Asianet Suvarna News Asianet Suvarna News

2 ವಾರ ಸೆಮಿ ಲಾಕ್ಡೌನ್‌: ಸರ್ಕಾರಕ್ಕೆ ಸಮಿತಿ ಶಿಫಾರಸು!

2 ವಾರ ಸೆಮಿ ಲಾಕ್ಡೌನ್‌: ಸರ್ಕಾರಕ್ಕೆ ಸಮಿತಿ ಶಿಫಾರಸು| 10 ದಿನದಲ್ಲಿ ರಾಜ್ಯದಲ್ಲಿ ದೈನಂದಿನ ಸೋಂಕು 3500ಕ್ಕೇರಿಕೆ| ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸಂಭವ| ಶಾಲೆ, ಕಾಲೇಜು, ಜಿಮ್‌, ಈಜುಕೊಳ ಮುಚ್ಚಿ| ಸಭೆ, ಸಮಾರಂಭ, ಜಾತ್ರೆ ನಿರ್ಬಂಧ ವಿಧಿಸಿ: ಸಲಹೆ

Semi Lockdown For Two Weeks In Karnataka committee Reccomends The Govt pod
Author
Bangalore, First Published Mar 21, 2021, 7:23 AM IST

ಬೆಂಗಳೂರು(ಮಾ.21): ರಾಜ್ಯದಲ್ಲಿ ಕೋವಿಡ್‌ ಸೋಂಕು ಪ್ರಮಾಣ ಮುಂದಿನ ಒಂದೆರಡು ವಾರಗಳಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ತಜ್ಞರು ರಾಜ್ಯ ಸರ್ಕಾರಕ್ಕೆ ನೀಡಿದ್ದು, ತಕ್ಷಣ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಅಪಾಯ ಎದುರಾಗಬಹುದು ಎಂಬ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಸೋಂಕಿನ ವೇಗದ ಗತಿ ನಿಯಂತ್ರಣಕ್ಕಾಗಿ ತಕ್ಷಣ ಎರಡು ವಾರ ಕಾಲ ಶಾಲೆ, ಕಾಲೇಜುಗಳು, ಜಿಮ್‌, ಈಜುಕೊಳಗಳನ್ನು ಬಂದ್‌ ಮಾಡುವುದು ಸೇರಿದಂತೆ ವಿವಿಧ ಸೀಮಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರೂಪದ ಶಿಫಾರಸು ಮಾಡಿದೆ.

ಆತಂಕದ ವಿಚಾರವೆಂದರೆ ಮುಂದಿನ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ದಿನನಿತ್ಯದ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ 3500ರ ಗಡಿ ದಾಟುವ ಸಾಧ್ಯತೆ ಇದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ. ಹಾಗಾದಲ್ಲಿ ಕಳೆದ ವರ್ಷ ಸಂಭವಿಸಿದ ಚಿತ್ರಣವೇ ಪುನರಾವರ್ತನೆಗೊಳ್ಳುವ ಅಪಾಯವಿದೆ. ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳೂ ಲಭ್ಯವಾಗದೇ ಇರಬಹುದು ಎನ್ನಲಾಗಿದೆ.

ಹಾಗಾಗಿ ಸೋಂಕು ನಿಯಂತ್ರಣಕ್ಕೆ ಈಗಲೇ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರುತ್ತದೆ. ಕನಿಷ್ಠ ಎರಡು ವಾರಗಳ ಕಾಲ ರಾಜ್ಯಾದ್ಯಂತ ಶಾಲೆ, ಕಾಲೇಜು, ಈಜುಕೊಳ, ಜಿಮ್‌ಗಳನ್ನು ಬಂದ್‌ ಮಾಡಬೇಕು. ಸಭೆ, ಸಮಾರಂಭ, ವಿವಾಹ, ಜಾತ್ರೆ ಸೇರಿದಂತೆ ಎಲ್ಲಾ ಒಳಾಂಗಣ ಹಾಗೂ ಹೊರಾಂಗಣ ಕಾರ್ಯಕ್ರಮಗಳಲ್ಲಿ ಕ್ರಮವಾಗಿ 100 ಮತ್ತು 200 ಜನರು ಮಾತ್ರ ಭಾಗವಹಿಸುವಂತೆ ಮಿತಿ ಹೇರಬೇಕು. ಚಿತ್ರಮಂದಿರಗಳಲ್ಲಿ ಶೇ.50ರಷ್ಟುಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು. ಮಾರುಕಟ್ಟೆ, ಮಾಲ್‌, ದೇವಾಲಯ, ಸೇರಿದಂತೆ ಎಲ್ಲೆಡೆ ಕಟ್ಟುನಿಟ್ಟಾಗಿ ಕೋವಿಡ್‌ ಮಾರ್ಗಸೂಚಿ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ.

ಈಗಾಗಲೇ ಚಿತ್ರಮಂದಿರಗಳಲ್ಲಿ ಶೇ.50ರಷ್ಟುಪ್ರೇಕ್ಷಕರಿಗೆ ಅವಕಾಶ ನೀಡಬೇಕೆಂಬ ವಿಷಯಕ್ಕೆ ವಿರೋಧ ವ್ಯಕ್ತವಾಗಿದೆ. ಇದೇ ರೀತಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ವಿರೋಧ ವ್ಯಕ್ತವಾಗಬಹುದು. ಹಾಗಂತ ಸರ್ಕಾರ ಕೈಕಟ್ಟಿಕೊಂಡು ಕುಳಿತರೆ ವಿಷಮಸ್ಥಿತಿ ಎದುರಿಸಬೇಕಾಗುತ್ತದೆ ಎಂದು ತಜ್ಞರು ಸ್ಪಷ್ಟಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿಡ್‌ ಮೊದಲ ಹಂತದಲ್ಲಿ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಿದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಹೆಚ್ಚಾಗಿ ಇರುತ್ತಿದ್ದ ಮಕ್ಕಳು ಸಾಮಾಜಿಕವಾಗಿ ತೆರೆದುಕೊಂಡಿರಲಿಲ್ಲ. ಈಗ ಶಾಲೆ, ಕಾಲೇಜುಗಳು ಆರಂಭಗೊಂಡಿರುವುದರಿಂದ ಎರಡನೇ ಅಲೆಯಲ್ಲಿ ವಿದ್ಯಾರ್ಥಿಗಳು, ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಹಾಗಂತ ಈಗಾಗಲೇ ಸೋಂಕಿಗೆ ಒಳಗಾಗಿರುವವರಿಗೆ ಮತ್ತೆ ಸೋಂಕು ಬರುವುದಿಲ್ಲ ಎನ್ನುವಂತಿಲ್ಲ. ಒಮ್ಮೆ ಸೋಂಕು ತಗುಲಿದ ಬಳಿಕ ವ್ಯಕ್ತಿಗೆ ರೋಗ ನಿರೋಧ ಶಕ್ತಿ ವೃದ್ಧಿಸಿ ಚೇತರಿಸಿಕೊಂಡಿದ್ದರೂ ಆ ಶಕ್ತಿ ಮೂರು ನಾಲ್ಕು ತಿಂಗಳು ಇರಬಹುದು. ಆ ನಂತರ ಮತ್ತೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದುವರೆಗೆ ಸೋಂಕಿಗೆ ಒಳಗಾಗದವರ ಜತೆಗೆ ಸೋಂಕು ತಗಲಿ ಗುಣಮುಖರಾಗಿರುವವರೂ ಕೂಡ ಎಚ್ಚರಿಕೆಯಿಂದ ಇರಬೇಕು. ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸರ್ಕಾರದ ನೀಡಿರುವ ಆದ್ಯತೆಯಂತೆ ಹಿರಿಯ ನಾಗರಿಕರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

10 ದಿನಗಳಲ್ಲಿ ನಿತ್ಯ 3500 ಕೇಸ್‌:

ರಾಜ್ಯದಲ್ಲಿ ಕೋವಿಡ್‌ 2ನೇ ಅಲೆ ಆರಂಭಗೊಂಡಿರುವುದು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಸಮಿತಿಯು ಶುಕ್ರವಾರ (ಮಾ.19) ರಾತ್ರಿ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಕಳೆದ 10 ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಕೋವಿಡ್‌ ಸೋಂಕು ಪ್ರಮಾಣದ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ.

ಮಾಚ್‌ರ್‍ನ ಮೊದಲ ಹತ್ತು ದಿನಗಳಲ್ಲಿ ನಿತ್ಯ ಕನಿಷ್ಠ 350ರಿಂದ ಗರಿಷ್ಠ 650ರ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದ ಸೋಂಕು ಸಂಖ್ಯೆ ನಂತರದ ದಿನಗಳಲ್ಲಿ 750ರಿಂದ 1800ರ ಗಡಿ ಸಮೀಪಿಸಿದೆ. ಕಳೆದ 10 ದಿನಗಳಲ್ಲಿ (ಮಾ.10ರಿಂದ 20) ಒಟ್ಟು 12,446 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಾ.10ರಿಂದ 15ರವರೆಗೆ ನಿತ್ಯ 25, 50 ನಂತರ 100ರ ಸಂಖ್ಯೆಯಲ್ಲಿ ಏರುತ್ತಾ ಬಂದ ಸೋಂಕು ಸಂಖ್ಯೆ ಮಾ.16ರಿಂದ 20ರವರೆಗೆ 150, 200ರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದೇ ಪ್ರಮಾಣದಲ್ಲಿ ಏರುತ್ತಾ ಹೋದರೆ ಇನ್ನೊಂದು ವಾರದಲ್ಲಿ ನಿತ್ಯ ಸುಮಾರು 2500, ಆ ನಂತರದ ವಾರದಲ್ಲಿ ನಿತ್ಯ 3500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇನ್ನೂ 6 ತಿಂಗಳು ಎಚ್ಚರ ವಹಿಸಿ

ಕೋವಿಡ್‌ ಎರಡನೇ ಅಲೆ ಆರಂಭವಾಗಿರುವುದರಿಂದ ನಿತ್ಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವುದು ಸಾಮಾನ್ಯ. ಈಗ ನಿತ್ಯ 1700ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಮುಂದಿನ 10 ದಿನಗಳಲ್ಲಿ ಇದು 3500 ದಾಟುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. 1918ರಲ್ಲಿ ಕಂಡುಬಂದಿದ್ದ ಸ್ಯಾನಿಷ್‌ ಫä್ಲ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಕೋವಿಡ್‌ ಕೂಡ ಎರಡು ವರ್ಷ ಕಾಡುವ ಸಾಧ್ಯತೆ ಇದೆ. ಹಾಗಾಗಿ ಇನ್ನೂ ಆರು ತಿಂಗಳು ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

- ಡಾ.ಮಂಜುನಾಥ್‌, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯ

Follow Us:
Download App:
  • android
  • ios