪನ್ಯಾಸ ನೀಡಿದ್ದಾರೆ.

ನವೀನ್ ಡಿಸೋಜಾ ಅವರ ಪೋಸ್ಟ್

ನಮ್ಮ ಪೂಜ್ಯ ತಂದೆ ಖ್ಯಾತ ಸಾಹಿತಿ, Dr ನಾ ಡಿಸೋಜ ಅವರು ಇಂದು 05.01.2025 ಸಂಜೆ 7.50 ಕ್ಕೆ ಅನಾರೋಗ್ಯದ ಕಾರಣ ಮಂಗಳೂರಿನ Father Muller ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಾಳೆ ಮಧ್ಯಾಹ್ನದ ನಂತರ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು. 
- ಇಂತಿ ಅವರ ಕುಟುಂಬ

Latest Videos
Follow Us:
Download App:
  • android
  • ios