Asianet Suvarna News Asianet Suvarna News

ಬೆಳಗಾವಿಯಲ್ಲಿ ಪಂಚಮಸಾಲಿಗಳ ಕಹಳೆ: 2ಎ ಮೀಸಲು, ನ. 28 ಗಡುವು!

ಬೆಳಗಾವಿಯಲ್ಲಿ ಪಂಚಮಸಾಲಿಗಳ ಕಹಳೆ| ಪಂಚಮಸಾಲಿಗೆ 2ಎ ಮೀಸಲು: ನ.28ರ ಗಡುವು| 1 ತಿಂಗಳಲ್ಲಿ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಡಿ.23ರಿಂದ ಬೆಂಗಳೂರಿಗೆ ಪಾದಯಾತ್ರೆ| ಮೀಸಲಾತಿಗೆ ಆಗ್ರಹಿಸಿ ಜಯಮೃತ್ಯುಂಜಯ ಶ್ರೀಗಳಿಂದ 7 ತಾಸು ಉಪವಾಸ

Seer fasts for revised Panchamsali reservation Gives deadline till November 28 pod
Author
Bangalore, First Published Oct 29, 2020, 8:09 AM IST

ಬೆಳಗಾವಿ(ಅ.29): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ನೀಡಬೇಕು, ಕೇಂದ್ರ ಸರ್ಕಾರವು ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಕೂಗು ಇದೀಗ ಮತ್ತಷ್ಟುತೀವ್ರಗೊಂಡಿದೆ. ಈ ಸಂಬಂಧ ಬುಧವಾರ ಬೆಳಗಾವಿಯ ಸುವರ್ಣವಿಧಾನಸೌಧದ ಎದುರು ಬೆಳಗ್ಗೆ 10ರಿಂದ ಸಂಜೆ 5ರವರೆಗೆ 7 ಗಂಟೆ ಕಾಲ ನಿರಶನ ನಡೆಸಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಮ್ಮ ಬೇಡಿಕೆ ಈಡೇರಿಕೆಗೆ ನ.28ರ ಗಡುವನ್ನೂ ವಿಧಿಸಿದ್ದಾರೆ. ಈ ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ಡಿ.23ರಿಂದ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಮೊದಲೇ ಘೋಷಿಸಿದ್ದಂತೆ ಶ್ರೀಗಳು ಬೆಳಗಾವಿ ನಗರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್‌.ಅಂಬೇಡ್ಕರ್‌, ಸಂಗೊಳ್ಳಿ ರಾಯಣ್ಣ ಹಾಗೂ ಹಿರೇಬಾಗೇವಾಡಿಯಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುವರ್ಣ ವಿಧಾನ ಸೌಧದ ಎದುರು ನಿರ್ಮಿಸಲಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ಸರ್‌ ಸಿದ್ದಪ್ಪ ಕಂಬಳಿಯವರ ಮಹಾ ವೇದಿಕೆಗೆ ಆಗಮಿಸಿ ಬೆಳಗ್ಗೆ 10ಕ್ಕೆ ನಿರಶನಕ್ಕೆ ಕುಳಿತರು.

ಪ್ರತಿಭಟನೆಯ ವಿಷಯ ಅರಿತ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಸರ್ಕಾರದ ಪ್ರತಿನಿಧಿಯಾಗಿ ಹೋರಾಟದ ವೇದಿಕೆಗೆ ಆಗಮಿಸಿ ಮುಖಂಡರ ಜತೆಗೆ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಬೇಡಿಕೆಗಳಿಗೆ ಸಂಬಂಧಿಸಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ. ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹೆಚ್ಚೇನು ಮಾತನಾಡಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರು ಸಮುದಾಯದ ಬೇಡಿಕೆಗಳ ಮನವಿ ಪತ್ರವನ್ನು ಶ್ರೀಗಳ ಮೂಲಕ ಸಚಿವರಿಗೆ ನೀಡಿದರು. ಸತ್ಯಾಗ್ರಹಕ್ಕೆ ಹರಿಹರ ಪೀಠದ ವಚನಾನಂದ ಶ್ರೀಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ ವಿನಯ್‌ ಕುಲಕರ್ಣಿ, ವಚನಾನಂದ ಶ್ರೀಗಳು ಕಳುಹಿಸಿದ ಧ್ವನಿ ಸಂದೇಶವನ್ನು ಪ್ರತಿಭಟನಾನಿರತರಿಗೆ ಕೇಳಿಸಿದರು.

ಡಿಸಿಎಂ ಸವದಿ ದೌಡು: ಮಧ್ಯಾಹ್ನ 4 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ಮೇರೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೋರಾಟದ ವೇದಿಕೆಗೆ ಆಗಮಿಸಿ ಶ್ರೀಗಳ ಜತೆ ಕೆಲಕಾಲ ಮಾತುಕತೆ ನಡೆಸಿದರು. ನಂತರ ಶ್ರೀಗಳನ್ನು ಭೇಟಿಯಾಗಿ ಸಮುದಾಯದ ಬೇಡಿಕೆಯ ಹೋರಾಟವು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ಪಂಚಮಸಾಲಿ ಸಮಾಜದ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಗಮನ ಸೆಳೆಯಲಾಗುವುದು. ಈಗಾಗಲೇ ಯಡಿಯೂರಪ್ಪ ಅವರು ಕರೆ ಮಾಡಿ ಎಲ್ಲ ಶಾಸಕರನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಜತೆಗೆ ಪೂರಕ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶ್ರೀಗಳು

ಉಪವಾಸ ಸತ್ಯಾಗ್ರಹ ಕೈಬಿಡಬೇಕು ಎಂದು ಮನವಿ ಮಾಡಿದರು. ನಂತರ ಶ್ರೀಗಳಿಗೆ ಎಳನೀರು ಕುಡಿಸುವ ಮೂಲಕ ಸತ್ಯಾಗ್ರಹ ಮುಕ್ತಾಯಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಯಬಸವ ಜಯ ಮೃತ್ಯುಂಜಯ ಶ್ರೀಗಳು, ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು. ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕುಲಶಾಸ್ತ್ರೀಯ ಅಧ್ಯಯನಕ್ಕೆ ಸಮಿತಿ ರಚಿಸಬೇಕು. ಮುಂಬರುವ ನ. 28ರೊಳಗೆ ಈ ಮೂರರ ಪೈಕಿ ಒಂದು ಬೇಡಿಕೆಯನ್ನಾದರೂ ಸರ್ಕಾರಗಳು ಈಡೇರಿಸಬೇಕು. ಇಲ್ಲದಿದ್ದರೆ ಡಿ.23ರಿಂದ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸಕರಾದ ಮಹಾಂತೇಶ ದೊಡಗೌಡರ, ಆನಂದ ಮಾಮನಿ, ಅನಿಲ ಬೆನಕೆ, ಅಭಯ ಪಾಟೀಲ, ಮುರಗೇಶ ನಿರಾಣಿ, ಲಕ್ಷ್ಮೇ ಹೆಬ್ಬಾಳಕರ್‌, ಮಾಜಿ ಸಚಿವ ವಿನಯ ಕುಲಕರ್ಣಿ, ಮಹಾಂತೇಶ ಕವಟಗಿಮಠ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಹೈಕೋರ್ಟ್‌ ಜನರಲ… ಅಡ್ವೋಕೆಟ್‌ ಬಿ.ಎಸ್‌.ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಸಂಜಯ ಪಾಟೀಲ ಇತರರು ಭಾಗಿಯಾಗಿದ್ದರು.

ಸಮುದಾಯದ ಹಕ್ಕೊತ್ತಾಯಗಳೇನು?

- ಪಂಚಮಸಾಲಿ ಸಮಾಜಕ್ಕೆ ಲಿಂಗಾಯತ ಪಂಚಮಸಾಲಿ ಜಾತಿ ಪ್ರಮಾಣ ಪತ್ರ ನೀಡಬೇಕು

- ಪಂಚಮಸಾಲಿ ಸಮಾಜವನ್ನು ಪ್ರವರ್ಗ 3ಬಿ ಯಿಂದ 2ಎಗೆ ವರ್ಗಾಯಿಸಬೇಕು.

- ಕೇಂದ್ರದ ಹಿಂದುಳಿದ ವರ್ಗಗಳ ಆಯೋಗದಲ್ಲಿ ಪಂಚಮಸಾಲಿ ಸೇರ್ಪಡೆ ಮಾಡಬೇಕು.

- ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ- ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ.

- ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಕ್ರಮವಾಗಿ ಚನ್ನಮ್ಮ ಹಾಗೂ ರಾಯಣ್ಣನ ಹೆಸರು ನಾಮಕರಣ ಮಾಡಬೇಕು.

- ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಗಾಗಿ ಡಾ.ಎಂ.ಎಸ್‌.ಸ್ವಾಮಿನಾಥನ್‌ ವರದಿ ಜಾರಿಗೆ ತರಬೇಕು.

- ಇತರೆ ಬಡ ಲಿಂಗಾಯತ ಉಪಜಾತಿಗಳಿಗೆ ಸೂಕ್ತ ಮೀಸಲಾತಿ ಒದಗಿಸಬೇಕು.

- ಬೈಲಹೊಂಗಲದ ರಾಣಿ ಚನ್ನಮ್ಮನವರ ಐಕ್ಯಮಂಟಪ, ಅಮಟೂರು ಬಾಳಪ್ಪ, ವಡ್ಡರ ಮಲ್ಲಣ್ಣ, ಬೆಳವಡಿ ಮಲ್ಲಮ್ಮ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರ ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕಗಳನ್ನಾಗಿ ಘೋಷಿಸಬೇಕು.

Follow Us:
Download App:
  • android
  • ios