ಬೆಂಗಳೂರು(ಸೆ.19): ಹಿರಿಯ ಪತ್ರಕರ್ತ ನಾಗರಾಜ್‌ ದೀಕ್ಷಿತ್‌ (55) ಅವರು ಹೃದಯಾಘಾತದಿಂದ ಬೆಂಗಳೂರಿನ ನಿವಾಸದಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.

ಕಳೆದ ಮೂರು ದಶಕಗಳಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ನಾಗರಾಜ್‌ ದೀಕ್ಷಿತ್‌ ಮಂಡ್ಯದ ಸ್ಥಳೀಯ ಪತ್ರಿಕೆಯಿಂದ ವೃತ್ತಿ ಬದುಕು ಆರಂಭಿಸಿದ್ದರು. ಬಳಿಕ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು ಗುರುವಾರ ರಾತ್ರಿ ಹೃದಯಾಘಾತದಿಂದ ಕುಮಾರಸ್ವಾಮಿ ಬಡಾವಣೆಯ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಸಂಬಂಧಿಕರು, ಗೆಳೆಯರನ್ನು ಅಗಲಿದ್ದಾರೆ.

ಪಳಗಿದ ಪತ್ರಕರ್ತರಾಗಬೇಕೆ..? ಇಲ್ಲಿದೆ ಒಂದು ಸುವರ್ಣಾವಕಾಶ

ನಾಗರಾಜ್‌ ದೀಕ್ಷಿತ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿ ಹಲವರು ಗಣ್ಯರು ಕಂಬನಿ ಮಿಡಿದಿದ್ದಾರೆ. ಮೃತರ ಕೊರೋನಾ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು ಶುಕ್ರವಾರ ಸಂಜೆ ಬನಶಂಕರಿ ವಿದ್ಯುತ್‌ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.