ಬೆಂಗಳೂರು(ಆ.28): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ಮೇರೆಗೆ ನಿಗಮದ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ವಸಂತನಗರದಲ್ಲಿನ ನಿಗಮದ ಕೇಂದ್ರ ಕಚೇರಿ ಮೇಲೆ ಗುರುವಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ 20 ಲಕ್ಷ ರು. ನಗದು ಮತ್ತು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸಿಬಿ ಮೂಲಗಳು ಹೇಳಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಭೂ ಒಡೆತನ ಯೋಜನೆಯಡಿ, ಭೂಮಿ ಖರೀದಿಸಿ ಪರಿಶಿಷ್ಟ ಪಂಗಡದ ಭೂರಹಿತ ಬಡವರಿಗೆ ಹಂಚಿಕೆ ಮಾಡಲಿದೆ. ಕಡಿಮೆ ಬೆಲೆ ಬಾಳುವ ಭೂಮಿಯನ್ನು ಭೂ ಮಾಲೀಕರಿಂದ ಹೆಚ್ಚಿನ ಬೆಲೆಗೆ ಖರೀದಿಸಲಾಗುತ್ತದೆ.

ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಮುಂದಾಗಿದ್ದ ಸರ್ಕಾರಿ ಅಧಿಕಾರಿ: ಎಸಿಬಿ ದಾಳಿ

ಮಧ್ಯವರ್ತಿಗಳೊಂದಿಗೆ ಸರ್ಕಾರಿ ಸಿಬ್ಬಂದಿ ಶಾಮೀಲಾಗಿ ಹಣವನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಪ್ರಕರಣ ಸಂಬಂಧ ನಿಗಮದ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುವುದು ಎಂದು ತಿಳಿದುಬಂದಿದೆ.