ಬೆಂಗಳೂರು (ನ. 27): ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟ್‌ ಹ್ಯಾಕ್‌ ಮಾಡಿರುವುದರ ಹಿಂದೆ ವೈದ್ಯಕೀಯ ಸೀಟು ಬ್ಲಾಕಿಂಗ್‌ ಮಾಫಿಯಾ ಹಾಗೂ ಟ್ಯೂಷನ್‌ ಮಾಫಿಯಾ ಕೈವಾಡದ ಶಂಕೆ ವ್ಯಕ್ತವಾಗಿದೆ.

ವೆಬ್‌ಸೈಟ್‌ನಲ್ಲಿರುವ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸಿ ಖಾಸಗಿ ಜಾಲತಾಣಗಳಿಗೆ ಮಾರಾಟ ಮಾಡುವುದು ‘ಹ್ಯಾಕ್‌’ ಹಿಂದಿನ ಪ್ರಮುಖ ಉದ್ದೇಶವಾಗಿರಬಹುದು. ಹೀಗೆ, ಮಾಹಿತಿ ಪಡೆದ ಖಾಸಗಿ ಜಾಲತಾಣಗಳು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಟ್ಯೂಷನ್‌ಗಳತ್ತ ಸೆಳೆಯುವುದು ಮತ್ತು ಸೀಟ್‌ ಬ್ಲಾಕಿಂಗ್‌ ದಂಧೆಗೆ ಆಕರ್ಷಿತರಾಗುವಂತೆ ಮಾಡುವ ಹುನ್ನಾರವನ್ನು ಸೀಟ್‌ ಬ್ಲಾಕಿಂಗ್‌ ಮಾಫಿಯಾ ನಡೆಸಿರುವ ಸಾಧ್ಯತೆಯಿದ್ದು, ಈ ದಿಸೆಯಲ್ಲೇ ತನಿಖೆ ನಡೆಸುವಂತೆ ಕೋರಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಸೋಶಿಯಲ್ ಮೀಡಿಯಾದಲ್ಲಿ ಬೆಡ್‌ರೂಂ ವಿಡಿಯೋ; ಹನಿಟ್ರ್ಯಾಪ್ ಕಿಂಗ್‌ಪಿನ್ ಅರೆಸ್ಟ್!

ವೃತ್ತಿಪರ ಕೋರ್ಸ್‌ಗಳಾದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ರಾಜ್ಯದ ವೈದ್ಯಕೀಯ ಸೀಟು ಪಡೆಯುವುದಕ್ಕಾಗಿ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಕೆಇಎನಲ್ಲಿ ನೋಂದಣಿ ಮಾಡಿಕೊಂಡಿರುವ ದತ್ತಾಂಶಗಳನ್ನು ಕದಿಯಲಾಗಿದೆ.

ಕರ್ನಾಟಕ, ಒಡಿಶಾ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಮಾಹಿತಿಗಳನ್ನು ಲೀಡ್‌ಟ್ಯಾಪ್‌ ಮೀಡಿಯಾ ಆ್ಯಂಡ್‌ ಮಾರ್ಕೆಟಿಂಗ್‌ ಸಂಸ್ಥೆಯು ಹ್ಯಾಕ್‌ ಮಾಡಿದೆ ಎಂದು ಕೆಇಎ ಆಡಳಿತಾಧಿಕಾರಿಗಳು ದೂರು ದಾಖಲಿಸಿದ್ದಾರೆ. ಆದ್ದರಿಂದ ಹೊರರಾಜ್ಯದ ವಿದ್ಯಾರ್ಥಿಗಳ ಮಾಹಿತಿಗಳನ್ನು ಸಂಗ್ರಹಿಸಿ ರಾಜ್ಯದಲ್ಲಿರುವ ವೈದ್ಯಕೀಯ ಸೀಟುಗಳ ಬ್ಲಾಂಕಿಂಗ್‌ ದಂಧೆಗೆ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಈ ದುರುದ್ದೇಶದಿಂದಲೇ ಹ್ಯಾಕ್‌ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸೀಟು ಬ್ಲಾಕಿಂಗ್‌ ದಂಧೆ ಹೇಗೆ?:

ವೆಬ್‌ಸೈಟಿನಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿಗಳ ಮೊಬೈಲ್‌ ನಂಬರ್‌, ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯ ಅಂಕ, ಸಿಇಟಿ ಅಥವಾ ನೀಟ್‌ ರಾರ‍ಯಂಕ್‌, ವೈಯಕ್ತಿಕ ಮಾಹಿತಿಗಳಾದ ಆಧಾರ್‌ ಸಂಖ್ಯೆ, ವಿಳಾಸ ಸೇರಿದಂತೆ ಹಲವು ಮಾಹಿತಿಗಳನ್ನು ಕ್ರೋಢೀಕರಿಸಿರುತ್ತಾರೆ. ಈ ಸಂಪೂರ್ಣ ಮಾಹಿತಿಯನ್ನು ಖಾಸಗಿ ಜಾಲತಾಣಗಳು ಪಡೆದು, ಬೇರೆ ರಾಜ್ಯದ ವಿದ್ಯಾರ್ಥಿಗಳನ್ನು ಬಳಸಿ ಕರ್ನಾಟಕದಲ್ಲಿನ ವೈದ್ಯಕೀಯ ಸೀಟುಗಳನ್ನು ಬ್ಲಾಕ್‌ ಮಾಡಿ ಕಳ್ಳ ಮಾರ್ಗದ ಮೂಲಕ ಹಣ ಸಂಪಾದಿಸುವ ಉದ್ದೇಶ ಹೊಂದಿವೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಭ್ರಷ್ಟಾಚಾರ ಪ್ರಮಾಣ ಶೇ.20ರಷ್ಟು ಏರಿಕೆ!

ಮಾಹಿತಿ ತಿರುಚುವ ಸಾಧ್ಯತೆ

ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳನ್ನು ಕದಿಯುವುದು ಮಾತ್ರವಲ್ಲ, ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳನ್ನು ತಿರುಚುವ ಉದ್ದೇಶವೂ ಹ್ಯಾಕಿಂಗ್‌ನ ಹಿಂದೆ ಇರಬಹುದು. ಸಂಬಂಧಪಟ್ಟವಿದ್ಯಾರ್ಥಿಗಳ ಅಂಕಗಳು ಅಥವಾ ರಾರ‍ಯಂಕ್‌ಗಳನ್ನು ಮೇಲ್ದರ್ಜೆಗೇರಿಸಿ ದತ್ತಾಂಶಗಳನ್ನು ತಿರುಚುವ ಉದ್ದೇಶದಿಂದಲೂ ಹ್ಯಾಕ್‌ ಮಾಡಿರಬಹುದು. ಬೇರೆ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಸೀಟು ಪಡೆಯಲು ಅನುಕೂಲವಾಗುವಂತೆ ಅವರ ಮಾಹಿತಿ ತಿರುಚುವ ಉದ್ದೇಶ ಹೊಂದಿರಬಹುದು ಎಂದು ಈ ಹಿಂದೆ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು, ವೆಬ್‌ಸೈಟಿನ ಹ್ಯಾಂಕಿಂಗ್‌ನಲ್ಲಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ ಅಪ್‌ಲೋಡ್‌ ಮಾಡುವ ಪರೀಕ್ಷಾ ಪ್ರಾಧಿಕಾರದ ಅಧಿಕಾರಿ ಅಥವಾ ಸಿಬ್ಬಂದಿಯೇ ಪಾಲ್ಗೊಂಡಿರಲೂಬಹುದು. ಹೀಗಾಗಿ, ಕೂಲಂಕಷವಾಗಿ ತನಿಖೆ ನಡೆಸಿದರೆ ಘಟನೆ ಹಿಂದಿನ ಕೈಗಳು ಬಹಿರಂಗವಾಗಲಿವೆ ಎಂದು ಒತ್ತಾಯಿಸಿದ್ದಾರೆ.

ಟ್ಯೂಷನ್‌ ಮಾಫಿಯಾದಿಂದ ಕರೆ:

ಟ್ಯೂಷನ್‌ ಕೇಂದ್ರಗಳಿಂದ ಕರೆ ಹಾಗೂ ಸಂದೇಶಗಳು ಬಂದಿವೆ. ನಮ್ಮ ಸಂಪರ್ಕ ಸಂಖ್ಯೆಯನ್ನು ಯಾರು ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಆರೋಪಿಸಿ ಸಾವಿರಾರು ನೀಟ್‌ ಹಾಗೂ ಸಿಇಟಿ ಪರೀಕ್ಷೆ ಬರೆದಿದ್ದ ವೃತ್ತಿಪರ ಕೋರ್ಸ್‌ಗಳ ಆಕಾಂಕ್ಷಿಗಳು ಕೆಇಎಗೆ ಕರೆ ಮಾಡಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.

- ಎನ್‌.ಎಲ್‌. ಶಿವಮಾದು