Asianet Suvarna News Asianet Suvarna News

ಪೀರ್‌ ಪಾಷಾ ಬಂಗ್ಲೆ ವಶಕ್ಕೆ ಸಿಎಂ ಬೊಮ್ಮಾಯಿಗೆ 25 ಶ್ರೀಗಳ ಮೊರೆ

ವಿಶ್ವದ ಪ್ರಥಮ ಸಂಸತ್‌ ಆಗಿರುವ ಮೂಲ ಅನುಭವ ಮಂಟಪ ಈಗಿನ ಪೀರ್‌ ಪಾಷಾ ಬಂಗ್ಲೆ ಆಗಿದ್ದು ತಕ್ಷಣ ಸಂರಕ್ಷಣೆ ಮಾಡಬೇಕು, ಪುರಾತತ್ವ ಉಲಾಖೆಯಿಂದ ಸಂಶೋಧನೆ ನಡೆಸಬೇಕು ಎಂದು ವೀರಶೈವ ಲಿಂಗಾಯತ ಮಠಾಧೀಶರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ. 

Seers seek survey of Peer Pasha Bangla say its Anubhava Mantapa gvd
Author
Bangalore, First Published Jun 6, 2022, 3:00 AM IST | Last Updated Jun 6, 2022, 3:00 AM IST

ಬೆಂಗಳೂರು (ಜೂ.06): ವಿಶ್ವದ ಪ್ರಥಮ ಸಂಸತ್‌ ಆಗಿರುವ ಮೂಲ ಅನುಭವ ಮಂಟಪ ಈಗಿನ ಪೀರ್‌ ಪಾಷಾ ಬಂಗ್ಲೆ ಆಗಿದ್ದು ತಕ್ಷಣ ಸಂರಕ್ಷಣೆ ಮಾಡಬೇಕು, ಪುರಾತತ್ವ ಉಲಾಖೆಯಿಂದ ಸಂಶೋಧನೆ ನಡೆಸಬೇಕು ಎಂದು ವೀರಶೈವ ಲಿಂಗಾಯತ ಮಠಾಧೀಶರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೇತೃತ್ವದಲ್ಲಿ 25ಕ್ಕೂ ಅಧಿಕ ಮಠಾಧೀಶರನ್ನು ಒಳಗೊಂಡ ನಿಯೋಗವು ಭಾನುವಾರ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಬೀದರ್‌ ಜಿಲ್ಲೆ ಬಸವಕಲ್ಯಾಣದಲ್ಲಿ ವಿಶ್ವದ ಮೊದಲ ಸಂಸತ್ತಾದ ಅನುಭವ ಮಂಟಪವನ್ನು 12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿದ್ದರು. 

ಈಗಿರುವ ಪೀರ್‌ ಪಾಷಾ ಬಂಗ್ಲೆ ಮೂಲ ಅನುಭವ ಮಂಟಪ ಎಂದು ದಾಖಲಾತಿಗಳಿಂದ ತಿಳಿದುಬಂದಿದೆ. ಆದ್ದರಿಂದ ಇದನ್ನು ಸಂರಕ್ಷಣೆ ಮಾಡಬೇಕು ಎಂದು ನಿಯೋಗ ಕೋರಿತು. ರಾಜ್ಯ ಸರ್ಕಾರ ತಕ್ಷಣ ಈ ಸ್ಥಳವನ್ನು ವಶಕ್ಕೆ ಪಡೆದು ಭಾರತೀಯ ಪುರಾತತ್ವ ಇಲಾಖೆಯಿಂದ ಸಂಶೋಧನೆ ಮಾಡಿಸಬೇಕು. ಅನುಭವ ಮಂಟಪದ ಜೊತೆಗೆ ಶರಣರ ಕುರುಹು ಇರುವ ಸ್ಥಳಗಳನ್ನು ಗುರುತಿಸಿ ವಿಶ್ವ ಸ್ಮಾರಕ ಮಾಡಲು ಅನುಭವ ಮಂಟಪ ಕಾರಿಡಾರ್‌ ಯೋಜನೆ ಜಾರಿಗೊಳಿಸಲು ಬಜೆಟ್‌ನಲ್ಲಿ ಐದು ಸಾವಿರ ಕೋಟಿ ರು. ಅನುದಾನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಬೀಜ, ಗೊಬ್ಬರ ಕೊರತೆಯಾಗದಂತೆ ಸಿಎಂ ಬೊಮ್ಮಾಯಿ ಖಡಕ್‌ ಎಚ್ಚರಿಕೆ!

ಬಸವಕಲ್ಯಾಣದ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಮತ್ತಿತರರು ನಿಯೋಗದಲ್ಲಿದ್ದರು.

ದಾಖಲಾತಿ ಸಲ್ಲಿಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಬೀದರ್‌ನ ತಡೋಳಾದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೀರ್‌ ಪಾಷಾ ಬಂಗ್ಲೆ ಹಿಂದೆ ಮೂಲ ಅನುಭವ ಮಂಟಪ ಆಗಿತ್ತು ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಪುರಾತತ್ವ ಇಲಾಖೆ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮೂಲ ಅನುಭವ ಮಂಟಪ ಇರುವ ಸ್ಥಳವನ್ನು ವಶಕ್ಕೆ ಪಡೆದು ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಜೂ.12ಕ್ಕೆ ಪಾದಯಾತ್ರೆ ನಡೆಸಬೇಕು ಎಂದು ಉದ್ದೇಶಿಸಲಾಗಿತ್ತು. ಜೂ.6ರಂದು ನಡೆಯಲಿರುವ ಚಿಂತನ- ಮಂಥನ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನವೋದ್ಯಮಗಳಿಗೆ ಸರ್ಕಾರದ ಬೆಂಬಲ ಸದಾ ಸಿಗಲಿದೆ: ಸಿಎಂ ಬಸವರಾಜ ಬೊಮ್ಮಾಯಿ

ಸಂಶೋಧನಾ ಕೇಂದ್ರ: 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮುಖಾಂತರ ನಮ್ಮ ಆಚಾರ, ವಿಚಾರ, ಸಂಸ್ಕೃತಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂಗೈಯಲ್ಲಿ ಇಷ್ಟಲಿಂಗ ಪೂಜೆ ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ. ಜಾತಿ ವ್ಯವಸ್ಥೆ ವಿರುದ್ಧ ಪ್ರಥಮವಾಗಿ ಹೋರಾಡಿದ್ದ ಸಮಯ ಇದಾಗಿತ್ತು. ಇದರ ಜೊತೆಗೆ ಮತ್ತಷ್ಟುನಿಖರ ವಿಷಯ ತಿಳಿಯಬೇಕೆಂದರೆ ನಿರಂತರ ಸಂಶೋಧನೆ ಅಗತ್ಯ. ಆದ್ದರಿಂದ ಸಂಬಂಧಪಟ್ಟಇಲಾಖೆಗಳನ್ನು ಒಗ್ಗೂಡಿಸಿ ಬಸವಕಲ್ಯಾಣದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ವಿಶ್ವದ ಪ್ರಪ್ರಥಮ ಸಂಸದೀಯ ಕ್ಷೇತ್ರ ಜಾಗತಿಕ ಕೇಂದ್ರ ಆಗಬೇಕೆಂಬುದು ರಾಜ್ಯದ ಮಠಾಧೀಶರ ಮತ್ತು ಜನತೆಯ ಒತ್ತಾಸೆಯಾಗಿದೆ. ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು.

Latest Videos
Follow Us:
Download App:
  • android
  • ios